ಕಸಾಪ ಗೆ ಕೆಲಸ ಮಾಡುವವರು ಬೇಕಿದೆ, ಟೀಕೆ ಮಾಡುವವರಲ್ಲ :ಹಾಸಿಂಪೀರ ವಾಲೀಕಾರ
ಬಸವನಬಾಗೇವಾಡಿ: ಕನ್ನಡ ಸಾಹಿತ್ಯ ಪರಿಷತ್ತಿನ ಹುದ್ದೆಗಳನ್ನು ಪಡೆದುಕೊಂಡ ನಂತರ ಸುಮ್ಮನೆ ಕುಳಿತುಕೊಳ್ಳದೇ ನಿರಂತರವಾಗಿ ಕನ್ನಡ ತಾಯಿ ಸೇವೆ ಮಾಡಬೇಕು. ಜಿಲ್ಲೆಯ ಆರು ತಾಲೂಕುಗಳಲ್ಲಿ ತಾಲೂಕು ಅಧ್ಯಕ್ಷರು ನಿಷ್ಕ್ರಿಯವಾದ ಕಾರಣದಿಂದಾಗಿ ಅವರನ್ನು ಬದಲಾಯಿಸಿ ಹೊಸ ಅಧ್ಯಕ್ಷರನ್ನು ನೇಮಕ ಮಾಡುವ ಮೂಲಕ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಚಟುವಟಿಕೆಗಳು ನಿರಂತರವಾಗಿ ನಡೆಯುವಂತೆ ಮಾಡಲಾಗುತ್ತಿದೆ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ಹಾಸಿಂಪೀರ ವಾಲೀಕಾರ ಹೇಳಿದರು.
ತಾಲೂಕಿನ ನಾಗೂರ ಗ್ರಾಮದ ಯಮನೂರೇಶ್ವರ ದೇವಸ್ಥಾನದ ಆವರಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ತಾಲೂಕು ಕಸಾಪ ಅಧ್ಯಕ್ಷರ ಮತ್ತು ಪದಾಧಿಕಾರಿಗಳ ಪದಗ್ರಹಣ ಹಾಗೂ ಜಿಲ್ಲಾಧ್ಯಕ್ಷರ ಅಭಿನಂದನಾ ಸಮಾರಂಭ ಹಾಗೂ ಜ್ಞಾನಯೋಗಿ ಸಿದ್ದೇಶ್ವರ ಸ್ವಾಮೀಜಿಯವರ ನುಡಿನಮನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕನ್ನಡ ಸಾಹಿತ್ಯ ಪರಿಷತ್ತಿಗೆ ಕೆಲಸ ಮಾಡುವವರು ಬೇಕು, ಟೀಕೆ ಮಾಡುವವರು ಬೇಕಿಲ್ಲ. ಪರಿಷತ್ತಿನಿಂದ ದಂಪತಿ ಸಮೇತರಾಗಿ ಸನ್ಮಾನ ಸ್ವೀಕರಿಸಿಕೊಂಡು ಟೀಕೆ ಮಾಡುವುದು ಎಷ್ಟು ಸರಿ? ಟೀಕೆ ಮಾಡುವವರು ವೇದಿಕೆಗೆ ಬನ್ನಿ ಎಂದರು.
ಜಿಲ್ಲೆಯಲ್ಲಿ ೧೦ ಸಾವಿರ ಪರಿಷತ್ತಿನ ಸದಸ್ಯರಿದ್ದಾರೆ. ಎಲ್ಲರಿಗೂ ಅವಕಾಶ ಕಲ್ಪಿಸುವ ಮಹಾದಾಸೆ ನನ್ನದು. ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕ್ರಮಗಳಿಗೆ ಎಲ್ಲರ ಸಹಕಾರ, ಮಮತೆ, ಪ್ರೀತಿ ಬೇಕಿದೆ. ೬.೫೦ ಕೋಟಿ ವೆಚ್ಚದಲ್ಲಿ ಭವ್ಯವಾದ ಕನ್ನಡ ಸಾಹಿತ್ಯ ಪರಿಷತ್ತಿನ ಭವನ ನಿರ್ಮಾಣಕ್ಕೆ ಅನುಮತಿ ಪಡೆದುಕೊಂಡಿದ್ದು. ಈ ಭವನ ನಿರ್ಮಾಣ ಕಾರ್ಯ ಎಲ್ಲರ ಸಹಕಾರದೊಂದಿಗೆ ಮುಗಿಸುತ್ತೇನೆ. ನಾನು ಕನ್ನಡ ಸೇವಕನಾಗಿ ನಿರಂತರವಾಗಿ ಕಾರ್ಯ ಮಾಡಲು ಬದ್ಧ ಎಂದರು.
