ಬಸವನಬಾಗೇವಾಡಿ: ಪಟ್ಟಣ ಸೇರಿದಂತೆ ತಾಲೂಕಿನಲ್ಲಿ ಜನರು ಮಂಗಳವಾರ ಬೆಳಕಿನ ಹಬ್ಬ ದೀಪಾವಳಿಯ ಬಲಿಪಾಡ್ಯ ಹಬ್ಬವನ್ನು ಆಚರಣೆ ಮಾಡಿದರು. ಬೆಳಗ್ಗೆ ಬೇಗನೆ ಎದ್ದು ಸ್ನಾನಾದಿ ಕ್ರಿಯೆಯಾದ ನಂತರ ಪ್ರತಿಯೊಂದು ಮನೆಯಲ್ಲಿ ದೀಪಾವಳಿ ಪಾಡ್ಯದಂದು ಸಂಪ್ರದಾಯದಂತೆ ಸಹೋದರಿಯರು ತಮ್ಮ ಸಹೋದರರಿಗೆ ಆರತಿ ಬೆಳಗಿದರು.
ಪಾಡ್ಯ ಪೂಜೆ ನೆರವೇರಿದ ನಂತರ ಮನೆ ಮುಂದೆ ಪಾಂಡವರ ಪೂಜೆ ಮಾಡುವುದು ಹಿಂದಿನಿಂದ ನಡೆದುಕೊಂಡು ಬಂದ ಸಂಪ್ರದಾಯ. ಸಂಪ್ರದಾಯದಂತೆ ಪಟ್ಟಣ ಸೇರಿದಂತೆ ತಾಲೂಕಿನಲ್ಲಿ ಜನರು ತಮ್ಮ ಮನೆಗಳ ಮುಂದೆ ಪಾಂಡವರನ್ನು, ಗುಳ್ಳವ್ವರನ್ನು ಸೆಗಣಿಯಿಂದ ಮಾಡಿದ್ದು ಕಂಡುಬಂದಿತ್ತು. ಪಾಡ್ಯದಿನದಂದು ಜನರು ಕುಟುಂಬ ಸದಸ್ಯರೊಂದಿಗೆ ತಮ್ಮ ಇಷ್ಟದೇವರ ದೇವಸ್ಥಾನಕ್ಕೆ ತೆರಳಿ ದರ್ಶನ ಪಡೆದುಕೊಂಡರು. ವಿವಿಧ ದೇವಸ್ಥಾನಗಳಲ್ಲಿ ಹೆಚ್ಚು ಜನರು ದೇವರ ದರ್ಶನ ಪಡೆದುಕೊಂಡರು.
ಪಾಂಡವರು ಅಜ್ಞಾತವಾಸ ಮುಗಿಸಿ ನಂತರ ಬನ್ನಿ ಗಿಡದಲ್ಲಿ ಅಡಗಿಸಿಟ್ಟಿದ್ದ ಆಯುಧಗಳನ್ನು ಪಾಡ್ಯದ ದಿನ ತೆಗೆದುಕೊಂಡು ಬಂದಿದ್ದರ ವಿಜಯೋತ್ಸವದ ಸಂಕೇತವಾಗಿ ಮನೆಯ ಮುಂದೆ ಪಾಡವರು ಕೌರವರನ್ನು ಸಂಹಾರ ಮಾಡಿದ ಚಿತ್ರ ಬಿಂಬಿಸುವಂತೆ ಸಗಣಿಯಿಂದ ಗೊಂಬೆಗಳನ್ನು ಮಾಡಿ ಹೂವುಗಳಿಂದ ಅಲಂಕರಿಸಿ ಪೂಜೆ ಮಾಡಲಾಗುತ್ತಿದೆ ಎಂದು ಕೆಲ ಹಿರಿಯರು ಹೇಳಿದರು.
ಪಾಂಡವರು ಅಜ್ಞಾತವಾಸ ಯಶಸ್ವಿಯಾಗಿ ಪೂರ್ಣಗೊಳಿಸಿ ಸುರಕ್ಷಿತವಾಗಿ ಬರಲಿ ಎಂಬ ಸಂಕೇತವಾಗಿ ಪಾಂಡವರ (ಗುಳ್ಳವ್ವ ಪೂಜೆ) ಪೂಜೆ ಎಂದು ಕರೆಯಲಾಗುತ್ತಿದೆ ಎಂದು ಕೆಲ ಮಹಿಳೆಯರು ಹೇಳಿದರು. ಪಾಡ್ಯ ದಿನದಂದು ಮನೆಯ ಮುಂದೆ ಸೆಗಣಿಯಿಂದ ತಯಾರಿಸಿದ ಗೊಂಬೆಗಳಿಗೆ ಚೆಂಡು ಹೂವು, ತತ್ರಾಣಿ ಕಡ್ಡಿ, ಅವರೆ ಹೂವುಗಳಿಂದ ಅಲಂಕರಿಸಿ ಮೊಸರು ಸೇರಿದಂತೆ ನೈವೇದ್ಯ ಅರ್ಪಿಸಿ ಪೂಜೆ ಸಲ್ಲಿಸುವುದು ವಿಶೇಷ. ಶನಿವಾರ ದೀಪಾವಳಿ ಹಬ್ಬದ ಕಡೆ ಪಾಡ್ಯ ಆಚರಣೆಯೊಂದಿಗೆ ಬೆಳಕಿನ ಹಬ್ಬ ದೀಪಾವಳಿ ಆಚರಣೆ ಸಂಪನ್ನವಾಗುತ್ತದೆ.
Subscribe to Updates
Get the latest creative news from FooBar about art, design and business.
Related Posts
Add A Comment

