ಸಿಂದಗಿಯಲ್ಲಿ ಆರೆಸ್ಸೆಸ್ ಭವ್ಯ ಪಥಸಂಚಲನ | ಕರ್ನಾಟಕ ಉತ್ತರ ಮತ್ತು ದಕ್ಷಿಣ ಪ್ರಾಂತಗಳ ಪ್ರಚಾರ ವಿಭಾಗದ ಪ್ರಮುಖ ಅರುಣಕುಮಾರ ಅಭಿಮತ
ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ದೇಶದಲ್ಲಿ ಹಿಂದೂ ಸಮಾಜವನ್ನು ಒಡೆಯುವ ಪ್ರಯತ್ನಗಳು ನಡೆಯುತ್ತಿದ್ದು, ಜಾತಿ, ಸಮುದಾಯಗಳ ಹೆಸರಿನಲ್ಲಿ ಸಮಾಜವನ್ನು ವಿಭಜಿಸುವ ಪ್ರವೃತ್ತಿ ಹೆಚ್ಚುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ. ರಾಜಕೀಯ ಲಾಭಕ್ಕಾಗಿ ವೀರಶೈವ ಮತ್ತು ಲಿಂಗಾಯತ ಸಮಾಜವನ್ನು ಒಡೆಯುವ ಪ್ರಯತ್ನಗಳು ಎಷ್ಟು ದಿನ ನಡೆಯಬೇಕು? ದೇಶದ ಏಕತೆ ಮತ್ತು ಸಮಾಜದ ಹಿತದೃಷ್ಟಿಯಿಂದ ನಾವೆಲ್ಲರೂ ಜಾತಿ ಗೋಡೆಗಳನ್ನು ಕಟ್ಟಿಕೊಳ್ಳದೆ, ನಾವೆಲ್ಲರೂ ಹಿಂದೂಗಳು ಎಂಬ ಏಕತೆಯ ಭಾವನೆಯಿಂದ ಬದುಕು ಕಟ್ಟಿಕೊಳ್ಳಬೇಕು ಎಂದು ಕರ್ನಾಟಕ ಉತ್ತರ ಮತ್ತು ದಕ್ಷಿಣ ಪ್ರಾಂತಗಳ ಪ್ರಚಾರ ವಿಭಾಗದ ಪ್ರಮುಖ ಅರುಣಕುಮಾರ ಹೇಳಿದರು.
ಸಿಂದಗಿ ನಗರದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ವತಿಯಿಂದ ವಿಜಯದಶಮಿ ನಿಮಿತ್ತ ಹಾಗೂ ಸಂಘದ ೧೦೧ ವರ್ಷದ ಅಂಗವಾಗಿ ಗುರುವಾರ ಹಮ್ಮಿಕೊಂಡಿದ್ದ ಭವ್ಯ ಪಥಸಂಚಲನ ಹಾಗೂ ಸಂಗಮೇಶ್ವರ ದೇವಸ್ಥಾನದ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ದೇಶಕ್ಕಾಗಿ ತ್ಯಾಗ, ಬಲಿದಾನ ಮಾಡಿದ ಮಹನೀಯರನ್ನು ಒಂದೊಂದು ಜಾತಿ, ಸಮುದಾಯಕ್ಕೆ ಸೀಮಿತಗೊಳಿಸುವುದು ಎಷ್ಟರ ಮಟ್ಟಿಗೆ ಸರಿ ಎಂಬುದನ್ನು ಸಮಾಜ ಆತ್ಮಾವಲೋಕನ ಮಾಡಿಕೊಳ್ಳಬೇಕು. ಡಾ.ಬಿ.ಆರ್.ಅಂಬೇಡ್ಕರ್, ಕಿತ್ತೂರರಾಣಿ ಚೆನ್ಮಮ್ಮ ಅಂತಹ ಮಹನೀಯರ ನೀಡಿದ ಕೊಡುಗೆ ಈ ದೇಶಕ್ಕೆ ಅನನ್ಯ. ಆದರೆ ಅವರನ್ನು ಒಂದು ವರ್ಗಕ್ಕೆ ಸೀಮಿತಗೊಳಿಸುವುದು ಸರಿಯಾದ ಕ್ರಮವಲ್ಲ. ಅವರು ದೇಶದ ಹಿತಕ್ಕಾಗಿ ಶ್ರಮಿಸಿದ ಮಹಾನ್ ವ್ಯಕ್ತಿ. ದೇಶದ ಸ್ವಾತಂತ್ರ‍್ಯ, ಏಕತೆ ಮತ್ತು ಸಮಾಜದ ಉನ್ನತಿಗಾಗಿ ಹೋರಾಡಿದ ಮಹನೀಯರೆಲ್ಲರೂ ಇಡೀ ದೇಶದ ಆಸ್ತಿಯಾಗಿದ್ದಾರೆ. ಅವರ ಕೊಡುಗೆಗಳನ್ನು ಜಾತಿ, ಧರ್ಮದ ಚೌಕಟ್ಟಿನಲ್ಲಿ ನೋಡುವ ಮನೋಭಾವ ಬದಲಾಗಬೇಕು ಎಂದರು.
