ಕಾರಜೊಳ & ತೊನಶ್ಯಾಳದಲ್ಲಿ ಜೆಜೆಎಂ ಯೋಜನೆಗೆ ಚಾಲನೆ ನೀಡಿದ ಎಂಎಲ್ಸಿ ಸುನೀಲಗೌಡ ಪಾಟೀಲ ಸ್ಪಷ್ಠನೆ
ವಿಜಯಪುರ: ಗ್ರಾಮಸ್ಥರು ಮತ್ತು ಗ್ರಾಮ ಪಂಚಾಯಿತಿ ಪರವಾಗಿ ನಾನು ಹೋರಾಟ ಮಾಡಿದರ ಫಲವಾಗಿ ಜಲಜೀವನ ಮಿಷನ್(ಜೆಜೆಎಂ) ಯೋಜನೆಗೆ ಗ್ರಾ. ಪಂ. ಗಳ ವತಿಯಿಂದ ನೀಡಬೇಕಿದ್ದ ಸಮುದಾಯ ವಂತಿಗೆಯನ್ನು ರದ್ದು ಪಡಿಸಲಾಗಿದೆ. ಈಗ ಸರಕಾರವೇ ಈ ಹಣವನ್ನು ಭರಿಸುತ್ತಿದ್ದು, ಈ ದುಡ್ಡಿನಲ್ಲಿ ಗ್ರಾ. ಪಂ. ಗಳು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಅನುಕೂಲವಾಗಿದೆ ಎಂದು ವಿಧಾನ ಪರಿಷತ ಶಾಸಕ ಸುನೀಲಗೌಡ ಪಾಟೀಲ ಹೇಳಿದ್ದಾರೆ.
ಸೋಮವಾರ ಬಬಲೇಶ್ವರ ತಾಲೂಕಿನ ಕಾರಜೊಳ ಗ್ರಾಮದಲ್ಲಿ ತೊನಶ್ಯಾಳ ಗ್ರಾಮದಲ್ಲಿ ರೂ.1.47 ಕೋ. ಮತ್ತು ಕಾರಜೋಳ ಗ್ರಾಮದಲ್ಲಿ ರೂ.1.22 ಕೋ. ವೆಚ್ಚದಲ್ಲಿ ಮನೆಮನೆಗಳಿಗೆ ನೀರು ಪೂರೈಸುವ ಜೆಜೆಎಂ ಯೋಜನೆಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ಈ ಮುಂಚೆ ಜೆಜೆಎಂ ಯೋಜನೆ ಕಾಮಗಾರಿಗಳಿಗೆ ಪ್ರತಿಯೊಂದು ಗ್ರಾ. ಪಂ. ಗಳು 15ನೇ ಹಣಕಾಸಿನಡಿ ಮತ್ತು ಫಲಾನುಭವಿಗಳಿಂದ ಸಮುದಾಯ ವಂತಿಗೆಯನ್ನು ನೀಡಬೇಕಿತ್ತು. ಕೊರೊನಾ ಸಂದರ್ಭದಲ್ಲಿ ಸಂಕಷ್ಟದಲ್ಲಿದ್ದ ಗ್ರಾಮಸ್ಥರು ನಮಗೆ ನಳಗಳೇ ಬೇಡ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. ಅಲ್ಲದೇ, ಗ್ರಾ. ಪಂ. ಗಳು ಕೂಡ 15ನೇ ಹಣಕಾಸಿನಡಿ ವಂತಿಗೆ ಪಾವತಿಸಿಸುವುದರಿಂದ ಗ್ರಾಮಗಳಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಹಿನ್ನೆಡೆಯಾಗಿತ್ತು. ಹಲವಾರು ಗ್ರಾ. ಪಂ. ಗಳಿಗೆ ವಿದ್ಯುತ್ ಬಿಲ್ ಪಾವತಿಸಲೂ ಹಣವಿರಲಿಲ್ಲ. ಈ ಕುರಿತು ನಾನು ವಿಧಾನ ಪರಿಷತ್ತಿನ ಶಾಸಕರ ಜೊತೆಗೂಡಿ ಅಂದಿನ ಸಚಿವ ಕೆ. ಎಸ್. ಈಶ್ವರಪ್ಪ ಅವರನ್ನು ಭೇಟಿ ಮಾಡಿದ್ದೆ. ಉತ್ತರ ಪ್ರದೇಶ ಮಾದರಿಯಂತೆ ರಾಜ್ಯ ಸರಕಾರವೇ ಗ್ರಾ. ಪಂ.ಗಳ ಸಮುದಾಯ ವಂತಿಗೆಯ ಪಾಲನ್ನು ಭರಿಸಬೇಕು ಎಂದು ಮನವಿ ಮಾಡಿದ್ದೆ. ಅದಕ್ಕೆ ಸಚಿವರು ಒಪ್ಪಿದ್ದರು. ಅಲ್ಲದೇ, ಗ್ರಾಮ ಪಂಚಾಯಿತಿಗಳಿಂದ ಪಡೆಯಲಾಗಿದ್ದ ಸಮುದಾಯ ವಂತಿಗೆಯನ್ನು ಮರಳಿಸಿದ್ದರು. ಇದರಿಂದ ಫಲಾನುಭವಿಗಳು ಮತ್ತು ಗ್ರಾ. ಪಂ. ಗಳಿಗೆ ಹೆಚ್ಚುವರಿ ಹೊರೆ ತಪ್ಪಿತು ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಸೋಮನಾಥ ಕಳ್ಳಿಮನಿ, ಬಿ. ಡಿ. ಅಸಂಗಿ, ರಾಚಯ್ಯ ಮಠಪತಿ, ಪವನ ಆಸಂಗಿ, ಪರಶುರಾಮ ಮಲಘಾಣ, ಸುರೇಶ ಜಾಧವ, ಚಂದ್ರವ್ವ ಚಲವಾದಿ, ಪಾಂಡು ಜಾಧವ, ಪರಶು ವಾಲಿಕಾರ, ಕಾಂತು ಓಡಿಯರ, ಮಾಂತು ಯಾಳವಾರ, ಆನಂದ ಜಾಧವ, ಯಂಕಪ್ಪ ಉಪ್ಪಾರ, ಲಕ್ಷ್ಮಣ ಪೂಜಾರಿ, ನಾಗರಾಜ ಲಂಬು, ಅಡಿವೆಪ್ಪ ಸಾಲಗಲ್ಲ, ರಾಜು ತಳೆವಾಡ ಮುಂತಾದವರು ಉಪಸ್ಥಿತರಿದ್ದರು.

