ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಸತತ ೧೫ ನೇವರ್ಷದ ಪಾದಯಾತ್ರೆಯ ಮೂಲಕ ಯಾತ್ರೆ ಕೈಗೊಂಡಿರುವ ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲ್ಲೂಕಿನ ಗೋವಿಂದಗಿರಿ ಭಕ್ತಾಧಿಗಳು ಪಟ್ಟಣದ ಭಕ್ತರ ಊಟೋಪಚಾರದ ಸೇವೆಯ ನಂತರ ಪಂಢರಾಪುರಕ್ಕೆ ಪಾದಯಾತ್ರೆ ಬೆಳೆಸಿದರು.
ಶುಕ್ರವಾರ ಸಾಯಂಕಾಲ ಪಟ್ಟಣಕ್ಕೆ ಆಗಮಿಸಿದ ಯಾತ್ರಾರ್ಥಿಗಳು ಪಟ್ಟಣದ ಹೆಸ್ಕಾಂ ಆವರಣದಲ್ಲಿ ಭಜನೆ ಕರಿಯಪ್ಪ ನೇತೃತ್ವದಲ್ಲಿ ಕೀರ್ತನೆ, ಭಜನೆಗಳನ್ನು ನೆರವೇರಿಸಿ ವಾಸ್ತವ್ಯ ಹೂಡಿದರು.
ಈ ಸಂದರ್ಭದಲ್ಲಿ ಪಟ್ಟಣದ ವಸಂತ ನಾಡಗೌಡ ಹಾಗೂ ರಾಜೀವ ಹಾಗೂ ರಾಘವೇಂದ್ರ ಗುತ್ತೇದಾರ ಯಾತ್ರಾರ್ಥಿಗಳಿಗೆ ರಾತ್ರಿಯ ಊಟ ಹಾಗೂ ಬೆಳಿಗ್ಗೆ ಉಪಹಾರ ವ್ಯವಸ್ಥೆ ಒದಗಿಸಿದರು.
ಪ್ರತಿ ವರ್ಷದ ಪಾದಯಾತ್ರೆ ಸಮಯಕ್ಕೆ ಪಟ್ಟಣದ ಜನತೆ ನೀಡುತ್ತಿರುವ ಸಹಕಾರ ಕುರಿತು ಪಾದಯಾತ್ರೆ ಸಮಿತಿಯ ಕೊಟ್ರೇಶಿ, ವೆಂಕಟೇಶ ಹವಾಲ್ದಾರ್ ಮಾತನಾಡಿ, ಅಕ್ಟೋಬರ್ ೨೯ ರಿಂದ ಆರಂಭಗೊಂಡ ಈ ಯಾತ್ರೆಯಲ್ಲಿ ೧೬ ಜನ ಮಹಿಳೆಯರು ಸೇರಿ ಐವತ್ತೈದಕ್ಕೂ ಹೆಚ್ಚು ಜನರಿದ್ದು, ನವೆಂಬರ್ ೨೦ ಶುಕ್ರವಾರದಂದು ಪಂಢರಾಪುರ ತಲುಪುತ್ತದೆ. ನಂತರ ಎಲ್ಲ ಪಾದಯಾತ್ರಿಗಳು ತಮ್ಮ ತಮ್ಮ ಗ್ರಾಮಕ್ಕೆ ತೆರಳಲಿದ್ದಾರೆ ಎಂದರು.
ಕಾರ್ತಿಕ ಏಕಾದಶಿ ಯಾತ್ರೆಯ ನೇತೃತ್ವವನ್ನು ಭಜನೆ ಕರಿಯಪ್ಪ ವಹಿಸಿದ್ದು , ಇವರು ಸತತ ೧೫ ವರ್ಷಗಳಿಂದ ನಿರಂತರ ಪಾದಯಾತ್ರೆ ಕೈಗೊಂಡಿರುವುದು ವಿಶೇಷ. ಇವರೊಡನೆ ತಿಮ್ಮಯ್ಯ, ಹೊನ್ನುರಪ್ಪ ಹವಾಲ್ದಾರ್, ಸಾಯಣ್ಣಕೆರೆ ದೊಡ್ಡಪ್ಪ, ಭಜನೆ ದೊಡ್ಡಪ್ಪ, ಪುಟ್ಟಮ್ಮ, ನಾಗಮ್ಮ, ಪ್ರೇಮಕ್ಕ, ಚಿತ್ತಮ್ಮ, ರಾಧಮ್ಮ ನೇತೃತ್ವ ವಹಿಸಿದ್ದರು.