ಸಮಾಜದಲ್ಲಿ ಮೇಲ್ವರ್ಗ, ಕೆಳವರ್ಗ ಎಂಬ ಭೇದಭಾವ ಇರಬಾರದು. ವ್ಯಕ್ತಿಯ ಜಾತಿ ಅಥವಾ ಸಮುದಾಯಕ್ಕಿಂತ ಆತನ ನಡವಳಿಕೆ, ಗುಣ, ಸಂಸ್ಕಾರ ಮತ್ತು ಸಮಾಜದ ಬಗ್ಗೆ ಹೊಂದಿರುವ ಕಾಳಜಿಯೇ ಆತನ ವ್ಯಕ್ತಿತ್ವವನ್ನು ಪರಿಚಯಿಸುತ್ತದೆ. ಸಿಂಧೂ ಬಲ್ಲಾಳರು ಆಳಿದ ಐತಿಹಾಸಿಕ ಹಿನ್ನೆಲೆಯುಳ್ಳ ಸಿಂದಗಿ ನಾಡಿನಲ್ಲಿ ದೇಶಭಕ್ತಿಯ ಪರಂಪರೆ ಅಡಗಿದೆ. ಸಿಂದಗಿಯ ಮಣ್ಣಿನಲ್ಲಿಯೇ ದೇಶಭಕ್ತಿಯ ಭಾವನೆ ಇದೆ. ಇಂತಹ ನೆಲದಲ್ಲಿ ಹಿಂದೂ ಸಮಾಜದ ಸಂಘಟನೆ ಹಾಗೂ ಜಾಗೃತಿಗೆ ಹೆಚ್ಚಿನ ಆದ್ಯತೆ ನೀಡಬೇಕಾಗಿದೆ. ಸಂಘಟನೆಯ ಕಾರ್ಯ ಕೇವಲ ಕೆಲವೇ ಪ್ರದೇಶಗಳಿಗೆ ಸೀಮಿತವಾಗದೆ ತಾಲೂಕಿನ ಪ್ರತಿಯೊಂದು ಹಳ್ಳಿ, ಗ್ರಾಮ ಮತ್ತು ಮೂಲೆ ಮೂಲೆಯಲ್ಲಿಯೂ ಸಂಘದ ಶಾಖೆಗಳು ಆರಂಭವಾಗಬೇಕು. ಪ್ರತಿಯೊಬ್ಬರೂ ದೇಶಭಕ್ತಿ ಮತ್ತು ಸಾಮಾಜಿಕ ಜವಾಬ್ದಾರಿಯ ಮನೋಭಾವ ಬೆಳೆಸಿಕೊಂಡು ಸಂಘಟಿತ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದ ಸಾನಿಧ್ಯವನ್ನು ಸಿಂದಗಿ ಭೀಮಾಶಂಕರ ಮಠದ ಪೀಠಾಧೀಶ್ವರ ಸದ್ಗುರು ದತ್ತಪ್ಪಯ್ಯ ಸ್ವಾಮೀಜಿ ವಹಿಸಿ ಆಶೀರ್ವಚನ ನೀಡಿದರು.
