ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಕ್ರೀಡಾಪಟುಗಳಿಗೆ ರಾಜ್ಯ ಸರ್ಕಾರಿ ನೇಮಕಾತಿಯಲ್ಲಿ ಶೇ. 2ರಷ್ಟು ಹಾಗೂ ಅರಣ್ಯ ಮತ್ತು ಪೊಲೀಸ್ ಇಲಾಖೆಗಳಲ್ಲಿ ಶೇ. 3ರಷ್ಟು ಮೀಸಲಾತಿ ಕಲ್ಪಿಸುವ ರಾಜ್ಯ ಸರ್ಕಾರದ ಅಧಿಸೂಚನೆಯನ್ನು ಸಿಂದಗಿ ವಿಧಾನಸಭಾ ಕ್ಷೇತ್ರ ಮಟ್ಟದ ಶಿಕ್ಷಣ ಸುಧಾರಣಾ ಸಮಿತಿಯ ನಾಮ ನಿರ್ದೇಶನ ಸದಸ್ಯ ಸಿದ್ಧಲಿಂಗ ಚೌಧರಿ ಸ್ವಾಗತಿಸಿದ್ದಾರೆ.
ಕ್ರೀಡೆಯಲ್ಲಿ ಸಾಧನೆಗೈದ ಪ್ರತಿಭೆಗಳಿಗೆ ಉದ್ಯೋಗಾವಕಾಶ ಕಲ್ಪಿಸುವ ಈ ನಿರ್ಧಾರವು ಅವರ ಪರಿಶ್ರಮಕ್ಕೆ ನೀಡುವ ಗೌರವವಾಗಿದೆ. ವಿಶೇಷವಾಗಿ ಗ್ರಾಮೀಣ ಪ್ರದೇಶದ ಕ್ರೀಡಾಪಟುಗಳಿಗೆ ಭವಿಷ್ಯದ ಭರವಸೆ ನೀಡುವುದರ ಜೊತೆಗೆ, ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಆಸಕ್ತಿಯಿಂದ ಪಾಲ್ಗೊಳ್ಳಲು ಪ್ರೋತ್ಸಾಹ ನೀಡಲಿದೆ ಎಂದು ಅವರು ತಿಳಿಸಿದ್ದಾರೆ.
ಮೀಸಲಾತಿಯ ಪ್ರಯೋಜನ ಅರ್ಹ ಕ್ರೀಡಾಪಟುಗಳಿಗೆ ತಲುಪುವಂತೆ ಪಾರದರ್ಶಕವಾಗಿ ಅನುಷ್ಠಾನಗೊಳಿಸಬೇಕು. ಅರ್ಹತೆ, ಮಾನ್ಯ ಕ್ರೀಡಾ ಪ್ರಮಾಣಪತ್ರಗಳು ಹಾಗೂ ಅರ್ಜಿ ಪ್ರಕ್ರಿಯೆಯ ಕುರಿತು ಶಾಲಾ–ಕಾಲೇಜುಗಳು ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ವ್ಯಾಪಕ ಮಾಹಿತಿ ನೀಡಬೇಕು ಎಂದು ಚೌಧರಿ ಒತ್ತಾಯಿಸಿದ್ದಾರೆ.

