ವಿಜಯಪುರ: ಅಯೋಧ್ಯೆಯಲ್ಲಿ ಶ್ರೀರಾಮಲಲ್ಲಾ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ವಿಜಯಪುರದ ಗಣೇಶ ನಗರದಲ್ಲಿರುವ ಸಾಕ್ಷಿ ಹನುಮಾನ ದೇವಾಲಯದಲ್ಲಿ ದಿ.೨೨ ರಂದು ಬೆಳಿಗ್ಗೆ ಒಂದು ಲಕ್ಷ ಸ್ವಾಹಾಕಾರ ಸಹಿತ ಶ್ರೀರಾಮ ತಾರಕ ಯಜ್ಞ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀ ಸಾಕ್ಷಿ ಹನುಮಾನ ದೇವಾಲಯ ಸಮಿತಿ ಅಧ್ಯಕ್ಷ ಎಸ್.ಎಸ್. ಬೊಮ್ಮನಹಳ್ಳಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಈ ಕುರಿತು ವಿವರಣೆ ನೀಡಿದ ಅವರು, ರಾಮರಾಜ್ಯದ ಕನಸು ನನಸಾಗಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬರು ಸಂಕಲ್ಪ ಮಾಡಬೇಕಾಗಿದೆ, ರಾಮ ಮಂದಿರ ಲೋಕಾರ್ಪಣೆಯನ್ನು ಆಧ್ಯಾತ್ಮಿಕವಾಗಿ ಸಂಭ್ರಮಿಸುವ ದೃಷ್ಟಿಯಿಂದ ಈ ಧಾರ್ಮಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದರು.
ಇಡೀ ವಿಶ್ವದ ದೃಷ್ಟಿ ಈಗ ಅಯೋಧ್ಯೆ ಕಡೆಗೆ ನೆಟ್ಟಿದೆ. ಐದು ನೂರು ವರ್ಷಗಳ ಹೋರಾಟಕ್ಕೆ ಅಂತಿಮ ಜಯ ದೊರಕಿದೆ. ಅಯೋಧ್ಯೆಯಲ್ಲಿ ಮರ್ಯಾದಾ ಪುರುಷೋತ್ತಮ ಶ್ರೀರಾಮಚಂದ್ರನ ವಿಗ್ರಹ ಪ್ರಾಣಪ್ರತಿಷ್ಠಾಪನೆ ಕಾರ್ಯಕ್ರಮ ಇದೇ ದಿನಾಂಕ ೨೨ ರಂದು ನೆರವೇರಲಿರುವುದು. ಪ್ರತಿಯೊಬ್ಬರು ಸಂತಸಪಡುವ ಸುಸಮಯ,
ದಿನಾಂಕ ೨೨ ರಂದು ಬೆಳಿಗ್ಗೆ ಇಲ್ಲಿನ ಗಣೇಶನಗರ ಶ್ರೀಸಾಕ್ಷಿ ಹನುಮಾನ ಮಂದಿರದಲ್ಲಿ ಅತ್ಯಂತ ವಿಶೇಷವಾದ ಶ್ರೀರಾಮ ತಾರಕ ಯಜ್ಞ ನೆರವೇರಲಿದೆ. ಈ ಯಜ್ಞನ ವಿಶೇಷತೆ ಎಂದರೆ ಯಜ್ಞದಲ್ಲಿ ಒಂದು ಲಕ್ಷ ರಾಮನಾಮ ಸ್ವಾಹಾಕಾರ ನಡೆಯುವುದು. ಸುಮಾರು ೨೫ ಕ್ಕೂ ಹೆಚ್ಚು ಋತ್ವಿಕರು ವಿದ್ವಾನ್ ಗುರುರಾಜ ಆಚಾರ್ಯ ಹೆರಕಲ್ಲ ನೇತೃತ್ವದಲ್ಲಿ ಯಜ್ಞವನ್ನು ನೆರವೇರಿಸುವರು. ಯಾಗದಲ್ಲಿ ಒಟ್ಟು ೫ ಹೋಮಕುಂಡಗಳು, ನೂರೊಂದು ಕಲಶಗಳನ್ನು ಸ್ಥಾಪಿಸಲಾಗುತ್ತಿದೆ ಎಂದರು.
ಕಾರ್ಯಕ್ರಮದ ಮಾರ್ಗದರ್ಶಕ ವಿದ್ವಾನ್ ಗುರುರಾಜ ಆಚಾರ್ಯ ಹೆರಕಲ್ಲ ಮಾತನಾಡಿ, ರಾಮ ತಾರಕ ಮಂತ್ರದಲ್ಲಿ ಅದ್ಭುತವಾದ ಶಕ್ತಿ ಇದೆ, ಶ್ರೀ ರಾಮ ಜಯ ರಾಮ ಜೈ ಜೈ ರಾಮ್…ಎಂಬ ತಾರಕ ಮಂತ್ರ ಎಲ್ಲೆಡೆ ಮೊಳಗಬೇಕು. ಸಂಜೆ ಮಹಿಳಾ ಭಜನಾ ಮಂಡಳಿಗಳಿಂದ ಭಜನೆ ಹಾಗೂ ದಿಪೋತ್ಸವ ನಡೆಯಲಿದೆ ಎಂದರು.
ಸುನೀಲಗೌಡ ಪಾಟೀಲ, ಡಿ.ಎಸ್. ಕಾಮರೆಡ್ಡಿ, ಪಿ.ವಿ. ಗುಮಾಸ್ತೆ, ಬಿ.ಎನ್. ಜ್ಯೋತಿ, ವಿಜಯ ಜೋಶಿ ಮೊದಲಾದವರು ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment
