ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಭಾರತೀಯ ಅಂಚೆ ಇಲಾಖೆಯ ಅಂಚೆ ಜೀವ ವಿಮೆ (ಪಿಎಲ್ಐ) ಹಾಗೂ ಗ್ರಾಮೀಣ ಅಂಚೆ ಜೀವ ವಿಮೆ (ಆರ್ಪಿಎಲ್ಐ) ಗ್ರಾಹಕರಿಗೆ ಮಹತ್ವದ ಸೂಚನೆ ನೀಡಲಾಗಿದೆ. ಇಲಾಖೆಯ ವಿಮಾ ಸೇವೆಗಳ ತಾಂತ್ರಿಕ ವ್ಯವಸ್ಥೆಯನ್ನು ಮೇಲ್ದರ್ಜೆಗೇರಿಸುವ ಹಿನ್ನೆಲೆಯಲ್ಲಿ ನವೆಂಬರ್ ೧೬ರಿಂದ ೨೪ರವರೆಗೆ ಪಿಎಲ್ಐ ಹಾಗೂ ಆರ್ಪಿಎಲ್ಐ ಸೇವೆಗಳಲ್ಲಿ ತಾತ್ಕಾಲಿಕ ವ್ಯತ್ಯಯ ಉಂಟಾಗಲಿದೆ.
ಅಂಚೆ ಜೀವವಿಮೆ ಮತ್ತು ಗ್ರಾಮೀಣ ಅಂಚೆ ಜೀವವಿಮೆ ಸೇವೆಗಳಿಗೆ ಸಂಬಂಧಿಸಿದಂತೆ ನೂತನ ವಿಮಾ ನಿರ್ವಹಣಾ ವ್ಯವಸ್ಥೆ (ಇನ್ಸೂರೆೆನ್ಸ್ ಮ್ಯಾನೆಂಜ್ಮೆಂಟ್ ಸೊಲ್ಯುಷನ್-ಆಯ್ಎಮ್ಎಸ್ ) ಜಾರಿಗೊಳಿಸಲಾಗುತ್ತಿದೆ. ಈ ವ್ಯವಸ್ಥೆಯ ಬದಲಾವಣೆ ಪ್ರಕ್ರಿಯೆ ನಡೆಯುವ ಸಂದರ್ಭದಲ್ಲಿ ಪಿಎಲ್ಐ/ಆರ್ಪಿಎಲ್ಐ ಸೇವೆಗಳು, ಅಂಚೆ ವಿಮಾ ಕೇಂದ್ರಗಳು (ಸಿಪಿಸಿ) ಹಾಗೂ ಆನ್ಲೈನ್ ಮೂಲಕ ಲಭ್ಯವಿರುವ ಕೆಲವು ಸೇವೆಗಳು ತಾತ್ಕಾಲಿಕವಾಗಿ ಸ್ಥಗಿತಗೊಳ್ಳಲಿವೆ.
ನೂತನ ತಾಂತ್ರಿಕ ವ್ಯವಸ್ಥೆ ಜಾರಿಯಿಂದ ಮುಂದಿನ ದಿನಗಳಲ್ಲಿ ಪಿಎಲ್ಐ/ಆರ್ಪಿಎಲ್ಐ ಸೇವೆಗಳು ಮತ್ತಷ್ಟು ಸುಗಮ ಹಾಗೂ ಪರಿಣಾಮಕಾರಿಯಾಗಲಿವೆ ಎಂದು ವಿಜಯಪುರ ಜಿಲ್ಲಾ ಅಂಚೆ ಅಧೀಕ್ಷಕ ಮಹಾಂತೇಶ ತೊಗರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
