ಸಿಂದಗಿ ನಗರದ ತಾಲೂಕು ಆಡಳಿತದೆದುರು ಪ್ರತಿಭಟನೆ | ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ರೈತ ಸೇನೆ ಮನವಿ
ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಹೊನ್ನಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯು ಬರಪೀಡಿತ ಪ್ರದೇಶವಾಗಿದ್ದು, ಇಲ್ಲಿನ ಜನರು ಉದ್ಯೋಗ ಹಾಗೂ ಮೂಲಭೂತ ಸೌಕರ್ಯಗಳ ಸಮಸ್ಯೆ ಎದುರಿಸುತ್ತಿದ್ದಾರೆ. ಉದ್ಯೋಗ ಖಾತ್ರಿ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿ ಸ್ಥಳೀಯರಿಗೆ ಉದ್ಯೋಗ ಕಲ್ಪಿಸುವ ಮೂಲಕ ನಿರುದ್ಯೋಗ ಸಮಸ್ಯೆ ನಿವಾರಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ರೈತ ಸೇನೆಯ ತಾಲೂಕು ಅಧ್ಯಕ್ಷ ಬಸವರಾಜ ಎಂ. ರಂಜುಣಗಿ ಆಗ್ರಹಿಸಿದರು.
ಸಿಂದಗಿ ನಗರದ ತಾಲೂಕು ಆಡಳಿತ ಆವರಣದಲ್ಲಿ ಪ್ರತಿಭಟಿಸಿ, ಗ್ರಾಮದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಮಾತನಾಡಿದ ಅವರು, ಹೊನ್ನಳ್ಳಿ ಗ್ರಾಮದಲ್ಲಿ ಕುಡಿಯುವ ನೀರು, ರಸ್ತೆ ಹಾಗೂ ಚರಂಡಿ ವ್ಯವಸ್ಥೆ ಸುಧಾರಿಸಬೇಕು. ಒಂದು ವೇಳೆ ಈ ಬೇಡಿಕೆಗಳನ್ನು ಈಡೇರಿಸದಿದ್ದರೆ ಇಡೀ ಗ್ರಾಮದ ಜನರು ಮುಂಬರುವ ಚುನಾವಣೆಗಳನ್ನು ಬಹಿಷ್ಕರಿಸಿ ಮತದಾನದಿಂದ ದೂರ ಉಳಿಯಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಈ ವೇಳೆ ಹೊನ್ನಳ್ಳಿ ರೈತ ಘಟಕದ ಅಧ್ಯಕ್ಷ ಸಂತೋಷ ಶಿರಸಿಗಿ, ಗೋಲಗೇರಿ ವಲಯದ ಉಪಾಧ್ಯಕ್ಷ ಅಂಬರೀಶ ಡಿಗ್ಗಿ ಮಾತನಾಡಿ, ಹೊನ್ನಳ್ಳಿ ಗ್ರಾಮದಲ್ಲಿ ಸರ್ಕಾರಿ ಆಸ್ಪತ್ರೆ ಇಲ್ಲದಿರುವುದರಿಂದ ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳಿಗೂ ಗ್ರಾಮಸ್ಥರು ಗೋಲಗೇರಿ ಅಥವಾ ಸಿಂದಗಿ ಪಟ್ಟಣದ ಆಸ್ಪತ್ರೆಗಳಿಗೆ ತೆರಳಬೇಕಾದ ಅನಿವಾರ್ಯತೆ ಇದೆ. ಸರಿಯಾದ ರಸ್ತೆ ಸೌಲಭ್ಯವಿಲ್ಲದೆ ದೂರದ ಊರುಗಳಿಗೆ ರೋಗಿಗಳನ್ನು ಕರೆದೊಯ್ಯುವುದು ಕಷ್ಟಕರವಾಗಿದೆ. ಬಡ ಕುಟುಂಬಗಳು ಖಾಸಗಿ ಆಸ್ಪತ್ರೆಗಳಿಗೆ ತೆರಳಿ ಚಿಕಿತ್ಸೆ ಪಡೆಯುವುದರಿಂದ ಆರ್ಥಿಕವಾಗಿ ಹೆಚ್ಚಿನ ಹೊರೆ ಅನುಭವಿಸುತ್ತಿವೆ. ಆದ್ದರಿಂದ ಹೊನ್ನಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸರ್ಕಾರಿ ಆಸ್ಪತ್ರೆ ನಿರ್ಮಿಸಿ, ಗ್ರಾಮೀಣ ಜನರಿಗೆ ಸ್ಥಳೀಯವಾಗಿಯೇ ಆರೋಗ್ಯ ಸೇವೆ ಒದಗಿಸಬೇಕು. ಇಲ್ಲದಿದ್ದರೆ ಮುಂಬರುವ ಚುನಾವಣೆಗಳನ್ನು ಬಹಿಷ್ಕರಿಸುವ ನಿರ್ಧಾರಕ್ಕೆ ಗ್ರಾಮಸ್ಥರು ಬಂದಿದ್ದಾರೆ.