ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ವಿದ್ಯಾರ್ಥಿಗಳಲ್ಲಿ ಶಿಸ್ತು, ನಾಯಕತ್ವ ಹಾಗೂ ಸಂಘಟನಾ ಸಾಮರ್ಥ್ಯ ಬೆಳೆಸಲು ಕ್ರೀಡೆ ಸಹಕಾರಿಯಾಗಿದೆ. ಓದಿನೊಂದಿಗೆ ಕ್ರೀಡೆಯಲ್ಲೂ ತೊಡಗಿಸಿಕೊಳ್ಳುವುದರಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯ ವೃದ್ಧಿಯಾಗುತ್ತದೆ. ಯುವಜನತೆ ಬದುಕಿನಲ್ಲಿ ಶಿಸ್ತನ್ನು ಅಳವಡಿಸಿಕೊಂಡು ಭವಿಷ್ಯದಲ್ಲಿ ದೇಶದ ಸತ್ಪ್ರಜೆಗಳಾಗಿ ರೂಪುಗೊಳ್ಳಬೇಕು ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.
ಸಿಂದಗಿ ತಾಲೂಕಿನ ಯರಗಲ್ ಬಿ.ಕೆ.ಗ್ರಾಮದಲ್ಲಿ ಜಿಲ್ಲಾ ಪಂಚಾಯಿತಿ, ಶಾಲಾ ಶಿಕ್ಷಣ ಇಲಾಖೆ ವಿಜಯಪುರ ಹಾಗೂ ಸಿಂದಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಮತ್ತು ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯದ ಸಹಯೋಗದಲ್ಲಿ ಆಯೋಜಿಸಿದ್ದ ೨೦೨೬-೨೭ನೇ ಸಾಲಿನ ವಿಜಯಪುರ ಜಿಲ್ಲಾ ಮಟ್ಟದ ೧೪ ಮತ್ತು ೧೭ ವರ್ಷ ವಯೋಮಿತಿಯ ಬಾಲಕ-ಬಾಲಕಿಯರ ವಾಲಿಬಾಲ್ ಪಂದ್ಯಾವಳಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಯುವಜನತೆಯನ್ನು ಸಂಘಟಿಸಿ, ಅವರಲ್ಲಿ ಸಕಾರಾತ್ಮಕ ಚಿಂತನೆ ಬೆಳೆಸುವುದು ಇಂದಿನ ಅಗತ್ಯವಾಗಿದೆ. ಕ್ರೀಡೆಯು ದೈಹಿಕ ಸಾಮರ್ಥ್ಯದ ಜೊತೆಗೆ ಮಾನಸಿಕ ಬೆಳವಣಿಗೆಗೂ ಪೂರಕವಾಗಿದೆ. ಕ್ರೀಡೆಯಲ್ಲಿ ಭಾಗವಹಿಸುವುದರಿಂದ ಪರಸ್ಪರ ಸಹಕಾರ, ಶಿಸ್ತು, ನಾಯಕತ್ವ ಹಾಗೂ ತಂಡದ ಮನೋಭಾವ ಬೆಳೆದು, ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ಸಹಕಾರಿಯಾಗುತ್ತದೆ. ಶಿಕ್ಷಣದ ಜೊತೆಗೆ ಕ್ರೀಡೆಗೂ ಹೆಚ್ಚಿನ ಮಹತ್ವ ನೀಡಬೇಕು. ಕ್ರೀಡೆಯನ್ನು ಕೇವಲ ಮನರಂಜನೆಗೆ ಸೀಮಿತಗೊಳಿಸದೆ, ವಿದ್ಯಾರ್ಥಿಗಳ ಸರ್ವಾಂಗೀಣ ಬೆಳವಣಿಗೆಗೆ ಪೂರಕವಾದ ಚಟುವಟಿಕೆಯಾಗಿ ಪರಿಗಣಿಸಬೇಕು. ವಿದ್ಯಾರ್ಥಿಗಳು ಕ್ರೀಡಾಸ್ಫೂರ್ತಿಯಿಂದ ಸ್ಪರ್ಧೆಗಳಲ್ಲಿ ಭಾಗವಹಿಸಿ ಸಾಧನೆ ಮಾಡಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಶ್ರೀ ಅಭಿನಂದನ ಗುರೂಜಿ, ರಾಜಶೇಖರ ಕೂಚಬಾಳ, ಅರವಿಂದ ಹಂಗರಗಿ, ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎಸ್.ಆಲಗೂರ, ಖಾದೀರ ಬಂಕಲಗಿ, ಮಹಾಂತಗೌಡ ಪಾಟೀಲ, ಭಾಗಪ್ಪಗೌಡ ಪಾಟೀಲ ಆಹೇರಿ, ಮಡಿವಾಳಪ್ಪ ಕಡಲಗೊಂಡ, ಬಲವಂತಪ್ಪ ಹೂಗಾರ, ಸಾಹಿಪಟೇಲ ಅವಟಿ, ಗುರುಲಿಂಗಪ್ಪ ಪಾಟೀಲ, ಎನ್.ವಿ.ಕುಲಕರ್ಣಿ, ಎಂ.ಎಂ.ಹಂಗರಗಿ, ಶಿವಾನಂದ ಬದರಿ, ಸಿದ್ಧಲಿಂಗ ಚೌಧರಿ, ರವಿ ಬಿರಾದಾರ ಸೇರಿದಂತೆ ತಾಲೂಕಿನ ದೈಹಿಕ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