ಕಾರ್ಯಕ್ರಮವನ್ನು ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿದ ನಂದಿ ಸಕ್ಕರೆ ಕಾರ್ಖಾನೆಯ ನಿರ್ದೇಶಕ ಸತ್ಯಜೀತ ಪಾಟೀಲ ಮಾತನಾಡಿ, ಜೀವನವನ್ನು ಪರಿವರ್ತಿಸುವ ಶಕ್ತಿ ಕನ್ನಡ ಸಾಹಿತ್ಯಕ್ಕೆ ಇದೆ. ಜೀವನಕ್ಕೆ ಬೇಕಾದ ಮೌಲ್ಯಗಳನ್ನು ಸಾಹಿತ್ಯದಲ್ಲಿ ಕಾಣುತ್ತೇವೆ. ಎರಡು ಸಾವಿರ ವರ್ಷ ಇತಿಹಾಸವನ್ನು ಹೊಂದಿರುವ ಕನ್ನಡ ಭಾಷೆಗೆ ಸದೃಢ ಗೊಳಿಸುವ ಶಕ್ತಿ ಇದೆ. ನಮ್ಮ ರಾಜ್ಯದಲ್ಲಿ ವಿವಿಧೆತೆಯನ್ನು ಕಾಣಬಹುದು ಎಂದ ಅವರು ಪೂಜ್ಯ ಸಿದ್ದೇಶ್ವರ ಸ್ವಾಮೀಜಿಯವರು ತಮ್ಮ ಪ್ರವಚನಗಳ ಮೂಲಕ ಕನ್ನಡ ಭಾಷೆಯನ್ನು ಇನ್ನಷ್ಟು ಸದೃಢಗೊಳಿಸಿದ್ದಾರೆ. ಮುಂದಿನ ಪೀಳಿಗೆಗೆ ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.
ಬಸವನಬಾಗೇವಾಡಿ ವಿಪಿಕೆಪಿಎಸ್ ಅಧ್ಯಕ್ಷ ಸಂಗನಗೌಡ ಚಿಕ್ಕೊಂಡ ಮಾತನಾಡಿದರು.
ಸಾನಿಧ್ಯ ವಹಿಸಿದ್ದ ಮಸಬಿನಾಳದ ಸಿದ್ದರಾಮ ಸ್ವಾಮೀಜಿ, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಶಿವಾನಂದ ಮಂಗಾನವರ, ತಾಲೂಕು ಕಸಾಪ ನೂತನ ಅಧ್ಯಕ್ಷ ಶಿವಾನಂದ ಡೋಣೂರ ಮಾತನಾಡಿದರು.
ಭಾಗ್ಯಶ್ರೀ ಪಾಟೀಲ, ಭಾಗ್ಯಶ್ರೀ ಹಿರೇಮಠ ಸಿದ್ದೇಶ್ವರ ಸ್ವಾಮೀಜಿಯವರಿಗೆ ನುಡಿನಮನ ಸಲ್ಲಿಸಿದರು.
ಸಾನಿಧ್ಯವನ್ನು ಸಿದ್ದಲಿಂಗ ಸ್ವಾಮೀಜಿ. ಬೃಂಗೇಶ್ವರ ಶಿವಾಚಾರ್ಯರು ವಹಿಸಿದ್ದರು. ವೇದಿಕೆಯಲ್ಲಿ ಬಿಇಓ ವಸಂತ ರಾಠೋಡ, ಮುಖಂಡರಾದ ಈರಣ್ಣ ಪಟ್ಟಣಶೆಟ್ಟಿ, ಸುರೇಶ ಹಾರಿವಾಳ, ಚಂದ್ರಶೇಖರ ಮರೋಳ, ಚಂದ್ರಶೇಖರ ಮುಳವಾಡ, ಬಾಲು ರಾಠೋಡ,ಸಂಗಮೇಶ ಓಲೇಕಾರ, ಎಸ್.ಐ.ಬಿರಾದಾರ, ಜಿಲ್ಲಾ ಕಸಾಪ ಪದಾಧಿಕಾರಿಗಳಾದ ಅಭಿಷೇಕ ಚಕ್ರವರ್ತಿ, ಡಾ.ಸಂಗಮೇಶ ಮೇತ್ರಿ, ರಾಜೇಸಾಬ ಶಿವನಗುತ್ತಿ ಇತರರು ಇದ್ದರು.
ಎಚ್.ಬಿ.ಬಾರಿಕಾಯಿ ಸ್ವಾಗತಿಸಿದರು. ಪಿ.ಎಸ್.ಬಾಗೇವಾಡಿ ನಿರೂಪಿಸಿದರು. ಬಿ.ವಿ.ಚಕ್ರಮನಿ ವಂದಿಸಿದರು.

