ಪ್ರಯಾಣಿಕರಿಗೆ ಆಸನಗಳ ಕೊರತೆ | ಗಬ್ಬೆದ್ದ ಶೌಚಾಲಯ | ಕುಡಿಯಲು ನೀರಿಲ್ಲ | ಸ್ವಚ್ಛತೆ ಇಲ್ಲಿ ಮರೀಚಿಕೆ
– ರಶ್ಮಿ ನೂಲಾನವರ
ಸಿಂದಗಿ: ಪಟ್ಟಣದಲ್ಲಿರುವ ಹೈಟೆಕ್ ಬಸ್ ನಿಲ್ದಾಣ ಅವ್ಯವಸ್ಥೆಯ ಆಗರವಾಗಿದ್ದು ಪ್ರಯಾಣಿಕರು ಅಗತ್ಯ ಸೌಲಭ್ಯಗಳಿಲ್ಲದೆ ನಿತ್ಯ ತೊಂದರೆ ಅನುಭವಿಸುವಂತಾಗಿದೆ.
ಹೆಸರಿಗೆ ಮಾತ್ರ ಹೈಟೆಕ್ ಆಗಿರುವ ಈ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಕೂಡಲು ಆಸನಗಳ ಕೊರತೆಯಿದೆ. ಹೀಗಾಗಿ ನೂರಾರು ಸಂಖ್ಯೆಯಲ್ಲಿ ಪ್ರಯಾಣಿಕರು ನಿತ್ಯವೂ ನೆಲದಲ್ಲಿನ ಹಾಸುಗಲ್ಲಿನ ಮೇಲೆ ಕುಳಿತುಕೊಳ್ಳುತ್ತಿರುವುದು ಕಂಡು ಬರುತ್ತಿದೆ.
ಸಿಂದಗಿ ಬಸ್ ನಿಲ್ದಾಣದಲ್ಲಿ ಬಳಗಾನೂರ, ಹರನಾಳ ಮಾರ್ಗವಾಗಿ ಸಂಚರಿಸುವ ಬಸ್ ನಿಲ್ಲುವ ಸ್ಥಳದೆಡೆಗೆ ಮೊದಲು ಇದ್ದ ಕೆಲವು ಆಸನಗಳು ಕಿತ್ತುಹೋಗಿದ್ದು ಅವುಗಳನ್ನು ತೆರವುಗೊಳಿಸಲಾಗಿದೆ. ಬಸ್‌ಗಾಗಿ ಕಾಯುವ ಪ್ರಯಾಣಿಕರು ನಿಲ್ದಾಣದ ಹಾಸುಗಲ್ಲಿನ ಮೇಲೆ ಕುಳಿತುಕೊಳ್ಳುತ್ತಿದ್ದಾರೆ. ಅನೇಕರು ನಿಂತುಕೊಂಡಿರುತ್ತಾರೆ. ಸಾರಿಗೆ ಸಂಸ್ಥೆಯ ಅಧಿಕಾರಿಗಳು ಆಸನಗಳ ವ್ಯವಸ್ಥೆ ಮಾಡಿಸುತ್ತಿಲ್ಲ ಎಂದು ಮಹಿಳೆಯರು, ಹಿರಿಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಅಧಿಕಾರಿಗಳ ನಿರ್ಲಕ್ಷ್ಯ: ನಿಲ್ದಾಣದಲ್ಲಿ ಕೇವಲ ಶಹಾಪೂರ, ಗುತ್ತರಗಿ ಕಡೆ ಬಸ್ ನಿಲ್ಲುವ ಸ್ಥಳದಲ್ಲಿ ಮಾತ್ರ ಆಸನಗಳ ವ್ಯವಸ್ಥೆ ಮಾಡಲಾಗಿದೆ. ದಿನದಿಂದ ದಿನಕ್ಕೆ ನಿಲ್ದಾಣಕ್ಕೆ ಬರುವ ಪ್ರಯಾಣಿಕರ ಸಂಖ್ಯೆ ಅತ್ಯಧಿಕವಾಗಿದೆ. ನಿಲ್ದಾಣದ ತುಂಬೆಲ್ಲಾ ಮಹಿಳೆಯರು, ಮಕ್ಕಳು, ವೃದ್ಧರು ಕೆಳಗೆ ಕುಳಿತ್ತಿರುವುದು ಗಮನಿಸಿದರೆ ಸಾರಿಗೆ ಅಧಿಕಾರಿಗಳ ನಿರ್ಲಕ್ಷ್ಯತನಕ್ಕೆ ಸಾಕ್ಷಿಯಾಗಿದೆ ಎಂದು ಪ್ರಯಾಣಿಕರು ದೂರುತ್ತಿದ್ದಾರೆ.
