ಕೆಯುಡಬ್ಲ್ಯೂಜೆ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರ ತವರು ತಾಲೂಕು ಚನ್ನರಾಯಪಟ್ಟಣದಲ್ಲಿ ಅಭಿಮಾನಪೂರ್ವಕ ಸನ್ಮಾನ
ಉದಯರಶ್ಮಿ ದಿನಪತ್ರಿಕೆ
ಚನ್ನರಾಯಪಟ್ಟಣ: ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು ಹಾಗೂ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ (ಕೆಯುಡಬ್ಲ್ಯೂಜೆ) ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರನ್ನು ಅವರ ತವರು ತಾಲೂಕು ಚನ್ನರಾಯಪಟ್ಟಣದಲ್ಲಿ ಅಭಿಮಾನಪೂರ್ವಕವಾಗಿ ಸನ್ಮಾನಿಸಲಾಯಿತು.
ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಹಿರಿಯ ರಂಗಕರ್ಮಿ ಹಾಗೂ ನಾಟಕ ಅಕಾಡೆಮಿಯ ಮಾಜಿ ಸದಸ್ಯ ಚಂದ್ರು ಕಾಳೇನಹಳ್ಳಿ, ಹೋರಾಟದ ನೆಲೆಯಿಂದ ತಳಮಟ್ಟದಿಂದ ಬೆಳೆದು ಬಂದ ಶಿವಾನಂದ ತಗಡೂರು ಅವರು ಹಾಸನ ಜಿಲ್ಲೆಯಲ್ಲಿ ರಂಗಕರ್ಮಿಯಾಗಿ ತಮ್ಮದೇ ಆದ ಹೆಜ್ಜೆಗುರುತು ಮೂಡಿಸಿದ್ದಾರೆ. ಅವರಿಗೆ ನಾಟಕ ಅಕಾಡೆಮಿ ಪ್ರಶಸ್ತಿ ಲಭಿಸಿರುವುದು ಚನ್ನರಾಯಪಟ್ಟಣ ತಾಲೂಕು ಮಾತ್ರವಲ್ಲದೆ ಇಡೀ ಹಾಸನ ಜಿಲ್ಲೆಗೆ ಹೆಮ್ಮೆಯ ಸಂಗತಿ ಎಂದರು.
ಪತ್ರಕರ್ತರಾಗಿಯೂ ರಾಜ್ಯಮಟ್ಟದಲ್ಲಿ ಗುರುತಿಸಿಕೊಂಡಿರುವ ಶಿವಾನಂದ ತಗಡೂರು ಅವರು ಬದುಕಿನುದ್ದಕ್ಕೂ ಹೋರಾಟದ ಹಾದಿಯಲ್ಲೇ ಸಾಗಿದ್ದಾರೆ. ಪತ್ರಕರ್ತರ ಸಮುದಾಯಕ್ಕೆ ನಿರಂತರವಾಗಿ ನೆರವು ಮತ್ತು ಸೌಲಭ್ಯಗಳನ್ನು ದೊರಕಿಸಿಕೊಡಲು ಶ್ರಮಿಸುತ್ತಿರುವ ಅವರ ನಾಯಕತ್ವದ ಮೇಲೆ ಪತ್ರಕರ್ತರು ಇಟ್ಟಿರುವ ವಿಶ್ವಾಸದ ಪ್ರತೀಕವಾಗಿ, ಅವರು ರಾಜ್ಯ ಸಂಘದ ಅಧ್ಯಕ್ಷರಾಗಿ ಮೂರು ಬಾರಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಹೇಳಿದರು.
ರಂಗಸಿರಿ ತಂಡದ ಕಾರ್ಯದರ್ಶಿ ಪಿ. ಷಾಡ್ರಾಕ್ ಮಾತನಾಡಿ, ಸಾಕ್ಷರತಾ ಆಂದೋಲನದ ಸಂದರ್ಭದಲ್ಲಿ ಶಿವಾನಂದ ತಗಡೂರು ಅವರೊಂದಿಗೆ ಜಿಲ್ಲೆಯ 1,700ಕ್ಕೂ ಹೆಚ್ಚು ಹಳ್ಳಿಗಳನ್ನು ಸುತ್ತಿದ್ದು, 800ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಬೀದಿ ನಾಟಕಗಳನ್ನು ಪ್ರದರ್ಶಿಸಿದ್ದೇವೆ. ಆಂದೋಲನದ ಮುಖ್ಯ ಸಂಯೋಜಕರಾಗಿ ಶಿವಾನಂದ ಅವರು ನೀಡಿದ ಕೊಡುಗೆ ಅನನ್ಯವಾದುದು ಎಂದರು.
ಹಿರಿಯ ರಂಗಕರ್ಮಿ ನಂಜುಂಡಮೈಮ್ ಮಾತನಾಡಿ, ನಮ್ಮ ತಂಡದ ನಾಟಕಗಳಿಗೆ ಸದಾ ಪ್ರೋತ್ಸಾಹ ನೀಡುತ್ತಿದ್ದ ಶಿವಾನಂದ ತಗಡೂರು ಅವರು ಹಾಸನದಲ್ಲಿ ನೆಲೆಸಿ, ರಂಗಸಿರಿ ತಂಡದ ಮೂಲಕ ರಂಗಭೂಮಿಗೆ ಹೊಸ ಚೈತನ್ಯ ತುಂಬಿದ್ದಾರೆ ಎಂದರು.
ಹಿರಿಯ ಪತ್ರಕರ್ತರಾದ ಜಯರಾಂ, ಶ್ಯಾಮ್, ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ದಯಾನಂದ್, ಮಾಜಿ ಅಧ್ಯಕ್ಷ ಎ.ಎಲ್. ನಾಗೇಶ್ ಹಾಗೂ ಜೆಡಿಎಸ್ ಮುಖಂಡ ಪುಟ್ಟಸ್ವಾಮಿ ಮತ್ತಿತರರು ಮಾತನಾಡಿದರು.
ರೈತ ಸಂಘದ ಮುಖಂಡ ಪುಟ್ಟೇಗೌಡ, ಪರಿಸರ ಪ್ರೇಮಿ ಚ.ನಂ. ಅಶೋಕ್, ಮೆಡಿಕಲ್ ವಸಂತ್, ತಗಡೂರು ಬಸವರಾಜು, ಕಲ್ಲೇಸೋಮನಹಳ್ಳಿ ಭಾರತೀಶ್, ಲಕ್ಕರಸನಹಳ್ಳಿ ಅಶೋಕ್, ರಂಗಕರ್ಮಿ ಉಮೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

