ಉದಯರಶ್ಮಿ ದಿನಪತ್ರಿಕೆ
ಇಂಡಿ: ನಗರದ ಮಧ್ಯಭಾಗದಲ್ಲಿರುವ ಶ್ರೀ ಶಾಂತೇಶ್ವರ ವಿದ್ಯಾವರ್ಧಕ ಸಂಘದ ಅಡಿಯಲ್ಲಿ ನಿರ್ಮಿಸಲು ಯೋಜಿಸಿದ ಗೋಶಾಲೆಯ ಕಟ್ಟಡಕ್ಕೆ ೧೧ ಲಕ್ಷ ರೂ, ಗಳ ಅನುದಾನ ನೀಡುವದಾಗಿ ಶಾಸಕ ಯಶವಂತರಾಯಗೌಡ ಪಾಟೀಲ ಭರವಸೆ ನೀಡಿದರು.
ಅವರು ಮಂಗಳವಾರ ಸಂಸ್ಥೆಯ ಆವರಣದಲ್ಲಿ ೧೦೦೦ ಸಸಿ ನೆಡುವ ಅಭಿಯಾನ ಹಾಗೂ ಗೋಶಾಲೆಯ ಕಟ್ಟಡ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ಉಡುಪಿಯ ಅಷ್ಟಮಠಗಳು ಹಾಗೂ ದಕ್ಷಿಣ ಕನ್ನಡದಲ್ಲಿ ಗೋವುಗಳಿಗೆ ಪೂಜ್ಯನೀಯ ಭಾವನೆಯೊಂದಿಗೆ ಸಾಕುತ್ತಾರೆ. ಅದೇ ಮಾದರಿಯಲ್ಲಿ ನಮ್ಮ ಭಾಗದಲ್ಲಿಯ ಸಂಘ ಸಂಸ್ಥೆಗಳು ಗೋವುಗಳ ಸಂರಕ್ಷಣೆ ಹಾಗೂ ಸಸಿ ನೆಡುವ ಅಭಿಯಾನಾಕ್ಕೆ ಮುಂದಾಗಿ ಪದೇ ಪದೇ ಎದುರಿಸುತ್ತಿರುವ ಬರವನ್ನು ಅಳಿಸಲು ಮುಂದಾಗಬೇಕೆಂದು ಕರೆ ನೀಡಿದರು.
ಇದಲ್ಲದೇ ನಮ್ಮ ಸಂಘ ಸಂಸ್ಥೆಗಳು ಈ ಭಾಗದ ಬಡ ವಿದ್ಯಾರ್ಥಿಗಳಿಗಾಗಿ ವೃತ್ತಿಪರ ಕೋರ್ಸುಗಳನ್ನು ತೆರೆಯಬೇಕು ಎಂದು ಸಲಹೆ ನೀಡಿದ ಅವರು ವಿವಿಧ ವೃತ್ತಿಪರ ಕೋರ್ಸುಗಳ ಮಂಜೂರಾತಿಗೆ ಸಹಕಾರ ನೀಡುವದಾಗಿ ತಿಳಿಸಿದರು. ಇಂಡಿ ನಗರಕ್ಕೆ ಕುಡಿಯುವ ನೀರಿನ ತೊಂದರೆಯಾಗಿರುವದು ಗಮನಕ್ಕೆ ಬಂದಿದ್ದು, ಇನ್ನೆರಡು ದಿವಸಗಳಲ್ಲಿ ತಾಲ್ಲೂಕಿನ ಲೋಣಿ (ಕೆಡಿ) ಗ್ರಾಮದ ಕೆರೆಯಿಂದ ನಗರಕ್ಕೆ ನೀರು ಪೂರೈಸಲಾಗುವದು ಎಂದು ತಿಳಿಸಿದರು.
ಸಮಾರಂಭದಲ್ಲಿ ಪ್ರಗತಿಪರ ರೈತ ಎಸ್.ಟಿ.ಪಾಟೀಲ ಗೋವುಗಳ ರಕ್ಷಣೆಯಿಂದ ಆಗುವ ಲಾಭಗಳನ್ನು ತಿಳಿಸಿದರು.
ಅಶೋಕ ಪಂಡಿತ ಮಾತನಾಡಿ, ಗೋಶಾಲೆಗೆ ೧೧ ಸಾವಿರ ಸಹಾಯಧನ ನೀಡುವದಾಗಿ ಪ್ರಕಟಿಸಿದರು.
ವೇದಿಕೆಯಲ್ಲಿ ಸಂಸ್ಥೆಯ ಉಪಾಧ್ಯಕ್ಷ ಡಾ. ಆದರ್ಶ ಬಗಲಿ, ಅಧ್ಯಕ್ಷ ನೀಲಕಂಠಗೌಡ ಪಾಟೀಲ, ಶಹಾ ಸಂಸ್ಥೆಯ ಅಧ್ಯಕ್ಷ ಡಿ.ಆರ್.ಶಹಾ, ನಿಂಬೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಬಿ.ಎಸ್.ಕವಲಗಿ, ವರ್ಧಮಾನ ದೋಶಿ, ಗೌರಿ ಸರ್, ಶಾಂತುಗೌಡ ಬಿರಾದಾರ, ವೆಂಕಟೇಶ ಕುಲಕರ್ಣಿ, ಶ್ರೀಮಂತ ಇಂಡಿ, ಪ್ರಶಾಂತ ಕಾಳೆ, ಜಾವೀದ ಮೋಮಿನ್ ಸೇರಿದಂತೆ ಇನ್ನಿತರರು ಇದ್ದರು.
ರಾಘವೇಂದ್ರ ಕುಲಕರ್ಣಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಾಧ್ಯಾಪಕ ಜಯಪ್ರಸಾದ ಡಿ ಸ್ವಾಗತಿಸಿದರು.

