ಬ್ಯಾಡ್ಮಿಂಟನ್ನಲ್ಲಿ ಬಿ.ಎಲ್.ಡಿ.ಇ ಶಿಕ್ಷಣ ಮಹಾವಿದ್ಯಾಲಯದ ಮಹಿಳಾ ತಂಡಕ್ಕೆ ವಿವಿ ಮಟ್ಟದಲ್ಲಿ ಪ್ರಥಮ ಸ್ಥಾನ
ಉದಯರಶ್ಮಿ ದಿನಪತ್ರಿಕೆ
ಜಮಖಂಡಿ: ಪ್ರತಿಷ್ಠಿತ ಬಿ.ಎಲ್.ಡಿ.ಇ ಸಂಸ್ಥೆಯ ಶಿಕ್ಷಣ ಮಹಾವಿದ್ಯಾಲಯದ (ಬಿ.ಇಡಿ) ಮಹಿಳಾ ಬ್ಯಾಡ್ಮಿಂಟನ್ ತಂಡವು ಬಾಗಲಕೋಟೆ ವಿಶ್ವವಿದ್ಯಾಲಯದ ಏಕವಲಯ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಪ್ರಥಮ ಸ್ಥಾನ ಗಳಿಸುವ ಮೂಲಕ ಮಹಾವಿದ್ಯಾಲಯಕ್ಕೆ ಕೀರ್ತಿ ತಂದಿದೆ.
ಬಾಗಲಕೋಟೆ ವಿಶ್ವವಿದ್ಯಾಲಯದ ವತಿಯಿಂದ ಆಯೋಜಿಸಿದ್ದ ಏಕವಲಯ ಪುರುಷ ಮತ್ತು ಮಹಿಳಾ ಬ್ಯಾಡ್ಮಿಂಟನ್ ಪಂದ್ಯಾವಳಿ ಹಾಗೂ ವಿಶ್ವವಿದ್ಯಾಲಯ ತಂಡದ ಆಯ್ಕೆ ಪ್ರಕ್ರಿಯೆಯಲ್ಲಿ ಜಮಖಂಡಿಯ ಬಿ.ಎಲ್.ಡಿ.ಇ ಶಿಕ್ಷಣ ಮಹಾವಿದ್ಯಾಲಯದ ಮಹಿಳಾ ತಂಡ ಗಮನಾರ್ಹ ಸಾಧನೆ ಮಾಡಿದೆ. ತಂಡದ ಸಂಘಟಿತ ಆಟ, ಕ್ರೀಡಾ ಕೌಶಲ್ಯ ಹಾಗೂ ಗೆಲ್ಲುವ ಛಲದ ಫಲವಾಗಿ ಪ್ರಥಮ ಸ್ಥಾನ ಪಡೆದು ಸಾಧನೆಯ ಮೈಲಿಗಲ್ಲು ಸ್ಥಾಪಿಸಿದೆ.
ಇದೇ ಸಂದರ್ಭದಲ್ಲಿ ಮಹಾವಿದ್ಯಾಲಯದ ಪ್ರಶಿಕ್ಷಣಾರ್ಥಿ ಸ್ಪೂರ್ತಿ ಗದ್ಯಾಳ ಅವರು ತಮ್ಮ ಉತ್ತಮ ಕ್ರೀಡಾ ಪ್ರದರ್ಶನದ ಮೂಲಕ ‘ಯುನಿವರ್ಸಿಟಿ ಬ್ಲೂ’ ಗೌರವಕ್ಕೆ ಆಯ್ಕೆಯಾಗಿರುವುದು ಕಾಲೇಜಿನ ಕ್ರೀಡಾ ಸಾಧನೆಗೆ ಮತ್ತೊಂದು ಗರಿ ಮೂಡಿಸಿದೆ. ಇವರ ಸಾಧನೆಯು ಮಹಾವಿದ್ಯಾಲಯದ ಇತರ ವಿದ್ಯಾರ್ಥಿಗಳಿಗೂ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಲು ಪ್ರೇರಣೆಯಾಗಿದೆ.
ವಿದ್ಯಾರ್ಥಿಗಳ ಈ ಸಾಧನೆಗೆ ಬಿ.ಎಲ್.ಡಿ.ಇ ಕಾಲೇಜಿನ ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ಅರುಣಕುಮಾರ ಶಹಾ, ಜಮಖಂಡಿಯ ಬಿ.ಎಲ್.ಡಿ.ಇ ಅಂಗಸಂಸ್ಥೆಗಳ ಆಡಳಿತಾಧಿಕಾರಿ ಪ್ರೊ. ಎಸ್. ಎಚ್. ಲಗಳಿ, ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ಆರ್. ಎಸ್. ಕಾಗವಾಡೆ, ಪ್ರಾಧ್ಯಾಪಕ ವೃಂದ ಹಾಗೂ ಪ್ರಶಿಕ್ಷಣಾರ್ಥಿಗಳು ಹರ್ಷ ವ್ಯಕ್ತಪಡಿಸಿ, ಸಾಧಕ ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ.

