ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಗರದ ಪ್ರತಿಷ್ಠಿತ ಬಿ.ಎಲ್.ಡಿ.ಇ ಸಂಸ್ಥೆಯ ಶ್ರೀ ಸಂಗನಬಸವ ಮಹಾಸ್ವಾಮೀಜಿ ಪಾಲಿಟೆಕ್ನಿಕ್ ವಿದ್ಯಾಲಯದಲ್ಲಿ ಗುರುವಾರ ವಿಶ್ವಖ್ಯಾತ ವಿಪ್ರೋ ಏರೋಸ್ಪೇಸ್’ (Wipro Aerospace) ಸಂಸ್ಥೆಯ ವತಿಯಿಂದ ಡಿಪ್ಲೋಮಾ ವಿದ್ಯಾರ್ಥಿಗಳಿಗಾಗಿ ಬೃಹತ್ ಪೂಲ್ ಕ್ಯಾಂಪಸ್ ಉದ್ಯೋಗ ಸಂದರ್ಶನವನ್ನು ನಡೆಯಿತು.
ಅಂತಿಮ ವರ್ಷದ ಮೆಕ್ಯಾನಿಕಲ್ ಎಂಜಿನಿಯರಿಂಗ್ ಮತ್ತು ಆಟೋಮೋಬೈಲ್ ಎಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿಗಳಿಗಾಗಿ ನಡೆದ ಈ ಪೂಲ್ ಕ್ಯಾಂಪಸ್ ಸಂದರ್ಶನದಲ್ಲಿ ವಿಜಯಪುರ ಜಿಲ್ಲೆ ಮಾತ್ರವಲ್ಲದೆ ಬಾಗಲಕೋಟೆ ಸೇರಿದಂತೆ ಸುತ್ತಮುತ್ತಲಿನ ನಾನಾ ಭಾಗಗಳ ಸರಕಾರಿ ಹಾಗೂ ಖಾಸಗಿ ಪಾಲಿಟೆಕ್ನಿಕ್ ಕಾಲೇಜುಗಳಿಂದ 150ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡರು.
ವಿಪ್ರೋ ಸಂಸ್ಥೆಯ ವತಿಯಿಂದ ಮಾನವ ಸಂಪನ್ಮೂಲ ಅಧಿಕಾರಿಗಳಾದ ಮಿಥಿಲೇಶ ಮತ್ತು ಮಿಸ್ ಮರಿಯಾ ಲಿಖಿತ ಪರೀಕ್ಷೆ ಮತ್ತು ತಾಂತ್ರಿಕ ಮೌಖಿಕ ಸಂದರ್ಶನ ನಡೆಸಿದರು.
ಈ ಸಂದರ್ಭದಲ್ಲಿ ಪಾಲಿಟೆಕ್ನಿಕ್ ನ ಪ್ರಾಚಾರ್ಯ ಪ್ರಭುದೇವ ಬಿ. ಕಳಸಗೊಂಡ, ಉದ್ಯೋಗ ಅಧಿಕಾರಿ ಸುಧನ್ವ ವಿ. ಕುಲಕರ್ಣಿ, ಪಾಂಡುರಂಗ ಅಸ್ಲಂಕರ, ಈರೇಶ ಪಾಟೀಲ್ ಹಾಗೂ ಮೆಕ್ಯಾನಿಕಲ್ ಮತ್ತು ಆಟೋಮೋಬೈಲ್ ವಿಭಾಗದ ಮುಖ್ಯಸ್ಥರು, ಉಪನ್ಯಾಸಕರು ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೂ ಪ್ರತಿಷ್ಠಿತ ಬಹುರಾಷ್ಟ್ರೀಯ ಕಂಪನಿಯಲ್ಲಿ ಉದ್ಯೋಗಾವಕಾಶ ಒದಗಿಸುವ ನಿಟ್ಟಿನಲ್ಲಿ ಇಂಥ ಬೃಹತ್ ಪೂಲ್ ಕ್ಯಾಂಪಸ್ ಡ್ರೈವ್ ಆಯೋಜಿಸಿರುವುದಕ್ಕೆ ಬಿ.ಎಲ್.ಡಿ.ಇ. ಸಂಸ್ಥೆಯ ಅಧ್ಯಕ್ಷ ಮತ್ತು ಸಚಿವ ಎಂ. ಬಿ. ಪಾಟೀಲ, ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನ ಪರಿಷತ ಶಾಸಕ ಸುನೀಲಗೌಡ ಪಾಟೀಲರು ಹಾಗೂ ಆಡಳಿತ ಮಂಡಳಿಯ ನಿರ್ದೇಶಕರು ಹರ್ಷ ವ್ಯಕ್ತಪಡಿಸಿ, ಪಾಲ್ಗೊಂಡ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದ್ದಾರೆ.

