ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳನ್ನು ಗಳಿಸಬೇಕಾದರೆ ನಿರಂತರ ಅಧ್ಯಯನ, ಸಮಯದ ಸದುಪಯೋಗ, ವಿಷಯಗಳ ಆಳವಾದ ಅರಿವು ಹಾಗೂ ಸೂಕ್ತ ಅಧ್ಯಯನ ಯೋಜನೆಯನ್ನು ಅಳವಡಿಸಿಕೊಳ್ಳಬೇಕು ಎಂದು ವಿಜಯಪುರ ಜಿಲ್ಲೆಯ ಪಪೂ ಕಾಲೇಜಿನ ಹಿರಿಯ ಉಪನ್ಯಾಸಕ ಎಲ್.ಜಿ.ಕುಂಬಾರ ಅವರು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಸಿಂದಗಿ ನಗರದ ಆರ್.ಡಿ.ಪಾಟೀಲ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಪಪೂ ಕಾಲೇಜಿನಲ್ಲಿ ಪೂಜ್ಯಶ್ರೀ ಲಿಂ.ಚೆನ್ನವೀರ ಮಹಾಸ್ವಾಮೀಜಿಗಳ ೧೩೩ನೇ ಜಯಂತ್ಯುತ್ಸವ ಅಂಗವಾಗಿ ಆಯೋಜಿಸಿದ್ದ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗಾಗಿ ಲೆಕ್ಕಶಾಸ್ತ್ರ ಮತ್ತು ವ್ಯವಹಾರ ಅಧ್ಯಯನ ವಿಷಯಗಳ ಪಾಸಿಂಗ್ ಪ್ಯಾಕೇಜ್ ಬಿಡುಗಡೆಗೊಳಿಸಿ ಉಪನ್ಯಾಸ ನೀಡಿ, ಮಾತನಾಡಿದ ಅವರು, ವಿದ್ಯಾರ್ಥಿಗಳು ಪರೀಕ್ಷೆಯನ್ನು ಆತ್ಮವಿಶ್ವಾಸದಿಂದ ಎದುರಿಸಬೇಕು. ಪ್ರತಿಯೊಂದು ವಿಷಯಕ್ಕೂ ಸಮಾನ ಆದ್ಯತೆ ನೀಡಿ, ಪ್ರತಿದಿನ ಓದುವುದರ ಜೊತೆಗೆ ಹಿಂದಿನ ವರ್ಷದ ಪ್ರಶ್ನೆಪತ್ರಿಕೆಗಳನ್ನು ಅಭ್ಯಾಸ ಮಾಡಬೇಕು. ಶಿಕ್ಷಕರು ನೀಡುವ ಮಾರ್ಗದರ್ಶನವನ್ನು ಸರಿಯಾಗಿ ಪಾಲಿಸಿದರೆ ಉತ್ತಮ ಫಲಿತಾಂಶ ಪಡೆಯಲು ಸಾಧ್ಯ ಎಂದರು.
ಈ ವೇಳೆ ಪ್ರಾಚಾರ್ಯ ಬಿ.ಎಂ.ಸಿಂಗನಳ್ಳಿ ಮಾತನಾಡಿ, ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಉನ್ನತ ಸಾಧನೆ ಮಾಡಬೇಕು ಹಾಗೂ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕಗಳನ್ನು ಪಡೆದು ಕಾಲೇಜಿಗೆ ಕೀರ್ತಿ ತರಬೇಕು ಎಂಬ ಉದ್ದೇಶದಿಂದ ಕಾಲೇಜಿನ ವತಿಯಿಂದ ವಿಶೇಷ ಶೈಕ್ಷಣಿಕ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಂಡು ನಿರಂತರ ಅಭ್ಯಾಸ, ಶಿಸ್ತು ಮತ್ತು ಪರಿಶ್ರಮದ ಮೂಲಕ ಉತ್ತಮ ಫಲಿತಾಂಶ ಸಾಧಿಸಬೇಕು ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಕಾಲೇಜಿನ ಉಪನ್ಯಾಸಕರಾದ ಪಿ.ವ್ಹಿ.ಮಹಲಿನಮಠ, ಎಸ್.ಎಚ್.ಜಾಧವ, ಡಾ.ಶರಣಬಸವ ಜೋಗೂರ, ಶಿವಶರಣ ಬೂದಿಹಾಳ, ಎನ್.ಬಿ.ಪೂಜಾರಿ, ವ್ಹಿ.ಕೆ.ಹಿರೇಮಠ, ರಾಹುಲ ನಾರಾಯಣಕರ್, ಪ್ರಸನ್ ಜೋಗೂರ, ಗವಿಸಿದ್ದಪ್ಪ ಆನೆಗುಂದಿ, ಶಿವಯೋಗಿ ತಾಳಿಕೋಟಿ, ಎಸ್.ಜಿ.ಮಾರ್ಸನಳ್ಳಿ, ವಿಶ್ವನಾಥ ನಂದಿಕೋಲ, ಬಿ.ಬಿ.ಜಮಾದಾರ, ಯು.ಸಿ.ಪೂಜೇರಿ, sಸುನೀಲ ಪಾಟೀಲ ಸೇರಿದಂತೆ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು, ಸಿಬ್ಬಂದಿವರ್ಗ ಇದ್ದರು.

