ನಬಿರೋಶನ್ ಪ್ರಕಾಶನ, ಬೋರಗಿ ವತಿಯಿಂದ ಕ್ರೀಡಾ ಸಮವಸ್ತ್ರ ವಿತರಣೆ.
ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ವಿದ್ಯಾರ್ಥಿಗಳ ದೈಹಿಕ ಮತ್ತು ಮಾನಸಿಕ ಬದುಕಿಗೆ ಕ್ರೀಡೆ ಸಹಾಯಕಾರಿ, ಹೀಗಾಗಿ ಕಲಿಕೆ ಜೊತೆಗೆ ಕ್ರೀಡೆಗೂ ಮಹತ್ವ ನೀಡಿದರೆ ಮಕ್ಕಳಲ್ಲಿ ಆತ್ಮ ಸ್ಥೈರ್ಯ ಹೆಚ್ಚುತ್ತದೆ ಎಂದ ಆರಕ್ಷಕ. ಮೌಲಾಲಿ ಆಲಗೂರ ಹೇಳಿದರು.
ತಾಲೂಕಿನ ಬೋರಗಿ ಗ್ರಾಮದ ಸರ್ಕಾರಿ ಉನ್ನತಿಕರಿಸಿದ ಶಾಲಾ ವಿದ್ಯಾರ್ಥಿಗಳು ತಾಲೂಕು ಮಟ್ಟದ ವಿವಿಧ ವಿಭಾಗದ ಕ್ರೀಡಾಕೂಟದಲ್ಲಿ ಗೆಲುವು ಸಾಧಿಸಿ, ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ಹಿನ್ನೆಲೆ ನಬಿರೋಶನ್ ಪ್ರಕಾಶನ ವತಿಯಿಂದ 7 ವಿಧ್ಯಾರ್ಥಿಗಳಿಗೆ ಕ್ರೀಡಾ ಸಮವಸ್ತ್ರ ನೀಡಿ ಮಾತನಾಡಿದರು.
ಕಲಿಕೆ ಜ್ಞಾನ ಹೆಚ್ಚಿಸಿದರೆ ಕ್ರೀಡೆ ಆರೋಗ್ಯಕರ ಬದುಕಿಗೆ ಬುನಾದಿ. ಹೀಗಾಗಿ ಗ್ರಾಮೀಣ ಭಾಗದ ವಿಧ್ಯಾರ್ಥಿಗಳು ಕ್ರೀಡೆ ಮತ್ತು ಕಲಿಕೆಯಲ್ಲಿ ಸದಾ ಮುಂಚೂಣಿಯಲ್ಲಿದ್ದಾರೆ. ಆದರೆ ಇವರಿಗೆ ಸೂಕ್ತ ಪ್ರೋತ್ಸಾಹ ಸಿಗುತ್ತಿಲ್ಲ. ಒಂದು ವೇಳೆ ಪ್ರೋತ್ಸಾಹ ದೊರೆತರೆ ರಾಜ್ಯ, ರಾಷ್ಟ್ರ ಮಟ್ಟದ ಕ್ರೀಡೆಯಲ್ಲಿ ಭಾಗವಹಿಸುವ ಸಾಮರ್ಥ್ಯ ಇವರಿಗಿದೆ ಎಂದರು.
ಎಸ್.ಡಿ.ಎಂ.ಸಿ ಅಧ್ಯಕ್ಷ ಶ್ರೀಶೈಲ ಹಿಪ್ಪರಗಿ, ಎಸ್.ಡಿ.ಎಂ.ಸಿ ಸದಸ್ಯರಾದ ದೇವಿಂದ್ರ, ಕೋಟಾರಗಸ್ತಿ, ವಿಶ್ವನಾಥ ನಾವಿ ಮಾತನಾಡಿ, ಗ್ರಾಮೀಣ ಭಾಗದ ಮಕ್ಕಳಲ್ಲಿ ಪ್ರತಿಭೆ ಇದೆ. ಪ್ರೋತ್ಸಾಹ ಇಲ್ಲ ಹೀಗಾಗಿ ಮಕ್ಕಳಲ್ಲಿ ಕ್ರೀಡಾ ಆಸಕ್ತಿ ಕುಗ್ಗುತ್ತಿದೆ. ಕ್ರೀಡಾ ಮನೊಬಲ ತುಂಬವ ಸತ್ಕಾರ್ಯವಾಗಬೇಕು. ಆರಕ್ಷಕ ಮೌಲಾಲಿ ಆಲಗೂರ ವಿಧ್ಯಾರ್ಥಿಗಳಿಗೆ ಕ್ರೀಡಾ ಸಮವಸ್ತ್ರ ವಿತರಿಸಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸುವ ಕೆಲಸ ಮಾಡಿದ್ದಾರೆ. ಅವರ ಈ ನಿಸ್ವಾರ್ಥ ಸೇವೆ ಶ್ಲಾಘನೀಯ ಮತ್ತು ಅಭಿನಂದನಾರ್ಹ ಎಂದರು.
ಇದೇ ವೇಳೆ ಮೌಲಾಲಿ ಆಲಗೂರಗೆ ಸನ್ಮಾನಿಸಲಾಯಿತು.
ಶಾಲಾ ಮುಖ್ಯ ಗುರುಗಳಾದ ಡಿ.ಕೆ ಜವಳಗಿ, ದೈಹಿಕ ಶಿಕ್ಷಕ ಶಿವಾನಂದ ದೇಸಾಯಿ, ಮಡಿವಾಳಪ್ಪ ಸೇರಿದಂತೆ ಶಾಲಾ ಮಕ್ಕಳು ಭಾಗವಹಿಸಿದ್ದರು.

