ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ವಿಶ್ವ ಪರಂಪರೆಯ ಮಹತ್ವ ಸಾರುವುದರೊಂದಿಗೆ ಐತಿಹಾಸಿಕ ಸ್ಮಾರಕಗಳ ಸಂರಕ್ಷಣೆ, ಸ್ವಚ್ಛತೆ ಹಾಗೂ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ ವಿಶ್ವ ಪಾರಂಪರಿಕ ಸಪ್ತಾಹ-೨೦೨೬ರ ಅಂಗವಾಗಿ ವಿಜಯಪುರ ನಗರದಲ್ಲಿ ಸಾಂಪ್ರದಾಯಿಕ ಟಾಂಗಾ ಜಾಥಾ ಆಯೋಜಿಸಲಾಯಿತು. ನಗರದ ಐತಿಹಾಸಿಕ ಗೋಳಗುಮ್ಮಟದ ಆವರಣದಲ್ಲಿ ಜಿಲ್ಲಾಧಿಕಾರಿ ಡಾ. ಆನಂದ ಕೆ. ಅವರು ಟಾಂಗಾ ಜಾಥಾಕ್ಕೆ ಚಾಲನೆ ನೀಡಿದರು.
ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದ ಜಿಲ್ಲಾಧಿಕಾರಿ ಡಾ. ಆನಂದ ಕೆ. ಅವರು, ವಿಜಯಪುರ ಜಿಲ್ಲೆಯು ಐತಿಹಾಸಿಕ ಸ್ಮಾರಕಗಳು ಹಾಗೂ ಅಪೂರ್ವ ವಾಸ್ತುಶಿಲ್ಪದ ಮೂಲಕ ದೇಶ-ವಿದೇಶಗಳಲ್ಲಿ ವಿಶಿಷ್ಟ ಗುರುತನ್ನು ಹೊಂದಿದೆ. ಇಂತಹ ಅಮೂಲ್ಯ ಐತಿಹಾಸಿಕ ಪರಂಪರೆಯನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ಪರಿಚಯಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಸ್ಮಾರಕಗಳ ಸ್ವಚ್ಛತೆ, ಸಂರಕ್ಷಣೆ ಹಾಗೂ ಅವುಗಳ ಐತಿಹಾಸಿಕ ಮಹತ್ವದ ಕುರಿತುಸಾರ್ವಜನಿಕರು ತಿಳಿದುಕೊಳ್ಳಬೇಕು. ಪ್ರವಾಸೋದ್ಯಮ ಅಭಿವೃದ್ಧಿಗೆ ಇಂತಹ ವಿಶಿಷ್ಟ ಕಾರ್ಯಕ್ರಮಗಳು ಪೂರಕವಾಗಲಿದ್ದು, ಯುವಜನರು ಹಾಗೂ ಸಾರ್ವಜನಿಕರು ಜಿಲ್ಲೆಯ ಐತಿಹಾಸಿಕ ಸ್ಮಾರಕಗಳ ಬಗ್ಗೆ ಹೆಚ್ಚಿನ ಆಸಕ್ತಿ ಬೆಳೆಸಿಕೊಳ್ಳಬೇಕು.ಜಿಲ್ಲೆಯು ಗೋಳಗುಮ್ಮಟ, ಇಬ್ರಾಹಿಂ ರೋಜಾ, ಗಗನ ಮಹಲ್, ಆನಂದ ಮಹಲ್, ಬಾರಾ ಕಮಾನ್ ಸೇರಿದಂತೆ ಹಲವು ಅಪೂರ್ವ ವಾಸ್ತುಶಿಲ್ಪದ ಸ್ಮಾರಕಗಳನ್ನು ಹೊಂದಿದ್ದು, ದೇಶ-ವಿದೇಶಗಳ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಈ ಸ್ಮಾರಕಗಳು ನಾಡಿನ ಇತಿಹಾಸ, ಸಂಸ್ಕೃತಿ, ಕಲೆ, ವಾಸ್ತುಶಿಲ್ಪ ಅಮೂಲ್ಯ ಪರಂಪರೆಯ ಸಂಕೇತಗಳಾಗಿವೆ.ಸ್ಮಾರಕಗಳ ಆವರಣದಲ್ಲಿ ಸ್ವಚ್ಛತೆ ಕಾಪಾಡುವುದು ಹಾಗೂ ಯಾವುದೇ ರೀತಿಯಲ್ಲಿ ಹಾನಿಯಾಗದಂತೆ ಸಂರಕ್ಷಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಹೇಳಿದರು.
