ತಾಳಿಕೋಟೆ ಹಾಗೂ ಮುದ್ದೇಬಿಹಾಳ ತಾಲೂಕು ಪಂಚಾಯಿತಿಗಳ ಪ್ರಗತಿ ಪರಿಶೀಲನಾ ಸಭೆ
ಉದಯರಶ್ಮಿ ದಿನಪತ್ರಿಕೆ
ತಾಳಿಕೋಟೆ: ಹರನಾಳ ಹಾಗೂ ಗಡಿಸೋಮನಾಳ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದ್ದರೂ ಹಲವು ಬಾರಿ ಮೌಖಿಕವಾಗಿ ಹಾಗೂ ಪತ್ರದ ಮೂಲಕ ಮನವಿ ಮಾಡಿದರೂ ನೀರು ಪೂರೈಕೆಗೆ ಕ್ರಮ ಕೈಗೊಳ್ಳದಿರುವುದಕ್ಕೆ ತಾಳಿಕೋಟೆ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಅನಸೂಯಾ ಚಲವಾದಿ ಅವರು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಅಭಿಯಂತರ ಸಿ.ಎಲ್.ರಾಠೋಡ ಅವರನ್ನು ಸಭೆಯಲ್ಲಿಯೇ ತರಾಟೆಗೆ ತೆಗೆದುಕೊಂಡರು.
ಮಂಗಳವಾರ ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ತಾಳಿಕೋಟೆ ಹಾಗೂ ಮುದ್ದೇಬಿಹಾಳ ತಾಲೂಕು ಪಂಚಾಯಿತಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಈ ಘಟನೆ ನಡೆಯಿತು.
ಹರನಾಳ ಹಾಗೂ ಗಡಿಸೋಮನಾಳ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಿರುವ ಕುರಿತು ನಮ್ಮ ಇಲಾಖೆಯಿಂದ ಹಲವು ಬಾರಿ ಮೌಖಿಕವಾಗಿ ತಿಳಿಸಲಾಗಿದೆ. ಅಲ್ಲದೇ, ಪತ್ರದ ಮೂಲಕವೂ ಗಮನಕ್ಕೆ ತರಲಾಗಿದೆ. ಆದರೂ ನೀರು ಪೂರೈಸುವ ಯಾವುದೇ ಕ್ರಮ ಕೈಗೊಂಡಿಲ್ಲ. ಇದರಿಂದ ಗ್ರಾಮಸ್ಥರ ವಿರೋಧವನ್ನು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ನಮ್ಮ ಇಲಾಖೆ ಎದುರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅಧಿಕಾರಿಯ ನಿರ್ಲಕ್ಷದ ಕಾರ್ಯವೈಖರ್ಯದ ಕುರಿತು ಅನಸೂಯಾ ಚಲವಾದಿ ಅಸಮಾಧಾನ ವ್ಯಕ್ತಪಡಿಸಿದರು.
ಇದೇ ಸಮಯದಲ್ಲಿ ಉಪಸ್ಥಿತರಿದ್ದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿ ಹಿರೇಗೌಡರ ಅವರಿಗೆ ಸೂಚನೆ ನೀಡಿದ ಅಧಿಕಾರಿಗಳು ನೀರು ಪೂರೈಸುವ ಭರವಸೆ ನೀಡುವುದಷ್ಟೇ ಸಾಕಾಗುವುದಿಲ್ಲ. ಕೂಡಲೇ ಕಾರ್ಯಪ್ರವೃತ್ತರಾಗಿ ಗ್ರಾಮಗಳಿಗೆ ನೀರು ಪೂರೈಸಲು ಸೂಚನೆ ನೀಡಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ತಾಪಂ ಆಡಳಿತಾಧಿಕಾರಿ ಹಾಗೂ ವಿಜಯಪುರ ಕೃಷಿ ಇಲಾಖೆ ಜಂಟಿ ನಿರ್ದೇಶಕ ಶಿವನಗೌಡ ಪಾಟೀಲ ಮಾತನಾಡಿ, ಈ ಬಾರಿ ಇಡೀ ರಾಜ್ಯದಲ್ಲಿ ಅದರಲ್ಲೂ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಹಾಗೂ ತಾಳಿಕೋಟೆ ತಾಲೂಕುಗಳಲ್ಲಿ ವಾಡಿಕೆಗಿಂತ ಅತೀ ಕಡಿಮೆ ಮಳೆಯಾಗಿದೆ. ಇದರಿಂದ ಮುಂಬರುವ ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರಗೊಳ್ಳುವ ಸಾಧ್ಯತೆಯಿದ್ದು, ಅಧಿಕಾರಿಗಳು ಈಗಿನಿಂದಲೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.
