ಶೆಳ್ಳಗಿ-ಕರಿಭಾವಿ-ಅಗತೀರ್ಥ-ಹುಣಸಗಿ ಸಂಪರ್ಕ ರಸ್ತೆಗೆ ಚಾಚಿಕೊಂಡ ಮುಳ್ಳು ಕಂಟಿಗಳು | ವಾಹನ ಸಂಚಾರಕ್ಕೆ ತೀವ್ರ ತೊಂದರೆ | ರಸ್ತೆಗೆ ವಾಲಿರುವ ಮುಳ್ಳು ಕಂಟಿ ತೆರವಿಗೆ ಒತ್ತಾಯ
ಉದಯರಶ್ಮಿ ದಿನಪತ್ರಿಕೆ
ತಾಳಿಕೋಟೆ: ತಾಲೂಕಿನ ಶೆಳ್ಳಗಿ ಗ್ರಾಮದಿಂದ ಕರಿಭಾವಿ ಹಾಗೂ ಅಗತೀರ್ಥ ಗ್ರಾಮಗಳ ಮೂಲಕ ಹುಣಸಗಿ ಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯ ಎರಡೂ ಬದಿಗಳಲ್ಲಿ ಬೆಳೆದಿರುವ ಮುಳ್ಳು ಕಂಟಿಗಳು ರಸ್ತೆಯ ಮೇಲೆ ಚಾಚಿಕೊಂಡಿದ್ದು, ನಿತ್ಯ ಸಂಚರಿಸುವ ವಾಹನ ಸವಾರರು ಹಾಗೂ ಪ್ರಯಾಣಿಕರಿಗೆ ತೀವ್ರ ತೊಂದರೆ ಉಂಟುಮಾಡುತ್ತಿವೆ. ಅದರಲ್ಲೂ ಬಸ್‌ಗಳು ಸಂಚರಿಸುವ ಸಂದರ್ಭದಲ್ಲಿ ಎದುರಿನಿಂದ ಬರುವ ವಾಹನಗಳು ಸರಿಯಾಗಿ ಕಾಣಿಸದಿರುವುದು ಅಪಘಾತದ ಆತಂಕಕ್ಕೆ ಕಾರಣವಾಗಿದೆ.
ಶೆಳ್ಳಗಿ, ಕರಿಭಾವಿ ಹಾಗೂ ಅಗತೀರ್ಥ ಗ್ರಾಮಗಳ ಮೂಲಕ ಹುಣಸಗಿ ಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ ಈ ರಸ್ತೆ ಸುತ್ತಮುತ್ತಲಿನ ಗ್ರಾಮಗಳ ಜನರಿಗೆ ಪ್ರಮುಖ ಸಂಪರ್ಕ ಮಾರ್ಗವಾಗಿದೆ. ಪ್ರತಿದಿನ ಬಸ್‌ಗಳು, ಕಾರುಗಳು, ದ್ವಿಚಕ್ರ ವಾಹನಗಳು ಸೇರಿದಂತೆ ನೂರಾರು ವಾಹನಗಳು ಈ ರಸ್ತೆಯಲ್ಲಿ ಸಂಚರಿಸುತ್ತವೆ. ಶಾಲಾ-ಕಾಲೇಜು ವಿದ್ಯಾರ್ಥಿಗಳು, ಉದ್ಯೋಗಿಗಳು, ರೈತರು ಹಾಗೂ ಸಾರ್ವಜನಿಕರು ತಮ್ಮ ನಿತ್ಯದ ಕೆಲಸ ಕಾರ್ಯಗಳಿಗಾಗಿ ಇದೇ ರಸ್ತೆಯನ್ನು ಅವಲಂಬಿಸಿದ್ದಾರೆ.
ಆದರೆ ರಸ್ತೆ ಬದಿಗಳಲ್ಲಿ ಬೆಳೆದಿರುವ ಮುಳ್ಳು ಕಂಟಿ ಹಾಗೂ ಗಿಡಗಂಟಿಗಳು ರಸ್ತೆಯ ಮೇಲೆ ವಾಲಿಕೊಂಡಿರುವುದರಿಂದ ವಾಹನಗಳ ಸುಗಮ ಸಂಚಾರಕ್ಕೆ ಅಡ್ಡಿಯಾಗುತ್ತಿವೆ. ವಿಶೇಷವಾಗಿ ಎದುರಿನಿಂದ ಬಸ್‌ಗಳು ಬಂದಾಗ ದ್ವಿಚಕ್ರ ವಾಹನ ಸವಾರರು ರಸ್ತೆಯ ಬದಿಗೆ ಸರಿಯಲು ಸ್ಥಳಾವಕಾಶದ ಕೊರತೆ ಎದುರಾಗುತ್ತಿದೆ. ಅಲ್ಲದೆ, ಗಿಡಗಂಟಿಗಳಿAದಾಗಿ ಎದುರಿನಿಂದ ಬರುವ ವಾಹನಗಳು ಸರಿಯಾಗಿ ಗೋಚರಿಸದೆ ಚಾಲಕರು ತೊಂದರೆ ಅನುಭವಿಸುವಂತಾಗಿದೆ. ಇದರಿಂದ ಯಾವುದೇ ಸಮಯದಲ್ಲಿ ಅಪಘಾತ ಸಂಭವಿಸುವ ಆತಂಕ ವಾಹನ ಸವಾರರಲ್ಲಿ ಮನೆಮಾಡಿದೆ.
ಪ್ರಮುಖ ಸಂಪರ್ಕ ರಸ್ತೆಯಾಗಿದ್ದರೂ ರಸ್ತೆ ಬದಿಯಲ್ಲಿರುವ ಮುಳ್ಳು ಕಂಟಿಗಳನ್ನು ತೆರವುಗೊಳಿಸುವ ಕಾರ್ಯಕ್ಕೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಮುಂದಾಗದಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ. ಅಪಘಾತ ಸಂಭವಿಸಿದ ನಂತರ ಎಚ್ಚೆತ್ತುಕೊಳ್ಳುವ ಬದಲು ಮುನ್ನೆಚ್ಚರಿಕೆ ಕ್ರಮವಾಗಿ ಕೂಡಲೇ ರಸ್ತೆ ಬದಿಯಲ್ಲಿರುವ ಮುಳ್ಳು ಕಂಟಿ ಹಾಗೂ ಗಿಡಗಂಟಿಗಳನ್ನು ತೆರವುಗೊಳಿಸಬೇಕು ಎಂಬುದು ವಾಹನ ಸವಾರರ ಆಗ್ರಹಿಸಿದ್ದಾರೆ.
ಈ ಕುರಿತು ಜನಪ್ರತಿನಿಧಿಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಗಮನಹರಿಸಿ, ಶೆಳ್ಳಗಿ ಗ್ರಾಮದಿಂದ ಕರಿಭಾವಿ, ಅಗತೀರ್ಥ ಮಾರ್ಗವಾಗಿ ಹುಣಸಗಿ ಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ಎರಡೂ ಬದಿಗಳಲ್ಲಿರುವ ಮುಳ್ಳು ಕಂಟಿಗಳನ್ನು ತೆರವುಗೊಳಿಸಿ, ಬಸ್ ಸೇರಿದಂತೆ ಎಲ್ಲ ವಾಹನಗಳ ಸುಗಮ ಹಾಗೂ ಸುರಕ್ಷಿತ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ಈ ರಸ್ತೆಗೆ ಹೊಂದಿಕೊಂಡು ಬರುವ ಗ್ರಾಮಗಳ ಗ್ರಾಮಸ್ಥರರು ಒತ್ತಾಯಿಸಿದ್ದಾರೆ.