ಜಿಲ್ಲಾಡಳಿತ, ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ, ಪ್ರವಾಸೋದ್ಯಮ ಇಲಾಖೆ ಹಾಗೂ ಬಿ.ಎಲ್.ಡಿ.ಇ ಸಂಸ್ಥೆಯ ಶ್ರೀಮತಿ ಬಂಗಾರಮ್ಮ ಸಜ್ಜನ ಮಹಿಳಾ ಕಾಲೇಜಿನ ಸಹಯೋಗದಲ್ಲಿ ಬುಧವಾರ ಬೆಳಿಗ್ಗೆ ೯.೩೦ಕ್ಕೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಐತಿಹಾಸಿಕ ಸ್ಮಾರಕಗಳು, ಶಿಲ್ಪಕಲೆ, ವಾಸ್ತುಶಿಲ್ಪ ಹಾಗೂ ಸಾಂಸ್ಕೃತಿಕ ಪರಂಪರೆಯ ಮಹತ್ವವನ್ನು ಸಾರ್ವಜನಿಕರಿಗೆ ಪರಿಚಯಿಸುವುದು ಮತ್ತು ಅವುಗಳ ಸಂರಕ್ಷಣೆಯ ಅಗತ್ಯದ ಕುರಿತು ಜಾಗೃತಿ ಮೂಡಿಸುವುದು ಈ ಸಪ್ತಾಹದ ಪ್ರಮುಖ ಉದ್ದೇಶವಾಗಿದೆ. ಈ ಹಿನ್ನೆಲೆಯಲ್ಲಿ ಸಪ್ತಾಹದ ಅಂಗವಾಗಿ ವಿವಿಧ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ವಿಜಯಪುರದ ಪ್ರಮುಖ ಐತಿಹಾಸಿಕ ಸ್ಮಾರಕಗಳ ವೀಕ್ಷಣೆಗಾಗಿ ಟಾಂಗಾ ಜಾಥಾ ಆಯೋಜಿಸಲಾಗಿತ್ತು.
ಗೋಳಗುಮ್ಮಟದ ಆವರಣದಿಂದ ಆರಂಭಗೊಂಡ ಟಾಂಗಾ ಜಾಥಾವು ನಗರದ ಪ್ರಮುಖ ಐತಿಹಾಸಿಕ ಸ್ಮಾರಕಗಳಾದ ಗಗನ ಮಹಲ್, ಆನಂದ ಮಹಲ್, ಬಾರಾ ಕಮಾನ್, ತಾಜಬಾವಡಿ, ಇಬ್ರಾಹಿಂ ರೋಜಾ, ಮಲೀಕ-ಇ-ಮೈದಾನ್ ತೋಪು ಹಾಗೂ ಉಪಲಿ ಬುರ್ಜ್ ಸೇರಿದಂತೆ ಪ್ರಮುಖ ಪ್ರವಾಸಿ ತಾಣಗಳ ಮಾರ್ಗವಾಗಿ ಸಂಚರಿಸಿತು. ಬಳಿಕ ಪ್ರವಾಸೋದ್ಯಮ ಇಲಾಖೆಯ ಕಚೇರಿ ಮಾರ್ಗವಾಗಿ ಜಿಲ್ಲಾಧಿಕಾರಿಗಳ ಕಚೇರಿಯನ್ನು ತಲುಪಿತು.
ಜಿಲ್ಲಾಧಿಕಾರಿ ಡಾ. ಆನಂದ ಕೆ. ಅವರು ಅಧಿಕಾರಿಗಳೊಂದಿಗೆ ಟಾಂಗಾ ಸವಾರಿ ಮಾಡುವ ಮೂಲಕ ನಗರದ ಐತಿಹಾಸಿಕ ಪ್ರವಾಸಿ ತಾಣಗಳಿಗೆ ಭೇಟಿ ನೀಡಿದರು.
ಈ ಸಂದರ್ಭದಲ್ಲಿ ಪುರಾತತ್ವ ಹಾಗೂ ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳು ಟಾಂಗಾಗಳ ಐತಿಹಾಸಿಕ ಹಿನ್ನೆಲೆ, ಸಾಂಪ್ರದಾಯಿಕ ಸಾರಿಗೆ ವ್ಯವಸ್ಥೆಯ ಮಹತ್ವ ಹಾಗೂ ಪ್ರವಾಸೋದ್ಯಮದಲ್ಲಿ ಅವುಗಳ ಪಾತ್ರದ ಕುರಿತು ಸಾರ್ವಜನಿಕರು ಮತ್ತು ಪ್ರವಾಸಿಗರಿಗೆ ಅರಿವು ಮೂಡಿಸಿದರು. ಸಾಂಪ್ರದಾಯಿಕ ಟಾಂಗಾಗಳ ಮೂಲಕ ಜಾಥಾ ನಡೆಸಿರುವುದು ವಿಜಯಪುರದ ಐತಿಹಾಸಿಕ ಪರಂಪರೆಗೆ ವಿಶೇಷ ಮೆರುಗು ನೀಡಿತು.
ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಡಾ.ಔದ್ರಾಮ,ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ಕಲಬುರಗಿ ವಿಭಾಗದ ಉಪ ನಿರ್ದೇಶಕರಾದ ಶ್ರೀಮತಿ ಮಂಜುಳಾ ಸಿ.ಎನ್,ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕ ಅರವಿಂದ ಹೂಗಾರ,ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಸಹಾಯಕ ಸಂರಕ್ಷಣಾಧಿಕಾರಿ ವಿಜಯಕುಮಾರ, ಮ್ಯೂಸಿಯಂ ಅಧಿಕಾರಿ ಆರ್.ಎಂ. ಕರಜಗಿ, ಪೀಟರ್ ಅಲೆಕ್ಸಾಂಡರ್, ಅಮೀನ್ ಹುಲ್ಲೂರ, ಬಿ.ಎಲ್.ಡಿ.ಇ ಸಂಸ್ಥೆಯ ಶ್ರೀಮತಿ ಬಂಗಾರಮ್ಮ ಸಜ್ಜನ ಮಹಿಳಾ ಕಾಲೇಜಿನ ಉಪನ್ಯಾಸಕರು, ವಿದ್ಯಾರ್ಥಿಗಳು ಹಾಗೂ ಪ್ರವಾಸೋದ್ಯಮ ಇಲಾಖೆಯ ಸಿಬ್ಬಂದಿ ಉಪಸ್ಥಿತರಿದ್ದರು.

