ಅಂತರವಲಯ ಮಟ್ಟದ ಪುರುಷ ಹಾಗೂ ಮಹಿಳೆಯರ ಕುಸ್ತಿ ಪಂದ್ಯಾವಳಿ ಉದ್ಘಾಟನೆ
ಸಿಂದಗಿ: ಕುಸ್ತಿ ಒಂದು ಗ್ರಾಮೀಣ ಭಾಗದ ಕ್ರೀಡೆಯಾದರೂ ಅದು ಇಂದು ರಾಜ್ಯ, ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚು ಖ್ಯಾತಿಯನ್ನು ಪಡೆದುಕೊಂಡಿದೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.
ಅವರು ಪಟ್ಟಣದ ಮಾಂಗಲ್ಯ ಭವನದಲ್ಲಿ ಶುಕ್ರವಾರ ಸಿಎಂ ಮನಗೂಳಿ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಮಹಾವಿದ್ಯಾಲಯ ಹಾಗೂ ಬೆಳಗಾವಿಯ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯಗಳ ಸಹಯೋಗದಲ್ಲಿ ಹಮ್ಮಿಕೊಂಡಿರುವ ಏಕದಿನದ ಅಂತರವಲಯ ಮಟ್ಟದ ಪುರುಷ ಹಾಗೂ ಮಹಿಳೆಯರ ಕುಸ್ತಿ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದರು.
ಸಿಂದಗಿ ನಗರ ಸಾಂಸ್ಕೃತಿಕ ಹಾಗೂ ಕ್ರೀಡಾ ಕ್ಷೇತ್ರದಲ್ಲಿ ಹೆಚ್ಚು ಹೆಸರನ್ನು ಪಡೆದ ಕ್ಷೇತ್ರವಾಗಿದೆ. ವಿಶ್ವವಿದ್ಯಾಲಯ ಇಲ್ಲಿ ರಾಷ್ಟ್ರಮಟ್ಟದ ಯಾವುದೇ ಕ್ರೀಡೆಗಳನ್ನು ಹಮ್ಮಿಕೊಂಡರೂ ನಾನು ಅದಕ್ಕೆ ತನು-ಮನದಿಂದ ಸೇವೆ ಮಾಡಲು ಸಿದ್ಧನಾಗಿದ್ದೇನೆ ಎಂದರು.
ಗ್ರಾಮೀಣ ಭಾಗದ ಕ್ರೀಡೆಗಳು ನಶಿಸಿ ಹೋಗಬಾರದು. ಪಾರಂಪರಿಕವಾಗಿ ಅವೆಲ್ಲ ಮುಂದುವರೆಸಿಕೊಂಡು ಹೋಗಬೇಕು. ಆ ನಿಟ್ಟಿನಲ್ಲಿ ಸಿಂದಗಿಯಲ್ಲಿ ಗರಡಿಮನೆ ನಿರ್ಮಾಣಕ್ಕಾಗಿ ಅಂದಾಜು 2 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡುವ ಕನಸನ್ನ ಹೊತ್ತು ಕೊಂಡಿದ್ದೇನೆ. ಈಗಾಗಲೇ ಆ ಪ್ರಸ್ತಾವನೆ ಸರ್ಕಾರದ ಮುಂದೆ ಇದೆ ಎಂದು ಹೇಳಿದರು.
ಈ ವೇಳೆ ತಾಲೂಕ ಶಿಕ್ಷಣ ಪ್ರಸಾರಕ ಮಂಡಳಿಯ ನಿರ್ದೇಶಕ ಶಿವಪ್ಪ ಗೌಡ ಬಿರಾದಾರ ಮಾತನಾಡಿ, ಕುಸ್ತಿ ಆಟ ಸಂಸ್ಕೃತಿಯನ್ನು ತೋರಿಸುವ ಉತ್ತಮ ಆಟವಾಗಿದೆ. ಇಂದಿನ ವೈಜ್ಞಾನಿಕ ಜಗತ್ತಿನಲ್ಲಿ ಗ್ರಾಮೀಣ ಕ್ರೀಡೆಗಳಿಗೆ ಹೆಚ್ಚು ಒತ್ತು ಕೊಡುತ್ತಿರುವುದು ಶ್ಲಾಘನೀಯ ಎಂದರು.
ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಕ್ರೀಡಾ ನಿರ್ದೇಶಕ ಜಗದೀಶ್ ಗಸ್ತಿ, ಜಿ.ಪಿ. ಫೋರವಾಲ ಕಲಾ ಮಹಾವಿದ್ಯಾಲಯದ ದೈಹಿಕ ನಿರ್ದೇಶಕ ರವಿ ಗೋಲಾ ಪ್ರಾಸ್ತಾವಿಕವಾಗಿ ಮಾತನಾಡಿದರು.
ಬೀದರ್ ಕಾಲೇಜಿನ ಪ್ರಾಚಾರ್ಯ ಅಶೋಕ ಬೂದಿಹಾಳ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಣ ದೈಹಿಕ ನಿರ್ದೇಶಕರಾದ ಕೆ. ಎಚ್. ಸೋಮಪುರ್, ಎಚ್.ಎಂ. ಉತ್ನಾಳ, ಶಂಕರಲಿಂಗ ಚೌಧರಿ, ಕಲಕೇರಿ ಬಸವೇಶ್ವರ ಪದವಿಪೂರ್ವ ಮಹಾ ವಿದ್ಯಾಲಯದ ದೈಹಿಕ ಶಿಕ್ಷಣ ನಿರ್ದೇಶಕ ಶಾಂತೇಶ್ ದುರ್ಗಿ, ಎಸ್.ಎ. ಜಾಗೀರದಾರ, ಪ್ರಾಚಾರ್ಯ ಡಾ. ಬಿ.ಜಿ ಪಾಟೀಲ್, ಡಾ. ಅಂಬರೀಶ ಬಿರಾದಾರ ವೇದಿಕೆಯ ಮೇಲಿದ್ದರು.
ಕಾರ್ಯಕ್ರಮದಲ್ಲಿ ಡಾ. ಅರವಿಂದ ಮನಗೂಳಿ, ಎಸ್ ಎಸ್ ಮಲ್ಲೇದ, ಸಂಗು ಬಿರಾದಾರ, ಗವಿಸಿದ್ದಪ್ಪ ಆನೆಗುಂದಿ, ಮಂಜುನಾಥ್ ತಳವಾರ್, ಮಂಜುನಾಥ್ ಕುಂಬಾರ್, ಸುಭಾಷ್ ಪಾಟೀಲ, ಸಿದ್ದಲಿಂಗ ಚೌಧರಿ, ಪ್ರವೀಣ ಬಿರಾದಾರ, ಆನಂದ್ ಅಂಬಲಗಿ, ರಮೇಶ್ ಬಿರಾದಾರ, ಎಂ. ಕೆ. ಬಿರಾದಾರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಶ್ರೀಶೈಲ ಜಮಾದಾರ ಪ್ರಾರ್ಥಿಸಿದರು, ಉಪನ್ಯಾಸಕ ಸಿದ್ದಲಿಂಗ ಕಿಣಗಿ ನಿರೂಪಿಸಿದರು, ಪ್ರಾಚಾರ್ಯ ಡಾ. ಬಿ. ಜಿ. ಪಾಟೀಲ ಸ್ವಾಗತಿಸಿದರು, ಡಾ. ಅಂಬರೀಶ ಬಿರಾದಾರ ವಂದಿಸಿದರು.

