ಆಲಮಟ್ಟಿ: ಲಾಲ್ ಬಹಾದ್ದೂರ್ ಶಾಸ್ತ್ರಿ ಜಲಾಶಯ ವ್ಯಾಪ್ತಿಯ ಅಖಂಡ ವಿಜಯಪುರ ಜಿಲ್ಲೆಯ ಜನರ ಕುಡಿಯುವ ನೀರಿಗಾಗಿ ಕಾಲುವೆಗಳ ಮೂಲಕ ಕೆರೆ ತುಂಬಿಸಬೇಕು ಎಂದು ರಾಜ್ಯರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ನಿಂಗರಾಜ ಆಲೂರ ಆಗ್ರಹಿಸಿದರು.
ಶನಿವಾರ ಆಲಮಟ್ಟಿಯಲ್ಲಿರುವ ಶ್ರೀರಾಮಲಿಂಗೇಶ್ವರ ದೇವಸ್ಥಾನದಿಂದ ಪಾದಯಾತ್ರೆಯಲ್ಲಿ ಎಸ್‌ಬಿಐ ಬ್ಯಾಂಕ್ ಮಾರ್ಗವಾಗಿ ಕೃಷ್ಣಾ ಭಾಗ್ಯ ಜಲ ನಿಗಮದ ಮುಖ್ಯ ಅಭಿಯಂತರರ ಕಚೇರಿಗೆ ತೆರಳಿ ಮನವಿ ಅರ್ಪಿಸಿ ಮಾತನಾಡಿದರು.
ಕೃಷ್ಣಾ ಮೇಲ್ದಂಡೆ ಯೋಜನೆಯ ಅನುಷ್ಠಾನಕ್ಕಾಗಿ ಲಕ್ಷಾಂತರ ಎಕರೆ ಜಮೀನು, ನೂರಾರು ಊರುಗಳು ಮುಳುಗಡೆಯಾಗಿ ಲಕ್ಷಾಂತರ ಕುಟುಂಬಗಳು ಸಂತ್ರಸ್ಥರಾಗಿರುವ ಜಿಲ್ಲೆಯ ಜನ-ಜಾನುವಾರುಗಳಿಗೆ ಕುಡಿಯುವ ನೀರಿಗಾಗಿ ಪರದಾಡುವಂತೆ ಮಾಡಲು ಅಧಿಕಾರಿಗಳು ಕೃತಕ ಅಭಾವ ಸೃಷ್ಠಿಸುತ್ತಿದ್ದಾರೆ. ರಾಜ್ಯದಲ್ಲಿ ಮುಂಗಾರು-ಹಿಂಗಾರು ಮಳೆಗಳು ಸಮರ್ಪಕವಾಗಿ ಸುರಿಯದಿದ್ದರೂ ಕೃಷ್ಣೆಯ ಉಗಮಸ್ಥಾನ ಮಹಾಬಲೇಶ್ವರ ಮತ್ತು ಕೃಷ್ಣೆಯ ಉಪನದಿಗಳ ಜಲಾನಯನ ಪ್ರದೇಶದಲ್ಲಿ ಮಳೆಯಾಗಿದ್ದರಿಂದ ಕೃಷ್ಣೆಗೆ ನೀರು ಹರಿದುಬಂದು ಜನತೆಯ ದಾಹ ನೀಗಿಸುವಂತಾಗಿದೆ ಎಂದರು.
