ಬಸವನಬಾಗೇವಾಡಿ: ಸಮಸ್ತ ಭಾರತೀಯರಿಗೆ ಅಯೋಧ್ಯ ಭವ್ಯ ಶ್ರೀರಾಮಮಂದಿರದಲ್ಲಿ ಶ್ರೀರಾಮನ ಮೂರ್ತಿ ಪ್ರಾಣ ಪ್ರತಿಷ್ಠಾನ ನಡೆಯುತ್ತಿರುವ ಸಂಗತಿ ಬಹಳ ಸಂತಸ, ಸಂಭ್ರಮ ತಂದುಕೊಟ್ಟಿದೆ. ಬಹಳ ದಿನಗಳ ಕನಸು ನನಸಾಗುತ್ತಿದೆ. ಇಡೀ ದೇಶವೇ ಸಂಭ್ರಮ ಪಡುತ್ತಿದೆ ಎಂದು ಹಿರೇಮಠದ ಶಿವಪ್ರಕಾಶ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಪಟ್ಟಣದ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಬಜರಂಗದಳ, ಮಾತೃಶಕ್ತಿ ಹಾಗೂ ದುರ್ಗಾವಾಹಿನಿಯ ಸಹಯೋಗದಲ್ಲಿ ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ಜ.೨೨ ರಂದು ನಡೆಯುತ್ತಿರುವ ಶ್ರೀರಾಮ ದೇವರ ಮೂರ್ತಿ ಪ್ರತಿಷ್ಠಾಪನೆಯಂಗವಾಗಿ ಶುಕ್ರವಾರ ಹಮ್ಮಿಕೊಂಡಿದ್ದ ರಾಮತಾರಕ ಹೋಮ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಅಯೋಧ್ಯೆಯಲ್ಲಿ ಶ್ರೀರಾಮನ ಮಂದಿರ ಬಹು ವರ್ಷಗಳ ಹಿಂದೆ ನಿರ್ಮಾಣವಾಗಬೇಕಿತ್ತು. ಕೆಲವರ ಕಾರಣದಿಂದಾಗಿ ಈ ಕಾರ್ಯ ನೆರವೇರಿರಲಿಲ್ಲ. ಇದೀಗ ಕಾನೂನು ಬದ್ಧವಾಗಿ ನಿರ್ಮಾಣ ಮಾಡಿದ್ದು ಸಂತೋಷದಾಯಕ ಸಂಗತಿ. ಈ ಮೊದಲು ಎಲ್ಲೆಡೆ ಬನಾಯೆಂಗೇ ಮಂದಿರ ಹಾಡು ಹಾಕಲಾಗುತ್ತಿತ್ತು. ಮುಂದಿನ ದಿನಗಳಲ್ಲಿ ಇದರ ಬದಲು ಬನ್ನಗಯಾ ಮಂದಿರ ಎಂಬ ಹಾಡು ಹಾಕಬೇಕಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಜ.೨೨ ರಂದು ಶ್ರೀರಾಮ ಭಾವಚಿತ್ರ ಪೂಜೆ ಮಾಡುವ ಜೊತೆಗೆ ದೀಪ ಬೆಳಗಿಸಬೇಕೆಂದು ಕರೆ ನೀಡಿದ್ದಾರೆ. ಅವರ ಕರೆಯನ್ನು ಎಲ್ಲರೂ ಪಾಲಿಸುವ ಮೂಲಕ ಶ್ರೀರಾಮನಿಗೆ ನಮನ ಸಲ್ಲಿಸಬೇಕೆಂದರು.
