ಕೃಷಿಮೇಳದ ಘೋಷವಾಕ್ಯ – ಸುಸ್ಥಿರ ಕೃಷಿಗಾಗಿ ಬರ ನಿರ್ವಹಣೆ
ವಿಜಯಪುರ: “ಸುಸ್ಥಿರ ಕೃಷಿಗಾಗಿ ಬರ ನಿರ್ವಹಣೆ” ಘೋಷವಾಕ್ಯದೊಂದಿಗೆ ನಗರದ ಹೊರವಲಯದ ವಿಜಯಪುರದ ಹಿಟ್ನಳ್ಳಿ ಫಾರ್ಮ್ನನಲ್ಲಿ ಜನವರಿ ೨೧ ರಿಂದ ೨೩ವರೆಗೆ ಕೃಷಿ ಮತ್ತು ಕೃಷಿ ಸಂಬಂಧಿತ ಇಲಾಖೆಗಳ ಸಹಯೋಗದೊಂದಿಗೆ ಬೃಹತ್ ಕೃಷಿ ಮೇಳವನ್ನು ಕೃಷಿ ವಿಶ್ವವಿದ್ಯಾಲಯ ಆವರಣದಲ್ಲಿ ಆಯೋಜಿಸಲಾಗಿದೆ ಎಂದು ಕೃಷಿ ಮೇಳ ಸಮಿತಿ ಅಧ್ಯಕ್ಷರು ಹಾಗೂ ಡೀನ್ ಡಾ. ಭೀಮಪ್ಪ ಎ ತಿಳಿಸಿದರು.
ಇಂದು ಕೃಷಿ ಮಹಾವಿದ್ಯಾಲಯದ ಸಮ್ಮೇಳನ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು ಆಧುನಿಕ ಕೃಷಿ ತಂತ್ರಜ್ಞಾನ ಮಾಹಿತಿಯ ಜೊತೆಗೆ ಬೃಹತ್ ವಸ್ತುಪ್ರದರ್ಶನ ಏರ್ಪಡಿಸಲಾಗಿದೆ. ರೈತರಿಗೆ ಆಧುನಿಕ ಬೇಸಾಯ ಕ್ರಮಗಳ ಕುರಿತಂತೆ ಕಾಲ-ಕಾಲಕ್ಕೆ ಕೃಷಿ ವಿಶ್ವವಿದ್ಯಾಲಯಗಳಲ್ಲಿ ಆಗುತ್ತಿರುವ ನಿರಂತರ ಸಂಶೋಧನೆಗಳ ಫಲಿತಾಂಶಗಳನ್ನು ರೈತರಿಗೆ ತಲುಪಿಸುವಲ್ಲಿ ಕೃಷಿ ಮೇಳಗಳಂತಹ ಬೃಹತ್ ವಿಸ್ತರಣಾ ಕಾರ್ಯಕ್ರಮಗಳು ಬಹಳ ಮಹತ್ವವನ್ನು ಪಡೆದಿವೆ ಎಂದು ಹೇಳಿದರು.
ಜನವರಿ ೨೧ರಂದು ಬೆಳಗ್ಗೆ ೧೧ ಗಂಟೆಗೆ ಕೃಷಿ ಸಚಿವರಾದ ಎನ್. ಚೆಲುವರಾಯಸ್ವಾಮಿ ಕೃಷಿ ಮೇಳವನ್ನು ಉದ್ಘಾಟಿಸಲಿದ್ದಾರೆ. ನಾಗಠಾಣ ಮತಕ್ಷೇತ್ರದ ಶಾಸಕ ವಿಠ್ಠಲ ಕಟಕಧೋಂಡ ಅಧ್ಯಕ್ಷತೆ ವಹಿಸುವರು. ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲ ಸೌಲಭ್ಯ ಅಭಿವೃದ್ಧಿ ಸಚಿವ ಡಾ. ಎಂ. ಬಿ. ಪಾಟೀಲ ಅವರು ಕೃಷಿ ವಸ್ತು ಪ್ರದರ್ಶನದ ಉದ್ಘಾಟನೆ ಮಾಡಲಿದ್ದಾರೆ. ಕೃಷಿ ಪ್ರಕಟಣೆಗಳನ್ನು ಜವಳಿ, ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಎಸ್. ಪಾಟೀಲ ಬಿಡುಗಡೆಗೊಳಿಸುವರು. ಈ ಸಂದರ್ಭದಲ್ಲಿ ಜಿಲ್ಲೆಯ ಎಲ್ಲ ಶಾಸಕರು, ವಿಧಾನ ಪರಿಷತ್ ಸದಸ್ಯರು, ಕೃಷಿಕ ಸಮಾಜದ ಅಧ್ಯಕ್ಷರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು ಹಾಗೂ ಧಾರವಾಡ ಕೃಷಿ ವಿವಿ ಕುಲಪತಿ ಡಾ. ಪಿ.ಎಲ್. ಪಾಟೀಲ, ಕೃಷಿ ವಿವಿ ವ್ಯವಸ್ಥಾಪನಾ ಮಂಡಳಿ ಸದಸ್ಯರು ಉಪಸ್ಥಿತರಿರುವರು.
