ಕಾಂಗ್ರೆಸ್ ಸರ್ಕಾರಕ್ಕೆ ಉಲಮಾಗಳ ಎಚ್ಚರಿಕೆ | 800 ಹುದ್ದೆಗಳನ್ನು 320ಕ್ಕೆ ಸೀಮಿತಗೊಳಿಸುವುದು ಅನ್ಯಾಯ | ಉರ್ದು ಮಾಧ್ಯಮದ ಮಕ್ಕಳ ಭವಿಷ್ಯದೊಂದಿಗೆ ಚೆಲ್ಲಾಟವಾಡದಿರಲು ಉಲಮಾಗಳ ಆಗ್ರಹ
ಉದಯರಶ್ಮಿ ದಿನಪತ್ರಿಕೆ
ಇಂಡಿ: ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲು ಮುಸ್ಲಿಂ ಸಮುದಾಯದ ಜೊತೆಗೆ ಉಲಮಾ-ಎ-ಕಿರಾಮ್ ಅವರ ಪಾತ್ರವೂ ಮಹತ್ವದ್ದಾಗಿದೆ. ಉಲಮಾಗಳ ಒಂದು ಕರೆಯ ಮೇರೆಗೆ ಮುಸ್ಲಿಂ ಸಮುದಾಯದ ಶೇ.90ರಷ್ಟು ಜನರು ಕಾಂಗ್ರೆಸ್ ಪಕ್ಷಕ್ಕೆ ಮತ ಚಲಾಯಿಸಿ ಸರ್ಕಾರ ರಚನೆಗೆ ಸಹಕಾರ ನೀಡಿದ್ದಾರೆ. ಆದರೆ ಇಂದು ಉರ್ದು ಮಾಧ್ಯಮದಲ್ಲಿ ಶಿಕ್ಷಣ ಪಡೆದ ವಿದ್ಯಾರ್ಥಿಗಳು ಹಾಗೂ ಶಿಕ್ಷಕ ಆಕಾಂಕ್ಷಿಗಳಿಗೆ ನ್ಯಾಯ ಒದಗಿಸುವಲ್ಲಿ ಸರ್ಕಾರ ನಿರ್ಲಕ್ಷ್ಯ ತೋರಿದರೆ, ಅದಕ್ಕೆ ತಕ್ಕ ಉತ್ತರ ನೀಡುವ ಶಕ್ತಿಯೂ ಸಮುದಾಯಕ್ಕಿದೆ ಎಂದು ಇಂಡಿಯ ಉಲಮಾ ಹಜರತ್‌ಗಳು ಎಚ್ಚರಿಕೆ ನೀಡಿದ್ದಾರೆ.
ಉರ್ದು ಮಾಧ್ಯಮ ಶಾಲೆಗಳ ಶಿಕ್ಷಕರ ನೇಮಕಾತಿಗೆ ಸಂಬಂಧಿಸಿದಂತೆ ಟಿಪ್ಪು ಕ್ರಾಂತಿ ಸೇನಾ ವಿದ್ಯಾರ್ಥಿ ಘಟಕದ ವತಿಯಿಂದ ಮುಖ್ಯಮಂತ್ರಿಗಳಿಗೆ ಸಲ್ಲಿಸಲಾದ ಮನವಿಗೆ ಬೆಂಬಲ ವ್ಯಕ್ತಪಡಿಸಿ ಮಾತನಾಡಿದ ಉಲಮಾಗಳು, ರಾಜ್ಯ ಸರ್ಕಾರದ ನಡೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ರಾಜ್ಯ ಸರ್ಕಾರ 15 ಸಾವಿರ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಪ್ರಕಟಿಸಿದ ಸಂದರ್ಭದಲ್ಲಿ ಉರ್ದು ಮಾಧ್ಯಮ ಶಾಲೆಗಳಿಗೆ ಆರಂಭದಲ್ಲಿ ಯಾವುದೇ ಹುದ್ದೆಗಳನ್ನು ಮೀಸಲಿಡದಿರುವುದು ಅನ್ಯಾಯವಾಗಿದೆ. ಈ ಕುರಿತು ನಿರಂತರ ಹೋರಾಟ, ಪ್ರತಿಭಟನೆ ಹಾಗೂ ಮನವಿಗಳ ಫಲವಾಗಿ ಸಚಿವ ಸಂಪುಟ ಸಭೆಯಲ್ಲಿ ಉರ್ದು ಮಾಧ್ಯಮ ಶಾಲೆಗಳಿಗೆ 800 ಶಿಕ್ಷಕರ ಹುದ್ದೆಗಳನ್ನು ಮಂಜೂರು ಮಾಡಲಾಗಿತ್ತು. ಆದರೆ ಇದೀಗ ಪ್ರಕಟಿಸಿರುವ ಸಿ & ಆರ್ ನಿಯಮಗಳಲ್ಲಿ ಕೇವಲ 320 ಹುದ್ದೆಗಳನ್ನು ಮಾತ್ರ ಉಲ್ಲೇಖಿಸಿರುವುದು ಖಂಡನೀಯವಾಗಿದೆ ಎಂದು ಹೇಳಿದರು.