ಕಾರ್ಯಕ್ರಮದಲ್ಲಿ ಮಾಜಿ ಶಾಸಕ ರಮೇಶ ಭೂಸನೂರ, ಅರುಣ ಶಹಾಪೂರ, ಶ್ರೀಶೈಲಗೌಡ ಬಿರಾದಾರ ಮಾಗಣಗೇರಿ, ಸಂತೋಷ ಪಾಟೀಲ, ಅಶೋಕ ನೇಗಿನಾಳ, ಶೇಖರ ಪಾಟೀಲ, ಡಾ.ಸಿದ್ರಾಮ ಚಿಂಚೊಳ್ಳಿ, ಗುರು ದೇಸಾಯಿ, ಈರಣ್ಣ ರಾವುರ, ಶಿವಾನಂದ ರೋಡಗಿ, ಬಸನಗೌಡ ಪಾಟೀಲ, ಮಲ್ಲು ಪೂಜಾರಿ, ವಿನೋದ ಬಡಿಗೇರ ಸೇರಿದಂತೆ ಇತರರು ಇದ್ದರು.
ಪಥಸಂಚಲನ
ಸಿಂದಗಿಯ ಶ್ರೀ ಸಂಗಮೇಶ್ವರ ದೇವಸ್ಥಾನದಿಂದ ಆರಂಭವಾಗಿ ಸ್ವಾಮಿ ವಿವೇಕಾನಂದ ವೃತ್ತ, ತೊಂಟದ ಸಿದ್ದಲಿಂಗ ಶ್ರೀಗಳ ರಸ್ತೆ, ಅಂಬೇಡ್ಕರ್ ವೃತ್ತ, ರೇ.ಚ.ರೇವಡಿಗಾರ ರಸ್ತೆ, ಅಂಬಿಗರ ಚೌಡಯ್ಯ ವೃತ್ತ, ಸಂಗೊಳ್ಳಿ ರಾಯಣ್ಣ ವೃತ್ತ, ಬಂದಾಳ ರಸ್ತೆ, ಜ್ಯೋತಿ ನಗರದ ಮಾರ್ಗ ಸೇರಿದಂತೆ ಪಟ್ಟಣದ ಪ್ರಮುಖ ರಸ್ತೆಗಳ ಮೂಲಕ ಸಂಚರಿಸಿ ಸಂಗಮೇಶ್ವರ ದೇವಸ್ಥಾನದ ಆವರಣ ತಲುಪಿತು. ಪಥಸಂಚಲನದ ಮಾರ್ಗದುದ್ದಕ್ಕೂ ಮನೆಯ ಮುಂದೆ ಮಹಿಳೆಯರು ರಂಗೋಲಿಯಿಂದ ಅಲಂಕರಿಸಿ ಮಹಾಪುರುಷರ ಭಾವಚಿತ್ರಗಳನ್ನು ಇರಿಸಿ ಭಗವಾಧ್ವಜಕ್ಕೆ ಗೌರವ ಸಲ್ಲಿಸಿದರು. ಶಿಸ್ತುಬದ್ಧವಾಗಿ ಹೆಜ್ಜೆಹಾಕಿದ ೧೦೦೦ಕ್ಕೂ ಅಧಿಕ ಗಣವೇಷಧಾರಿಗರಿಗೆ ಪುಷ್ಪವೃಷ್ಟಿ ಮಾಡಲಾಯಿತು. ಯಾವುದೇ ಅಹಿತಕರ ಘಟನೆ ನಡೆಯದಂತೆ ಮಾರ್ಗದುದ್ದಕ್ಕೂ ಪೊಲೀಸ್ ಇಲಾಖೆ ಸೂಕ್ತ ಬಂದೋಬಸ್ತ್ ನೀಡಿತು.

