ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಲ್ಲ | ಸುಳ್ಳು ವರದಿ ಸೃಷ್ಟಿ | ಪ್ರಕರಣ ಮುಚ್ಚಿ ಹಾಕಲು ಯತ್ನ
ಹುಬ್ಬಳ್ಳಿ: ಅಪರಾಧ ಕೃತ್ಯ ಎಸಗಿದವರಲ್ಲಿ ವೋಟ್ ಬ್ಯಾಂಕ್ ಇದೆ. ಈ ಕಾರಣದಿಂದಲೇ ಕರ್ನಾಟಕ ರಾಜ್ಯ ಸರ್ಕಾರ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರದವರನ್ನು ರಕ್ಷಣೆ ಮಾಡುವ ಕೆಲಸ ಮಾಡುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಆಪಾದಿಸಿದರು.
ಹಾನಗಲ್‌ನಲ್ಲಿ ಗ್ಯಾಂಗ್ ರೇಪ್ ಪ್ರಕರಣವನ್ನು ಖಂಡಿಸಿ ಶನಿವಾರ ಪ್ರತಿಭಟನೆ ಮಾಡುವ ವೇಳೆ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಸಿದ್ದರಾಮಯ್ಯನವರ ನೇತೃತ್ವದ ರಾಜ್ಯ ಸರ್ಕಾರದಲ್ಲಿ ಕ್ರಿಮಿನಲ್‌ಗಳಿಗೆ ಕುಮಕ್ಕು ಸಿಗುತ್ತಿದೆ. ಅಪರಾಧ ಕೃತ್ಯ ಎಸಗಿದವರಲ್ಲಿ ವೋಟ್ ಬ್ಯಾಂಕ್ ಇದೆ ಎಂದು ಅವರು ಕಿಡಿ ಕಾರಿದರು.
ಹಾನಗಲ್‌ನಲ್ಲಿ ನಡೆದ ಸಾಮೂಹಿಕ ಅತ್ಯಚಾರದಂತಹ ಘಟನೆಗಳು ಮೇಲಿಂದ ಮೇಲೆ ನಡೆಯುತ್ತಿವೆ. ಇಷ್ಟಾದರೂ ಪೊಲೀಸ್ ಇಲಾಖೆ ಕಣ್ಮುಚ್ಚಿ ಕುಳಿತಿದೆ. ಗ್ಯಾಂಗ್ ರೇಪ್ ಪ್ರಕರಣದಲ್ಲಿ ಸರಿಯಾದ ರೀತಿಯಲ್ಲಿ ತನಿಖೆ ನಡೆಯುತ್ತಿದೆ ಎನ್ನುತ್ತಾರೆ. ಹಾಗಾದರೆ ಇಬ್ಬರು ಪೊಲೀಸರನ್ನ ಅಮಾನತು ಮಾಡಿದ್ದು ಏಕೆ..? ಎಂದು ಅವರು ಪ್ರಶ್ನಿಸಿದರು.
ಅತ್ಯಾಚಾರಕ್ಕೊಳಗಾದ ಸಂತ್ರಸ್ತೆಗೆ ಸರಿಯಾದ ರೀತಿಯಲ್ಲಿ ಚಿಕಿತ್ಸೆ ಕೊಡವುದು ಇವರಿಂದ ಆಗಿಲ್ಲ. ಇಂತಹ ಘಟನೆಯಾದಾಗ ಸರ್ಕಾರವೇ ಸಂತ್ರಸ್ತರಿಗೆ ಚಿಕಿತ್ಸೆ ಕೊಡಿಸುವ ಕೆಲಸ ಮಾಡಬೇಕು. ಈ ಪ್ರಕರಣವನ್ನ ಎಸ್‌ಐಟಿಗೆ ತನಿಖೆಗೆ ಕೊಡಬೇಕೆಂದು ಅವರು ಆಗ್ರಹಿಸಿದರು.
ಹೋರಾಟಕ್ಕೆ ಸರ್ಕಾರ ಬಗ್ಗದೆ ಹೋದರೆ ಕಾನೂನು ಹೋರಾಟ ಮಾಡುತ್ತೇನೆ ಎಂದರು.
ಆಡಳಿತ ವ್ಯವಸ್ಥೆ ರೇಪಿಸ್ಟ್ ಜೊತೆಗೆ ನಿಂತಿದೆ. ಪೊಲೀಸರು ಪಕ್ಷಪಾತ ಮಾಡಿ, ಕೇಸ್ ಮುಚ್ಚುತ್ತಿದ್ದಾರೆ ಎಂದು ಆಪಾದಿಸಿದರು.
ಪೋಕ್ಸೋ ಕಾಯ್ದೆಯಲ್ಲಿ ರೇಪ್ ಎಂದು ದೂರು ಕೊಟ್ಟರೆ ಕೂಡಲೇ ಎಫ್ಐಆರ್ ಮಾಡಿ ತನಿಖೆ ಮಾಡಬೇಕು. ಆದರೆ ಅದನ್ನು ಕೂಡ ಮಾಡಲೇ ಇಲ್ಲ. ಪ್ರಕರಣ ನಡೆದು ಐದು ದಿನಕ್ಕೆ ದಾಖಲೆ ಮಾಡಲಾಗಿದ್ದು, ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲು ಮಾಡಿಲ್ಲ. ಸುಳ್ಳು ವರದಿ ಸೃಷ್ಟಿಸಿದ್ದಾರೆ. ಇದೆಲ್ಲ ನೋಡಿದರೆ ಪೊಲೀಸರು ಪ್ರಕರಣ ಮುಚ್ಚಿ ಹಾಕಲು ಯತ್ನಿಸುತ್ತಿದ್ದಾರೆ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ ಎಂದು ಬೊಮ್ಮಾಯಿ ಆಪಾದಿಸಿದರು.

