ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ತಾಲೂಕಿನ ಹಚ್ಯಾಳ ಗ್ರಾಮದ ಕರೆಪ್ಪ ಚಂದ್ರಾಮ ಬಿರಾದಾರ (೫೫) ಕೊಲೆಯಾದ ವ್ಯಕ್ತಿ. ಇವರು ಒಕ್ಕಲುತನ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ನ.೨೪ರಂದು ಸಂಜೆ ೭ ಗಂಟೆಯಿಂದ ನ.೨೫ರ ಬೆಳಗಿನ ೬ ಗಂಟೆಯ ನಡುವಿನ ಅವಧಿಯಲ್ಲಿ ಹಚ್ಯಾಳ ಗ್ರಾಮದ ರಿ.ಸ.ನಂ. ೧೫೦/೨ರ ಜಮೀನಿನಲ್ಲಿರುವ ಪತ್ರಾಸ್ ಶೆಡ್ನಲ್ಲಿ ಈ ಘಟನೆ ನಡೆದಿದೆ ಎಂದು ಪ್ರಕರಣದಲ್ಲಿ ದಾಖಲಾಗಿದೆ.
ಪ್ರಾಥಮಿಕ ದೂರಿನ ಪ್ರಕಾರ, ದುಷ್ಕರ್ಮಿಗಳು ಯಾವುದೋ ಉದ್ದೇಶದಿಂದ ಹರಿತವಾದ ಆಯುಧದಿಂದ ಕರೆಪ್ಪ ಅವರ ಬಲಗಣ್ಣಿನ ಕೆಳಭಾಗದಿಂದ ಬಲಕಿವಿಯವರೆಗೆ, ಮೂಗಿನ ಮೇಲೆ ಹಾಗೂ ಬಲಹುಬ್ಬಿನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ತೀವ್ರ ರಕ್ತಗಾಯಗೊಳಿಸಿ ಕೊಲೆ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈ ಕುರಿತು ಮೃತರ ಪತ್ನಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು, ಕೊಲೆ ಮಾಡಿದ ಆರೋಪಿಗಳನ್ನು ಪತ್ತೆಹಚ್ಚಿ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಮನವಿ ಮಾಡಿದ್ದಾರೆ. ಕೊಲೆಗೆ ನಿಖರ ಕಾರಣವೇನು? ಈ ಕೃತ್ಯ ಎಸಗಿದವರು ಯಾರು? ಎಂಬುದನ್ನು ಪೊಲೀಸ್ ತನಿಖೆಯಿಂದ ತಿಳಿದು ಬರಬೇಕಿದೆ. ಈ ಪ್ರಕರಣ ಸಿಂದಗಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