ಅಲ್ಲದೆ, ಕೇವಲ ಉರ್ದು ಭಾಷಾ ಶಿಕ್ಷಕರ ಹುದ್ದೆಗಳಿಗೆ ಸೀಮಿತಗೊಳಿಸದೆ ಗಣಿತ, ವಿಜ್ಞಾನ, ಸಮಾಜ ವಿಜ್ಞಾನ ಸೇರಿದಂತೆ ಎಲ್ಲ ವಿಷಯಗಳ ಶಿಕ್ಷಕರ ಹುದ್ದೆಗಳನ್ನು ಮಂಜೂರು ಮಾಡಬೇಕು. ಉರ್ದು ಮಾಧ್ಯಮದಲ್ಲಿ ಕಲಿತ ವಿದ್ಯಾರ್ಥಿಗಳಿಗೂ ಉದ್ಯೋಗ ಪಡೆಯುವ ಸಮಾನ ಅವಕಾಶ ಕಲ್ಪಿಸಬೇಕು ಎಂದು ಆಗ್ರಹಿಸಿದರು.
ಸಚಿವ ಸಂಪುಟದಲ್ಲಿ ಅನುಮೋದಿಸಲಾದ 800 ಉರ್ದು ಮಾಧ್ಯಮ ಶಿಕ್ಷಕರ ಹುದ್ದೆಗಳನ್ನು ಸಂಪೂರ್ಣವಾಗಿ ಜಾರಿಗೊಳಿಸಿ, ಎಲ್ಲ ವಿಷಯಗಳ ಶಿಕ್ಷಕರ ನೇಮಕಾತಿಗೆ ಅವಕಾಶ ಕಲ್ಪಿಸಬೇಕು. ಉರ್ದು ಮಾಧ್ಯಮದ ಶಿಕ್ಷಕ ಆಕಾಂಕ್ಷಿಗಳಿಗೆ ನ್ಯಾಯ ಒದಗಿಸುವ ಮೂಲಕ ಸರ್ಕಾರ ತನ್ನ ಬದ್ಧತೆಯನ್ನು ಸಾಬೀತುಪಡಿಸಬೇಕು ಎಂದು ಇಂಡಿಯ ಉಲಮಾ ಹಜರತ್‌ಗಳು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಧರ್ಮಗುರುಗಳಾದ ಮೌಲಾನಾ ಜಿಯಾವುಲ ಹಕ್ಕ ಉಮರಿ, ಮೌಲಾನಾ ಶಾಕೀರ ಮುಲ್ಲಾ, ಹಾಫೀಜ್ ಫೀರೋಜ್ ಬಾಗವಾನ, ಮೌಲಾನಾ ಸದ್ದಾಂ ಶೇಖ್, ಸಮೀರ್ ಶೇಖ್, ಟಿಪ್ಪು ಕ್ರಾಂತಿ ಸೇನಾ ವಿದ್ಯಾರ್ಥಿ ಘಟಕದ ಉಪಾಧ್ಯಕ್ಷ ಮುಜೀಬುರಹೇಮಾನ ಅಫಜಲಪುರ, ಹಸನ ಮುಜಾವಾರ, ಅಯುಬ ನಾಟಿಕಾರ ಸೇರಿದಂತೆ ಹಲವರಿದ್ದರು.

