ಉದಯರಶ್ಮಿ ದಿನಪತ್ರಿಕೆ
ಕೆಂಭಾವಿ: ವಿದ್ಯಾರ್ಥಿ ಜೀವನ ಅಮೂಲ್ಯವಾದದ್ದು ಜ್ಞಾನಾರ್ಜನೆಯ ಜೊತೆಗೆ ಮಾನವೀಯ ಮೌಲ್ಯಗಳಿಗೆ ಮೊದಲ ಆದ್ಯತೆ ನೀಡುವ ಮಾದರಿ ವ್ಯಕ್ತಿತ್ವ ತಮ್ಮದಾಗಬೇಕು ಎಂದು ಯುವ ಮುಖಂಡ ಆದಿತ್ಯಗೌಡ ಎಸ್ ಪೋಲಿಸ್ ಪಾಟೀಲ್ ಹೇಳಿದರು.
ಪಟ್ಟಣದ ಶ್ರೀಮತಿ ಗಂಗೂಬಾಯಿ ಶಾಂತಗೌಡ ಪೋಲಿಸ್ ಪಾಟೀಲ್ ಮೆಮೋರಿಯಲ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಬಿಎ, ಬಿಕಾಂ, ಬಿಎಸ್ಸಿ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ ಹಾಗೂ ವಿವಿಧ ಘಟಕಗಳ ಉದ್ಘಾಟನೆ ಮತ್ತು ವಿಶೇಷ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮೂರು ವರ್ಷದ ಪದವಿ ಶಿಕ್ಷಣ ನೂರು ವರ್ಷಗಳ ಜೀವನಕ್ಕೆ ಭದ್ರ ಅಡಿಪಾಯ ವಿದ್ಯಾರ್ಥಿಗಳು ತಮ್ಮ ಉಜ್ವಲ ಭವಿಷ್ಯಕ್ಕಾಗಿ ಭವ್ಯ ಭಾರತದ ನಿರ್ಮಾಣಕ್ಕಾಗಿ ಕಂಕಣ ಬದ್ಧರಾಗಿ, ಜೀವನ ರೂಪಿಸಿಕೊಳ್ಳಲು ಮಾರ್ಕ್ಸ್ ಕಾರ್ಡ್ ಮುಖ್ಯವಲ್ಲ ಸಂಸ್ಕಾರ ಮುಖ್ಯ, ಪರಿಶ್ರಮವಿದ್ದರೆ ಪ್ರತಿಫಲ ಖಂಡಿತ ಎಂದು ಹೇಳಿದರು.
ಪುರಸಭೆ ಮುಖ್ಯಾಧಿಕಾರಿ ಪ್ರಕಾಶ ಬಗಲಿ, ಸಿಡಿಸಿ ಸದಸ್ಯ ಸಾಹೇಬ್ ಲಾಲ್ ಆಂದೇಲಿ, ಹ ವಿ ಸಂಘದ ಅಧ್ಯಕ್ಷ ವೀರೇಶ ಎಸ್, ಉಪಾಧ್ಯಕ್ಷ ಹರ್ಷದ್, ಮಾತನಾಡಿದರು. ಪ್ರಾಂಶುಪಾಲ ಡಾ ನಾಗಪ್ಪ ಚಾವಲ್ಕರ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಾಂಸ್ಕೃತಿಕ ಘಟಕದ ಸಂಚಾಲಕರು, ಸಹ ಪ್ರಾಧ್ಯಾಪಕಿ ನಸ್ರೀನ್ ತಾಜ್ ಪ್ರಾಸ್ತಾವಿಕ ಮಾತನಾಡಿದರು.
ಇದೇ ವೇಳೆ ಕಾಲೇಜಿನಲ್ಲಿ ಪ್ರಥಮ ದರ್ಜೆ ಸಹಾಯಕರಾಗಿ ಕರ್ತವ್ಯ ನಿರ್ವಹಿಸಿ ವಯೋ ನಿವೃತ್ತಿ ಹೊಂದಿದ ಸಂಗಮೇಶ ಪಟ್ಟಣಕರ್ ಹಾಗೂ ವರ್ಗಾವಣೆಗೊಂಡ ವಾಣಿಜ್ಯ ವಿಭಾಗದ ಮುಖ್ಯಸ್ಥ ಡಾ ಸಿದ್ದಲಿಂಗ ರಾಠೋಡ್ ಇವರಿಗೆ ವಿಶೇಷವಾಗಿ ಸನ್ಮಾನಿಸಿ ಗೌರವಿಸಲಾಯಿತು.
ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಗುಲಾಬಿ ಹೂ, ಪೇನ್ ವಿತರಿಸಿ ಸ್ವಾಗತಿಸಲಾಯಿತು.
ಪ್ರಮುಖರಾದ ಶರಣಬಸವ ವಿ ಡಿಗ್ಗಾವಿ, ರಮೇಶ ಕೊಡಗಾನೂರು, ಶಿವಪ್ಪ ಜಿ ಕಂಬಾರ, ಶರಣಪ್ಪ ಯಾಳಗಿ, ಡಾ ಪೂಜಾ ಹೊನ್ನುಟಗಿ, ಸುಮಾ ಎಚ್, ಹಾಗೂ
ಹ ವಿ ಸಂಘದ ಕಾರ್ಯದರ್ಶಿ ರೇವಣಸಿದ್ದಯ್ಯ ಮಠ ಸೇರಿದಂತೆ ಹಲವರಿದ್ದರು.
ವಿದ್ಯಾರ್ಥಿನಿ ಸುಷ್ಮಾ ಇವರಿಂದ ಮೂಡಿ ಬಂದ ಭರತ ನಾಟ್ಯ ಮನಸೂರೆಗೊಂಡಿತು. ಉಪನ್ಯಾಸಕ ಮಲ್ಲಿಕಾರ್ಜುನ ಮರಡ್ಡಿ ಸ್ವಾಗತಿಸಿದರು, ಡಾ ಯಂಕನಗೌಡ ಪಾಟೀಲ್ ನಿರೂಪಿಸಿದರು, ಮಲ್ಲಣ್ಣ ಬಿಳೆಬಾವಿ ವಂದಿಸಿದರು.