ಬರದ ಜಿಲ್ಲೆಯೆಂದೇ ಖ್ಯಾತಿ ಪಡೆದಿರುವ ವಿಜಯಪುರ ಜಿಲ್ಲೆಯಲ್ಲಿ ಬೃಹತ್ ಜಲಾಶಯ ನಿರ್ಮಿಸಿ ನೂರಾರು ಟಿಎಮ್‌ಸಿ ನೀರು ಸಂಗ್ರಹ ಮಾಡಿಕೊಂಡಿದ್ದರೂ ಜಿಲ್ಲೆಯ ಜನರಿಗೆ ನೀರು ಕೊಡಲು ಮಾತ್ರ ಮೀನ-ಮೇಷ ಎಣಿಸುವದೇಕೆ? ಆಲಮಟ್ಟಿ ಜಲಾಶಯದ ಸಹೋದರ ಜಲಾಶಯವಾಗಿರುವ ಬಸವಸಾಗರ ಜಲಾಶಯ ವ್ಯಾಪ್ತಿಯ ರೈತರು ನೀರು ಕೇಳಿದಾಗ ನೀರು ಕೊಡುವ ನೀವುಗಳು ಆಲಮಟ್ಟಿ ಜಲಾಶಯ ವ್ಯಾಪ್ತಿಯ ಜಿಲ್ಲೆಯ ಜನರಿಗೆ ನೀರು ಕೊಡಲು ಸಬೂಬು ಹೇಳುವದಾದರೂ ಏಕೆ ಎಂದು ಆಕ್ರೋಶವ್ಯಕ್ತಪಡಿಸಿದರು.
ಉಪ ಮುಖ್ಯ ಅಭಿಯಂತರ ಸುರೇಶ ಅವರಿಗೆ ರೈತ ಸಂಘಟನೆಯ ಪದಾಧಿಕಾರಿಗಳು ಆಲಮಟ್ಟಿ ಜಲಾಶಯ ವ್ಯಾಪ್ತಿಯ ಎಲ್ಲಾ ಕೆರೆಗಳನ್ನು ತುಂಬಿಸಲು ಕೂಡಲೇ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಇದಕ್ಕೆ ಉತ್ತರಿಸಿದ ಉಪ ಮುಖ್ಯ ಅಭಿಯಂತರರು ಇತ್ತೀಚೆಗಷ್ಟೇ ಕಾಲುವೆಗಳ ಮೂಲಕ ಕೆರೆಗಳನ್ನು ತುಂಬಿಸಲಾಗಿದೆ ಎಂದರು.
ಇದಕ್ಕೆ ಆಕ್ರೋಶಗೊಂಡ ರೈತರು ನಮ್ಮೊಂದಿಗೆ ನಡೆಯಿರಿ ಕಿರಿಶ್ಯಾಳ, ಶೀಕಳವಾಡಿ ಕೆರೆಗಳು ಸೇರಿದಂತೆ ಅವಳಿ ಜಿಲ್ಲೆಯ ಬಹುತೇಕ ಕೆರೆಗಳು ಖಾಲಿಯಾಗುತ್ತಿವೆ ಎಂದು ಅಧಿಕಾರಿಯನ್ನು ತರಾಟೆಗೆಗ ತಗೆದುಕೊಂಡರು.
ಈ ಸಂದರ್ಭದಲ್ಲಿ ಅಧಿಕಾರಿಗಳಾದ ಸಹಾಯಕ ಕಾರ್ಯಪಾಲಕ ಅಭಿಯಂತರುಗಳಾದ ಐ.ಎಲ್.ಕಳಸಾ, ಹೆರೂರ ಮಠ ಹಾಗೂ ರೈತ ಮುಖಂಡರಾದ ನಿಡಗುಂದಿ ತಾಲ್ಲೂಕು ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಅಧ್ಯಕ್ಷ ಸೀತಪ್ಪ ಗಣಿ, ಸಾಬಣ್ಣ ಅಂಗಡಿ, ವೆಂಕಟೇಶ ವಡ್ಡರ, ರವಿಶಂಕರ ಕೋತಿನ್, ರಮೆಶ ವಡ್ಡರ, ಪೀರಸಾಬ ನದಾಫ, ಶಶಿಕಾಂತ ಪಾಟೀಲ, ರಾಯವ್ವ ಮೇಟಿ, ಪಾರುಬಾಯಿ ಲಮಾಣಿ, ಶಾಂತವ್ವ ಮಡಿವಾಳರ, ಸುಭಾಸ ಚೋಪಡೆ, ಸಂಗಮೇಶ ಹೊನಕಟ್ಟಿ ಮೊದಲಾದವರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

