ದೇವರಹಿಪ್ಪರಗಿ: ದೇಶದಾದ್ಯಂತ ಮಂತ್ರಾಕ್ಷತೆ ವಿತರಣೆ ಶಾಂತಿಯುತವಾಗಿ ಜರುಗುತ್ತಿದೆ. ಯಾವುದೇ ಕಾರಣಕ್ಕೂ ಮಂತ್ರಾಕ್ಷತೆ ವಿತರಣೆ ಅಯೋಧ್ಯೆ ರಾಮಮಂದಿರ ಉದ್ಘಾಟನೆಯ ಸುಸಂದರ್ಭಕ್ಕೆ ಕಪ್ಪುಚುಕ್ಕೆ ಆಗಬಾರದು. ಆ ನಿಟ್ಟಿನಲ್ಲಿ ನಾವೆಲ್ಲ ಶಾಂತಿಯುತವಾಗಿ ಇರೋಣ ಎಂದು ಬಿಜೆಪಿ ಜಿಲ್ಲಾ ಧುರೀಣ ವಿಜುಗೌಡ ಪಾಟೀಲ ಹೇಳಿದರು.
ಪಟ್ಟಣದ ಕರಿದೇವರ ದೇವಸ್ಥಾನದಲ್ಲಿ ಜರುಗಿದ ಸಂಘ ಪರಿವಾರ, ಬಿಜೆಪಿಯ ಪ್ರಮುಖರು, ಹಾಗೂ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಕಳೆದ ದಿನಗಳಲ್ಲಿ ನಡೆದ ಕಹಿ ಘಟನೆಗಳನ್ನು ಮರೆಯೋಣ. ದಿ:೨೨ ರಂದು ಎಲ್ಲರೂ ಮನೆಮನೆಗಳಲ್ಲಿ ದೀಪ ಬೆಳಗಿಸಿ ಮತ್ತೊಮ್ಮೆ ದೀಪಾವಳಿ ಆಚರಿಸುವುದರ ಮೂಲಕ ಪ್ರಧಾನಿ ನರೇಂದ್ರ ಮೋದಿಯವರ ಕೈ ಬಲಪಡಿಸೋಣ ಎಂದರು.
ನಿವೃತ್ತ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಸಿ.ಕೆ.ಕುದರಿ ಮಾತನಾಡಿ, ಪಟ್ಟಣದ ಶಾಂತಿ ಕದಡುವ ಕಾರ್ಯಗಳಿಗೆ ಆಸ್ಪದ ನೀಡದಂತೆ ನಾವೆಲ್ಲ ಪ್ರಬುದ್ಧರಾಗಿ ವರ್ತಿಸೋಣ ಎಂದರು.
ಮನೆಮನೆಗೆ ಮಂತ್ರಾಕ್ಷತೆ ವಿತರಿಸುವ ಸಮಯದಲ್ಲಿ ಪಟ್ಟಣದ ೮ನೇ ವಾರ್ಡಿನಲ್ಲಿ ಘೋಷಣೆಗೆ ಸಂಬಂಧಿಸಿದಂತೆ ಸಂಘದ ಕಾರ್ಯಕರ್ತರು ಹಾಗೂ ಒಂದು ಸಮುದಾಯದ ನಡುವೆ ಕೈ-ಕೈ ಮಿಲಾಯಿಸಿ ವಿವಾದ ಉಂಟಾಗಿತ್ತು. ವಿವಾದವನ್ನು ಬಗೆಹರಿಸುವ ನಿಟ್ಟಿನಲ್ಲಿ ಸಂಘದ ಕಾರ್ಯಕರ್ತರು ಶನಿವಾರ ಪಟ್ಟಣದಲ್ಲಿ ಮಡಿವಾಳ ಮಾಚಿದೇವ ದೇವಸ್ಥಾನದಿಂದ ಕರಿದೇವರ ದೇವಾಲಯದವರೆಗೆ ಜಾಥಾ ಕೈಗೊಂಡರು. ಈ ಸಂದರ್ಭದಲ್ಲಿ ಪ್ರಮುಖರೇ ಉಳಿದ ಮನೆಗಳಿಗೆ ಮಂತ್ರಾಕ್ಷತೆ ವಿತರಿಸಿ ಸಮುದಾಯದ ಪ್ರಮುಖರೊಂದಿಗೆ ಸಭೆ ನಡೆಸಿ ವಿವಾದ ಕೊನೆಗೊಳಿಸಿದರು.
ಈ ಸಂದರ್ಭದಲ್ಲಿ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಬಂದೋಬಸ್ತ್ ಮಾಡಿ ಯಾವುದೇ ಅಹಿತಕರ ಘಟನೆ ಜರುಗದಂತೆ ನಿಗಾ ವಹಿಸಿತು.
ಬಿಜೆಪಿ ಜಿಲ್ಲಾ ಪ್ರಮುಖರಾದ ರಾಜು ಮಗಿಮಠ, ಪ್ರಭುಗೌಡ ಬಿರಾದಾರ(ಅಸ್ಕಿ), ಡಾ.ಬಾಬು ರಾಜೇಂದ್ರ ನಾಯಿಕ್, ಸುರೇಶಗೌಡ ಪಾಟೀಲ(ಸಾಸನೂರ), ವಿವೇಕಾನಂದ ಡಬ್ಬಿ, ಅಶೋಕ ಅಲ್ಲಾಪೂರ, ಶಿವಾನಂದ ಅವುಟಿ, ಬಸವರಾಜ ಹೂಗಾರ, ಗಾಯತ್ರಿ ದೇವೂರ, ಶಿಲ್ಪಾ ಕುದರಗೊಂಡ ಪಟ್ಟಣದ ಪ್ರಮುಖರಾದ ಬಾಬುಗೌಡ ಪಾಟೀಲ(ಜಿಡ್ಡಿಮನಿ), ಕಾಸುಗೌಡ ಬಿರಾದಾರ, ಶ್ರೀಶೈಲ ದೇಸಾಯಿ ಸಹಿತ ವಿಶ್ವ ಹಿಂದೂ ಪರಿಷತ್, ಸಂಘಪರಿವಾರ, ಬಿಜೆಪಿಯ ಪ್ರಮುಖರು, ಕಾರ್ಯಕರ್ತರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