ಕೃಷಿ ಮೇಳದಲ್ಲಿ ರೈತರಿಗಾಗಿ ಕೃಷಿ ವಸ್ತು ಪ್ರದರ್ಶನ ಮಳಿಗೆಗಳನ್ನು ಹಾಕಿ ಅದರಲ್ಲಿ ಕೃಷಿ ಪರಿಕರ ಮಾರಾಟ ಮಳಿಗೆ, ಸಿರಿಧಾನ್ಯ, ಕೃಷಿ ತಂತ್ರಜ್ಞಾನ ವರ್ಗಾವಣೆ ಕೇಂದ್ರಗಳ ಮಳಿಗೆ, ವಿವಿಧ ಸಂಶೋಧನಾ ಕೇಂದ್ರಗಳ ಮಳಿಗೆ, ಬೃಹತ್ ಜಲಾನಯನ ಅಭಿವೃದ್ಧಿ ಪ್ರ‍್ರಾತ್ಯಕ್ಷಿಕೆ ಹಮ್ಮಿಕೊಳ್ಳಲಾಗುವುದು ಮತ್ತು ಕೃಷಿ ಸಲಹಾ ಕೇಂದ್ರ ಏರ್ಪಡಿಸಿ ಇದರಲ್ಲಿ ಎಲ್ಲ ವಿಭಾಗಗಳ ಮುಖ್ಯಸ್ಥರು ಲಭ್ಯವಿದ್ದು, ಮೇಳಕ್ಕೆ ಬರುವ ರೈತರಿಗೆ ಸ್ಥಳದಲ್ಲಿಯೇ ಪರಿಹಾರ ಒದಗಿಸುವ ವ್ಯವಸ್ಥೆ ಮಾಡಲಾಗಿದೆ. ಪ್ರತಿ ದಿವಸ ಮದ್ಯಾಹ್ನ ವಿವಿಧ ತಜ್ಞರಿಂದ ಹಾಗೂ ಅನುಭವಿ ರೈತರಿಂದ ವಿವಿಧ ವಿಷಯಗಳ ಮೇಲೆ ಕೃಷಿ ಗೋಷ್ಠಿ ಹಾಗೂ ರೈತರಿಂದ ರೈತರಿಗಾಗಿ ಕಾರ್ಯಕ್ರಮಗಳು ಜರಗಲಿವೆ.
ಇದರ ಜೊತೆಗೆ ತಜ್ಞರೊಂದಿಗೆ ಚರ್ಚೆ, ಪ್ರಯೋಗ ತಾಕುಗಳ ಭೇಟಿ, ಕೃಷಿ ಯಂತ್ರೋಪಕರಣ ಪ್ರದರ್ಶನ ಹಾಗೂ ಪ್ರಾತ್ಯಕ್ಷಿಕೆ, ಕೀಟನಾಶಕ ಸಿಂಪರಣೆಗಾಗಿ “ಡ್ರೋನ್” ಬಳಕೆ, ಸೌರ ಚಾಲಿತ ಮತ್ತು ಕಡಿಮೆ ತೂಕದ ಡಿಸೈಲ್ ಪಂಪಸೆಟ್ಟಿನಿಂದ ನೀರೆತ್ತುವುದು, ಸ್ವಯಂ ಚಾಲಿತ ಸೂಕ್ಷ್ಮ ನೀರಾವರಿ ಪದ್ದತಿ, ಕೃಷಿ ಹವಾಮಾನ ಶಾಸ್ತ್ರ, ಒಣ ಬೇಸಾಯ ತಂತ್ರಜ್ಞಾನ, ಹಿಂಗಾರಿ ಜೋಳದ ತಳಿಯ ಅಭಿವೃದ್ಧಿ, ಮಳೆ ನೀರು ಕೊಯ್ಲು, ಜೈವಿಕ ಗೊಬ್ಬರಗಳ ಉತ್ಪಾದನೆ ಹಾಗೂ ಬಳಕೆ, ಎರೆಹುಳು ತಂತ್ರಜ್ಞಾನ, ಸಾವಯವ ಕೃಷಿ, ಶೂನ್ಯ ಬಂಡವಾಳ ನೈಸರ್ಗಿಕ ಕೃಷಿ, ಪಶು ಸಂಗೋಪನೆ, ಬೀಜೋತ್ಪಾದನೆ ಹಾಗೂ ಬೀಜ ಸಂಸ್ಕರಣೆ, ಕೃಷಿ ಮಾರುಕಟ್ಟೆ/ಗೃಹ ವಿಜ್ಞಾನ ಕುರಿತಂತೆೆ ಮಾಹಿತಿ ನೀಡಲಾಗುವದು.
