ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಭಾರತೀಯ ಅಂಚೆ ಇಲಾಖೆಯ ವಿಜಯಪುರ ವಿಭಾಗದ ವತಿಯಿಂದ ೨೦೨೬-೨೭ನೇ ಸಾಲಿನ ವಿಭಾಗೀಯ ಅಂಚೆ ಅದಾಲತ್ ಅನ್ನು ಅ.೨೧ರಂದು ಮಧ್ಯಾಹ್ನ ೩ ಗಂಟೆಗೆ ವಿಜಯಪುರದ ಅಂಚೆ ಅಧೀಕ್ಷಕರ ಕಚೇರಿಯಲ್ಲಿ ಅಂಚೆ ಅಧೀಕ್ಷಕರ ಅಧ್ಯಕ್ಷತೆಯಲ್ಲಿ ನಡೆಸಲು ನಿರ್ಧರಿಸಲಾಗಿದೆ. ವಿಜಯಪುರ ಅಂಚೆ ವಿಭಾಗದ ವ್ಯಾಪ್ತಿಗೆ ಒಳಪಡುವ ಬಬಲೇಶ್ವರ, ಬಸವನ ಬಾಗೇವಾಡಿ, ಚಡಚಣ, ದೇವರ ಹಿಪ್ಪರಗಿ, ಇಂಡಿ, ಕೊಲ್ಹಾರ, ಮುದ್ದೇಬಿಹಾಳ, ನಿಡಗುಂದಿ, ಸಿಂದಗಿ, ತಾಳಿಕೋಟೆ, ತಿಕೋಟಾ, ಆಲಮೇಲ ಹಾಗೂ ವಿಜಯಪುರ ತಾಲೂಕುಗಳ ಅಂಚೆ ಸೇವೆಗಳಿಗೆ ಸಂಬಂಧಿಸಿದ ದೂರು, ಸಲಹೆ ಮತ್ತು ಸೂಚನೆಗಳನ್ನು ಸಾರ್ವಜನಿಕರು ಸಲ್ಲಿಸಬಹುದಾಗಿದೆ. ಅಹವಾಲುಗಳನ್ನು ಲಿಖಿತ ರೂಪದಲ್ಲಿ ಸಿದ್ಧಪಡಿಸಿ, ಲಕೋಟೆಯ ಮೇಲ್ಭಾಗದಲ್ಲಿ ‘ಅಂಚೆ ಅದಾಲತ್ನಲ್ಲಿ ವಿಚಾರಣೆಗೆ’ ಎಂದು ನಮೂದಿಸಿ ಯಾವುದೇ ಅಂಚೆ ಕಚೇರಿಯಲ್ಲಿ ರವಾನೆಗೆ ಸಲ್ಲಿಸಬಹುದು. ಇಂತಹ ಲಕೋಟೆಗಳಿಗೆ ಅಂಚೆ ವೆಚ್ಚ ಭರಿಸುವ ಅಗತ್ಯವಿರುವುದಿಲ್ಲ. ದೂರು, ಸಲಹೆ ಮತ್ತು ಸೂಚನೆಗಳು ಅ.೧೬ರೊಳಗೆ ಅಂಚೆ ಅಧೀಕ್ಷಕರು,ವಿಜಯಪುರ ವಿಭಾಗ, ವಿಜಯಪುರ–೫೮೬೧೦೪ ಇವರ ಕಚೇರಿಗೆ ತಲುಪುವಂತೆ ಕಳುಹಿಸಬೇಕು.
ಈ ವಿಭಾಗೀಯ ಅಂಚೆ ಅದಾಲತ್ನಲ್ಲಿ ವಿಜಯಪುರ ವಿಭಾಗದ ಅಂಚೆ ಕಚೇರಿಗಳಿಂದ ಪ್ರಸ್ತುತ ಒದಗಿಸಲಾಗುತ್ತಿರುವ ಸೇವೆಗಳಲ್ಲಿನ ಕೊರತೆಗಳು ಹಾಗೂ ಅವುಗಳನ್ನು ಸುಧಾರಿಸುವ ಕುರಿತು ಸಲ್ಲಿಸುವ ಸಲಹೆ ಮತ್ತು ಸೂಚನೆಗಳನ್ನು ಮಾತ್ರ ಚರ್ಚಿಸಲಾಗುವುದು. ಇಲಾಖೆಯ ಕಾರ್ಯನೀತಿ ಮತ್ತು ಧೋರಣೆಗಳಿಗೆ ಸಂಬಂಧಿಸಿದ ಸಲಹೆ ಹಾಗೂ ಸೂಚನೆಗಳನ್ನು ಈ ಅದಾಲತ್ನಲ್ಲಿ ಚರ್ಚಿಸಲಾಗುವುದಿಲ್ಲ. ಅಂತಹ ವಿಷಯಗಳ ಕುರಿತು ಪ್ರತ್ಯೇಕವಾಗಿ ಲಿಖಿತವಾಗಿ ತಿಳಿಸಿದಲ್ಲಿ, ಮುಂದಿನ ಕ್ರಮಕ್ಕಾಗಿ ಸಂಬಂಧಿಸಿದ ಮೇಲಧಿಕಾರಿಗಳಿಗೆ ಕಳುಹಿಸಲಾಗುವುದು ಎಂದು ವಿಜಯಪುರ ವಿಭಾಗದ ಅಂಚೆ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