ರಾಜ್ಯ ಸರ್ಕಾರವು ಬಸವೇಶ್ವರರನ್ನು ಸಾಂಸ್ಕ್ರತಿಕ ನಾಯಕ ಎಂದು ಘೋಷಣೆ ಮಾಡಿದ್ದು ಬಸವ ಭಕ್ತರಿಗೆ ಸಂತೋಷ ತಂದಿದೆ. ಹೋಮ-ಹವನ ಮಾಡುವುದು ಭಾರತೀಯ ವಿಶಿಷ್ಟ ಸಂಪ್ರದಾಯ. ಹೋಮದಲ್ಲಿ ವನಸ್ಪತಿಗಳನ್ನು ಬಳಕೆ ಮಾಡುತ್ತಿರುವುದರಿಂದ ದುಷ್ಟ ಶಕ್ತಿ ನಾಶವಾಗುತ್ತದೆ ಎಂದ ಅವರು ರಾಜ್ಯ ಸರ್ಕಾರವು ಬಸವೇಶ್ವರರನ್ನು ಸಾಂಸ್ಕ್ರತಿಕ ನಾಯಕ ಎಂದು ಘೋಷಣೆ ಮಾಡಿದ್ದು ಬಸವ ಭಕ್ತರಿಗೆ ಸಂತೋಷ ತಂದಿದೆ ಎಂದರು.
ವಿರಕ್ತಮಠದ ಸಿದ್ದಲಿಂಗ ಸ್ವಾಮೀಜಿ, ಬುರಣಾಪೂರ ಯೋಗೇಶ್ವರಿ ಮಾತಾಜಿ, ಮುಖಂಡ ಕಲ್ಲು ಸೊನ್ನದ ಮಾತನಾಡಿದರು.
ರಾಮತಾರಕ ಹೋಮವನ್ನು ಯೋಗೀಶ ಜೈನಿ, ಅಭಿಷೇಕ ಜೈನಿ, ಕೃಪಾಚಾರ್ಯ ಗಲಗಲಿ, ಹರೀಶ ಜೈನಿ, ದೇವದಾಸ ಹುಂಡೆಕರ ಅವರು ನೆರವೇರಿಸಿದರು. ಹೋಮದಲ್ಲಿ ೨೦೦ಕ್ಕೂ ಹೆಚ್ಚು ದಂಪತಿಗಳು ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಇಂಗಳೇಶ್ವರದ ಬೃಂಗೀಶ್ವರ ಶಿವಾಚಾರ್ಯ ಸ್ವಾಮೀಜಿ, ಮಾತೃಶಕ್ತಿಯ ವಿಭಾಗ ಸಂಚಾಲಕಿ ಮಾಯಕ್ಕ ಚೌಧರಿ, ಬಜರಂಗದಳ ವಿಜಯಪುರ ವಿಭಾಗದ ಸಂಯೋಜಕ ಸಂತೋಷ ಹಿರೇಮಠ, ಮಾತೃಶಕ್ತಿ ತಾಲೂಕು ಪ್ರಮುಖ ರೂಪಾ ಜಾಧವ, ಉಪಾಧ್ಯಕ್ಷೆ ವಿದ್ಯಾಶ್ರೀ ಬಡಿಗೇರ, ದುರ್ಗಾವಾಹಿನಿ ತಾಲೂಕು ಸಂಚಾಲಕಿ ಸ್ವಾತಿ ಪಾಟೀಲ, ವಿದ್ಯಾರ್ಥಿ ಪ್ರಮುಖ ಲಕ್ಷ್ಮೀ ವಸ್ತ್ರದ, ಅಶೋಕ ಹಾರಿವಾಳ, ಬಸವರಾಜ ಹಾರಿವಾಳ, ವಿವೇಕಾನಂದ ಕಲ್ಯಾಣಶೆಟ್ಟಿ, ಕೆ. ಗಂಗಾಧರ ಸೇರಿದಂತೆ ಇತರರು ಇದ್ದರು.
ಪದ್ಮರಾಜ ಒಡೆಯರ ಸ್ವಾಗತಿಸಿದರು. ರಾಹುಲ ಜಗತಾಪ ನಿರೂಪಿಸಿದರು.
Subscribe to Updates
Get the latest creative news from FooBar about art, design and business.
Related Posts
Add A Comment