ಖಾಲಿ ಜಾಗದಲ್ಲಿ ಆಸನ ವ್ಯವಸ್ಥೆ ಮಾಡಿ: ಬಸ್ ನಿಲ್ದಾಣದಲ್ಲಿ ಹಾಕಿರುವ ಎಡ ಮತ್ತು ಮುಂದೆ ಆಸನಗಳ ನಡುವೆ ಖಾಲಿ ಜಾಗ ಹೆಚ್ಚಾಗಿದೆ. ಖಾಲಿ ಜಾಗದಲ್ಲಿ ಕಿತ್ತು ಹೋಗಿರುವ ಆಸನಗಳ ವ್ಯವಸ್ಥೆ ಮಾಡಿದರೆ ಪ್ರಯಾಣಿಕರಿಗೆ ಕುಳಿತುಕೊಳ್ಳಲು ಅನುಕೂಲವಾಗುತ್ತದೆ ಎಂದು ಪ್ರಯಾಣಿಕರು ಅಧಿಕಾರಿಗಳಿಗೆ ಮನವಿ ಮಾಡಿಕೊಳ್ಳುತ್ತಿದ್ದಾರೆ.
ಅಶುಚಿತ್ವ ಶೌಚಾಲಯ: ಶೌಚಾಲಯದಲ್ಲಿ ಮೂತ್ರ ವಿಸರ್ಜನೆ ವ್ಯವಸ್ಥೆ ಸರಿಯಾಗಿಲ್ಲದ ಕಾರಣ ಸಾರ್ವಜನಿಕರು ಶೌಚಾಲಯಕ್ಕೆ ತೆರಳುವ ವೇಳೆ ಮೂಗು ಮುಚ್ಚಿಕೊಳ್ಳುವುದು ಇಲ್ಲಿ ಕಡ್ಡಾಯ. ಬಸ್ ನಿಲ್ದಾಣಕ್ಕೆ ದಿನನಿತ್ಯ ನೂರಾರು ಪ್ರಯಾಣಿಕರು, ವಿದ್ಯಾರ್ಥಿಗಳು, ವರ್ತಕರು ಬಂದು ಹೋಗುತ್ತಾರೆ. ಪುರುಷರು ಕಾಂಪೌಂಡ್ ಗೋಡೆಯ ಮರೆಯಲ್ಲಿ ಮೂತ್ರ ಬಾಧೆ ತೀರಿಸಿಕೊಳ್ಳುತ್ತಾರೆ ಇದರಿಂದ ಮಹಿಳೆಯರು ಮುಜುಗರ ಪಡುವಂತಹ ಸ್ಥಿತಿ ಇದೆ. ಕಾರಣ ಇಲ್ಲಿ
ಅನುಕೂಲಕ್ಕೆ ಶುಚಿತ್ವ ಶೌಚಾಲಯದ ಅವಶ್ಯಕತೆಯಿದೆ ಎಂದು ಪ್ರಯಾಣಿಕರ ಆಗ್ರಹವಾಗಿದೆ.
ಹೆಸರಿಗಷ್ಟೆ ಹೈಟೆಕ್: ಪಟ್ಟಣದ ಹೃದಯ ಭಾಗದಲ್ಲಿರುವ ಹೈಕೆಟ್ ಬಸ್ಸ ನಿಲ್ದಾಣ ರೂಪಗೊಂಡು ವರ್ಷಗಳೇ ಗತಿಸಿವೆ. ಹೆಸರಿಗೆ ಮಾತ್ರ ಇದು ಹೈಟೆಕ್ ಬಸ್ಸ್ ನಿಲ್ದಾಣ. ಆದರೆ ಪ್ರಯಾಣಿಕರಿಗೆ ಯಾವ ಮೂಲಭೂತ ವ್ಯವಸ್ಥೆ ಇಲ್ಲದಂತಾಗಿದೆ ಎಂದು ಪ್ರಯಾಣಿಕರು ಹೇಳುತಿದ್ದಾರೆ.
ಶುದ್ಧ ಕುಡಿಯುವ ನೀರಿನ ಘಟಕ: ರಾಜ್ಯದಲ್ಲಿ ಮೊದಲೇ ಬರಗಾಲದ ಛಾಯೆ ಮೂಡಿ ಜನರು ಆರ್ಥಿಕ ಸಂಕಷ್ಟವನ್ನು ಎದುರಿಸುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಇಂತಹ ಸಂದರ್ಭದಲ್ಲಿ ಶುದ್ಧ ಕುಡಿಯುವ ನೀರಿನ ಘಟಕವು ಇಲ್ಲ. ಬಡವರು ಹಣ ಕೊಟ್ಟು ಬಾಟಲ್ ನೀರು ಖರೀದಿಸಿ ಕುಡಿಯುವುದಾದರೂ ಹೇಗೆ? ಪ್ರಯಾಣಿಕರಿಗೆ ಯೋಗ್ಯ ಸೌಲಭ್ಯ ನೀಡಲು ಆಗದೇ ಇರುವ ಸಾರಿಗೆ ಇಲಾಖೆ ಅಧಿಕಾರಿ ವರ್ಗ ಇದ್ದೂ ಇಲ್ಲದಂತಾಗಿದೆ ಎಂದು ಪ್ರಯಾಣಿಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.