ಕೃಷಿಮೇಳದಲ್ಲಿ ಪ್ರತಿ ದಿವಸ ವಿವಿಧ ಕೃಷಿಗೋಷ್ಠಿಗಳನ್ನು ಆಯೋಜಿಸಲಾಗುವುದು. ಮೊದಲನೆ ದಿನ ಹವಾಮಾನ ವೈಪರೀತ್ಯದ ಪರಿಣಾಮಗಳು ಮತ್ತು ನಿರ್ವಹಣೆ, ಬರ ನಿರ್ವಹಣೆಗಾಗಿ ಕೃಷಿ ತಂತ್ರಜ್ಞಾನ ಪ್ರಾತ್ಯಕ್ಷಿಕೆಗಳು ಹಾಗೂ ರೈತರಿಂದ ರೈತರಿಗಾಗಿ ಪ್ರಶಸ್ತಿ ವಿಜೇತ ರೈತರಿಂದ ಅನುಭವ ಹಂಚಿಕೆ ಕಾರ್ಯಕ್ರಮ ಇರುತ್ತದೆ. ಎರಡನೇ ದಿನ ಸುಸ್ಥಿರ ಕೃಷಿಗಾಗಿ ಉಪಕಸಬುಗಳು ಮತ್ತು ರೈತರಿಂದ ರೈತರಿಗಾಗಿ ಕಾರ್ಯಕ್ರಮ ಮತ್ತು ಮೂರನೇಯ ದಿನ ಮಾರಾಟಗಾರರು ಹಾಗೂ ಖರೀದಿದಾರರ ಸಮಾವೇಶ ಹಮ್ಮಿಕೊಳ್ಳಲಾಗುವುದು.
ಪುಸಾ ಬೇಬಿ ಕಾರ್ನ ಹೈಬ್ರಿಡ್-೧: ಪಿಬಿಸಿಎಚ್-೧(ಎಎಚ್ ೭೦೪೩), ಹೈಬ್ರಿಡ್ ಸಜ್ಜೆ: ಬಿಆರ್‌ಬಿಹೆಚ್-೧(೧೬೬೨೦), ಅಗಸೆ ತಳಿ: ಡಿಎಲ್‌ವಿ-೭, ಕುದುರೆ ಮೆಂತೆ ತಳಿ: ಐಜಿಎಫ್ ಆರ್-ಡಿಎಲ್-೫, ಡೈಕೊಕಮ್ ಜವೆಗೋಧಿ ತಳೀ ಡಿಡಿಕೆ-೧೦೬೩ ಎಂಬ ವಿವಿಧ ತಳಿಗಳು ನಮ್ಮ ಕೃಷಿ ಮಹಾವಿದ್ಯಾಲಯದಿಂದ ಬಿಡುಗಡೆಯಾಗಿವೆ ಎಂದು ಅವರು ಮಾಹಿತಿ ನೀಡಿದರು.
ರೈತರಿಗೆ ಆಶಾಕಿರಣವಾಗಿರುವ ಕೃಷಿಮೇಳಕ್ಕೆ ಬರ ಪರಿಸ್ಥಿತಿ ನಿರ್ವಹಣೆ ಸೇರಿದಂತೆ ಕೃಷಿಗೆ ಸಂಬಂಧಿಸಿದ ಮಾಹಿತಿ ಪಡೆದುಕೊಳ್ಳಲು ಹೆಚ್ಚಿನ ಸಂಖ್ಯೆಯಲ್ಲಿ ರೈತ ಬಾಂಧವರು ಆಗಮಿಸುವಂತೆ ಅವರು ಮನವಿ ಮಾಡಿಕೊಂಡರು.
ಪತ್ರಿಕಾಗೋಷ್ಠಿಯಲ್ಲಿ ಸಹ ಸಂಶೋಧನಾ ನಿರ್ದೇಶಕ ಡಾ.ಅಶೋಕ ಎಸ್. ಸಜ್ಜನ, ಸಹ ವಿಸ್ತರಣಾ ನಿರ್ದೇಶಕ ಹಾಗೂ ಪ್ರಚಾರ ಸಮಿತಿ ಅಧ್ಯಕ್ಷ ಡಾ.ಆರ್.ಬಿ. ಬೆಳ್ಳಿ ಉಪಸ್ಥಿತರಿದ್ದರು.