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ರೈತ ಸೇನೆಯ ನೇತೃತ್ವದಲ್ಲಿ ಗ್ರಾಮಸ್ಥರು ತಹಶೀಲ್ದಾರರಿಗೆ ಮನವಿ ಸಲ್ಲಿಸಿ, ಹೊನ್ನಳ್ಳಿ ಗ್ರಾಮದಲ್ಲಿ ಸರ್ಕಾರಿ ಆಸ್ಪತ್ರೆ ನಿರ್ಮಾಣ, ಕುಡಿಯುವ ನೀರು, ರಸ್ತೆ ಹಾಗೂ ಚರಂಡಿ ಸೇರಿದಂತೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವಂತೆ ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಏಕನಾಥ ದ್ಯಾಶಾಳ, ಪರಶು ದೊಡಮನಿ, ರಮೇಶ ಕುದುರಗೊಂಡ, ಮುಖೇಶ ಬಡಿಗೇರ, ಬಸವರಾಜ ಕಟ್ಟಿಮನಿ, ಗೋಲಗೇರಿ ವಲಯ ಅಧ್ಯಕ್ಷ ಶಬ್ಬೀರ್ ನಾಯ್ಕೋಡಿ, ಖಾದರ್ ಭಾಷಾ ಉಸ್ತಾದ, ರಾಜಶೇಖರ ಖ್ಯಾಡ, ಭೀಮರಾಯ ಕ್ಯಾದಿಗೇರಿ, ಪ್ರದೀಪ ಖ್ಯಾಡ, ರಮೇಶ ತಿಪನಟಗಿ, ಅಣ್ಣಪ್ಪ ತಿಪನಟಗಿ, ರಾಜು ಕಂಬಾರ, ಹಣಮಂತ ಛಲವಾದಿ, ರೇವಣಸಿದ್ಧ ರತ್ಯಾಳ, ಆನಂದ ಕೂಡಗಿ, ರಮೇಶ ಬಮ್ಮನಳ್ಳಿ, ರಾಜಶೇಖರ ಶಿರಸಗಿ, ನಬಿರಸೂಲ್ ಬಾಗೇವಾಡಿ ಹಾಗೂ ಭೀಮು ಛಲವಾದಿ, ಬಾಗಣ್ಣ ಅಲ್ಲಾಪೂರ ಸೇರಿದಂತೆ ಗ್ರಾಮಸ್ಥರು ಇದ್ದರು.
ಆರೋಗ್ಯ ಕೇಂದ್ರ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲು ಆಗ್ರಹ
ಸಿಂದಗಿ ತಾಲೂಕಿನ ಕಟ್ಟಕಡೆಯ ಗ್ರಾಮಗಳಾದ ಹೊನ್ನಳ್ಳಿ ಮತ್ತು ಬ್ರಹ್ಮದೇವನಮಡು ಗ್ರಾಮಗಳ ಜನರು ಸ್ವಾತಂತ್ರ‍್ಯ ಬಂದು ಎಂಟು ದಶಕಗಳು ಕಳೆದರೂ ಮೂಲಭೂತ ಸೌಕರ್ಯಗಳ ಕೊರತೆಯನ್ನು ಎದುರಿಸುತ್ತಿದ್ದಾರೆ. ಅದರಲ್ಲೂ ಆರೋಗ್ಯ ಕ್ಷೇತ್ರದಲ್ಲಿ ಗ್ರಾಮಗಳು ನಿರ್ಲಕ್ಷ್ಯಕ್ಕೆ ಒಳಗಾಗಿವೆ. ಗ್ರಾಮದಲ್ಲಿ ತಕ್ಷಣವೇ ಆರೋಗ್ಯ ಕೇಂದ್ರ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು. ಗ್ರಾಮಸ್ಥರ ಬಹುದಿನಗಳ ಬೇಡಿಕೆಗೆ ಸ್ಪಂದಿಸದಿದ್ದರೆ ಮುಂದಿನ ದಿನಗಳಲ್ಲಿ ಬೃಹತ್ ಪ್ರಮಾಣದ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