ತಾಲೂಕು ಆರೋಗ್ಯಾಧಿಕಾರಿ ಡಾ.ಸತೀಶ ತಿವಾರಿ ಅವರು ಆರೋಗ್ಯ ಇಲಾಖೆಯ ಪ್ರಗತಿ ವರದಿ ಮಂಡಿಸಿದ ಸಂದರ್ಭದಲ್ಲಿ ಮಾತನಾಡಿದ ಶಿವನಗೌಡ ಪಾಟೀಲ, ಆರೋಗ್ಯ ಇಲಾಖೆ ಸಾರ್ವಜನಿಕರಿಗೆ ಅತ್ಯಂತ ಪ್ರಮುಖ ಸೇವೆ ಒದಗಿಸುವ ಇಲಾಖೆಯಾಗಿದೆ. ಪ್ರತಿಯೊಬ್ಬರಿಗೂ ಉತ್ತಮ ಆರೋಗ್ಯ ಸೌಲಭ್ಯ ಒದಗಿಸುವುದು ಇಲಾಖೆಯ ಜವಾಬ್ದಾರಿಯಾಗಿದೆ. ಈ ವಿಷಯದಲ್ಲಿ ಯಾವುದೇ ನಿರ್ಲಕ್ಷ್ಯ ತೋರಬಾರದು. ಇತ್ತೀಚೆಗೆ ಅಪಘಾತಗಳಲ್ಲಿ ಮೃತಪಟ್ಟವರ ಸಂಖ್ಯೆ ಹೆಚ್ಚಾಗುತ್ತಿದ್ದು, ಇದನ್ನು ನಿಯಂತ್ರಿಸಲು ಅಗತ್ಯ ಕ್ರಮಗಳೊಂದಿಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು ಎಂದರು.
ರೈತರ ಪಂಪ್‌ಸೆಟ್‌ಗಳಿಗೆ ಸಮರ್ಪಕ ವಿದ್ಯುತ್ ಪೂರೈಸಿ: ಹೆಸ್ಕಾಂ ಅಧಿಕಾರಿಗಳಿಂದ ಎರಡೂ ತಾಲೂಕುಗಳ ವಿದ್ಯುತ್ ವ್ಯವಸ್ಥೆಯ ಕುರಿತು ಮಾಹಿತಿ ಪಡೆದ ಅವರು, ನೀರಿನ ಅಭಾವದ ಹಿನ್ನೆಲೆಯಲ್ಲಿ ವಿದ್ಯುತ್ ಪೂರೈಕೆಯ ಮೇಲೂ ಒತ್ತಡ ಉಂಟಾಗುವ ಸಾಧ್ಯತೆಯಿದೆ. ರೈತರ ಪಂಪ್‌ಸೆಟ್‌ಗಳಿಗೆ ಸಮರ್ಪಕವಾಗಿ ವಿದ್ಯುತ್ ಪೂರೈಸಬೇಕು. ವಿದ್ಯುತ್‌ನ್ನು ಮಿತವಾಗಿ ಬಳಸುವ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು ಎಂದು ಸೂಚಿಸಿದರು.
ಶೈಕ್ಷಣಿಕ ಪ್ರಗತಿಗೆ ಇಲಾಖೆಗಳ ಸಮನ್ವಯ ಅಗತ್ಯ: ಗ್ರಾಮೀಣ ಭಾಗದ ಮಕ್ಕಳು ನಗರ ಪ್ರದೇಶಗಳ ಶಾಲೆಗಳಿಗೆ ತೆರಳಲು ಅನುಕೂಲವಾಗುವಂತೆ ಸಾಕಷ್ಟು ಸಾರಿಗೆ ಬಸ್‌ಗಳ ವ್ಯವಸ್ಥೆ ಕಲ್ಪಿಸಬೇಕು. ಶಾಲೆಗಳ ಶೈಕ್ಷಣಿಕ ಗುಣಮಟ್ಟ ಸುಧಾರಣೆಗೆ ಶಾಲಾ ಶಿಕ್ಷಣ ಇಲಾಖೆ, ಸಮಾಜ ಕಲ್ಯಾಣ, ಅಲ್ಪಸಂಖ್ಯಾತರ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗಳ ಅಧಿಕಾರಿಗಳು ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ಸಲಹೆ ನೀಡಿದರು.
ಸಭೆಯಲ್ಲಿ ತಾಳಿಕೋಟೆ ತಾಪಂ ಇಒ ಅನಸೂಯಾ ಚಲವಾದಿ, ಮುದ್ದೇಬಿಹಾಳ ತಾಪಂ ಇಒ ಸಂಗನಗೌಡ ಬಿರಾದಾರ, ತಾಪಂ ಸಹಾಯಕ ನಿರ್ದೇಶಕ ಕಸನಕ್ಕಿ, ಬಿಇಒ ಬಡದಾನಿ, ತಾಲೂಕು ಆರೋಗ್ಯಾಧಿಕಾರಿ ಡಾ.ಸತೀಶ ತಿವಾರಿ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಡಾ.ಎಂ.ಎಂ.ಬೆಳಗಲ್ಲ, ಕೃಷಿ ಇಲಾಖೆ ತಾಲೂಕು ಸಹಾಯಕ ನಿರ್ದೇಶಕ ಸುರೇಶ ಭಾವಿಕಟ್ಟಿ, ಸಿಡಿಪಿಒ ಶಿವಮೂರ್ತಿ ಕುಂಬಾರ, ಪುರಸಭೆ ಕಂದಾಯ ಅಧಿಕಾರಿ ಸುರೇಶ ಅಮ್ರಣ್ಣವರ, ಸೇರಿದಂತೆ ಎರಡೂ ತಾಲೂಕುಗಳ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ತಾಪಂ ಸಿಬ್ಬಂದಿ ಪಾಲ್ಗೊಂಡಿದ್ದರು.

