ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಕರ್ನಾಟಕ ಮುದ್ರಾಂಕ ಅಂದಾಜು, ಪ್ರಕಟಣೆ ಮತ್ತು ಸ್ಥಿರಾಸ್ತಿಗಳ ಮಾರುಕಟ್ಟೆ ಮೌಲ್ಯದ ಮಾರ್ಗಸೂಚಿಗಳ ಪರಿಷ್ಕರಣೆಗಾಗಿ ಕೇಂದ್ರ ಮೌಲ್ಯಮಾಪನ ಸಮಿತಿಯ ರಚನೆ ನಿಯಮಗಳು-೨೦೦೩ರ ನಿಯಮ ೪(೧)ರಡಿ ರಚಿಸಲಾಗಿರುವ ಮಾರುಕಟ್ಟೆ ಮೌಲ್ಯಮಾಪನ ಉಪ ಸಮಿತಿ, ತಿಕೋಟಾ ವತಿಯಿಂದ ಉಪ ನೋಂದಣಿ ಕಚೇರಿ ವ್ಯಾಪ್ತಿಗೆ ಒಳಪಡುವ ಸ್ಥಿರಾಸ್ತಿಗಳ ಮಾರುಕಟ್ಟೆ ಮೌಲ್ಯದ ಮಾರ್ಗಸೂಚಿ ಬೆಲೆಗಳ ಕರಡು ಪ್ರತಿ ಪ್ರಕಟಿಸಲಾಗಿದ್ದು, ಸಾರ್ವಜನಿಕರಿಂದ ಆಕ್ಷೇಪಣೆಗಳನ್ನು ಆಹ್ವಾನಿಸಲಾಗಿದೆ.
ಉಪ ಸಮಿತಿಯ ಅಧ್ಯಕ್ಷರು ಹಾಗೂ ತಹಶೀಲ್ದಾರರ ಅಧ್ಯಕ್ಷತೆಯಲ್ಲಿ ನ.೬ರಂದು ನಡೆದ ಸಭೆಯಲ್ಲಿ ಉಪ ಸಮಿತಿಯ ಎಲ್ಲ ಸದಸ್ಯರು ಪಾಲ್ಗೊಂಡು, ಸ್ಥಿರಾಸ್ತಿಗಳ ಪರಿಷ್ಕೃತ ಮಾರ್ಗಸೂಚಿ ದರಗಳನ್ನು ನಿರ್ಧರಿಸಿದ್ದಾರೆ.
ಈ ಪರಿಷ್ಕೃತ ದರಗಳ ಕರಡು ಪ್ರತಿಯನ್ನು ನ.೯ರಂದು ಪ್ರಾಥಮಿಕ ಗೆಜೆಟ್ ಅಧಿಸೂಚನೆ ಮೂಲಕ ಪ್ರಕಟಿಸಲಾಗಿದ್ದು, ತಿಕೋಟಾ ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿ ಸಾರ್ವಜನಿಕರ ಮಾಹಿತಿಗಾಗಿ ಪ್ರಚುರಪಡಿಸಿದೆ.
ಪರಿಷ್ಕೃತ ಮಾರ್ಗಸೂಚಿ ದರಗಳ ಕುರಿತು ಸಾರ್ವಜನಿಕರು ಯಾವುದೇ ಸಲಹೆ, ಸೂಚನೆ ಅಥವಾ ಆಕ್ಷೇಪಣೆಗಳಿದ್ದಲ್ಲಿ ಲಿಖಿತ ನ.೨೮ರೊಳಗಾಗಿ ಉಪ ನೋಂದಣಾಧಿಕಾರಿಗಳು ಹಾಗೂ ಮಾರುಕಟ್ಟೆ ಮೌಲ್ಯಮಾಪನ ಉಪ ಸಮಿತಿಯ ಸದಸ್ಯ ಕಾರ್ಯದರ್ಶಿಗಳು ತಿಕೋಟಾ ಇವರಿಗೆ ಸಲ್ಲಿಸಬಹುದಾಗಿದೆ ಎಂದು ತಿಕೋಟಾದ ಉಪ ನೋಂದಣಾಧಿಕಾರಿಗಳ ಪ್ರಕಟಣೆ ತಿಳಿಸಿದೆ.
