ಇಂಡಿ ಎಸಿ ಮೂಲಕ ಮುಖ್ಯಮಂತ್ರಿ ಖಾತೆಗೆ ೨೬೦೦ ರೂ ಡಿಡಿ ಕಳಿಸಿ ರೈತರ ಆಕ್ರೋಶ
ಉದಯರಶ್ಮಿ ದಿನಪತ್ರಿಕೆ
ಇಂಡಿ: ರೈತರಿಗೆ ೨೫೦೦ ರೂ ಬರಗಾಲ ಪರಿಹಾರ ನೀಡುತ್ತಿರುವದು ಬೇಡ ಎಂದು ಆಗ್ರಹಿಸಿ ಇಂದು ರೈತರು ಆಡಳಿತಸೌಧದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.
ಅಲ್ಲಿ ಮಾತನಾಡಿದ ಕರವೇ ಮುಖಂಡ ಬಾಳು ಮುಳಜಿ ಒಂದು ಎಕರೆ ಹತ್ತಿಗೆ ನಾಟಿ ಮಾಡಲು ಕನಿಷ್ಠ ೧೫ ಸಾವಿರ ರೂ ಖರ್ಚಾಗುತ್ತದೆ. ಒಂದು ಎಕರೆ ಕಬ್ಬಿಗೆ ರೂ ೨೫ ಸಾವಿರ ಮತ್ತು ಒಂದು ಎಕರೆ ತೊಗರಿಗೆ ರೂ ೧೫ ಸಾವಿರ ಖರ್ಚಾಗುತ್ತದೆ ಎಂದು ಆಗ್ರಹಿಸಿ ರೈತರಿಗೆ ನೀಡುತ್ತಿರುವ ಬರಗಾಲ ಪರಿಹಾರ ಇನ್ನೊಮ್ಮೆ ಚರ್ಚಿಸಿ ನೀಡಲು ಕೇಳಿಕೊಂಡರು.
ರೈತ ಮುಖಂಡ ಮಲ್ಲು ಗುಡ್ಲ ಮಾತನಾಡಿ, ನಾವು ರೈತರು ಪ್ರತಿ ರೈತರಿಂದ ರೂ ಹತ್ತು ಸಂಗ್ರಹಿಸಿ ರೂ ೨೬೦೦ ರೂ ಸಂಗ್ರಹಿಸಿದ್ದು ಅದನ್ನು ಡಿ ಡಿ ಮೂಲಕ ಮುಖ್ಯಮಂತ್ರಿಯವರ ಖಾತೆಗೆ ಜಮೆ ಮಾಡಲು ಮಾನ್ಯ ಕಂದಾಯ ಉಪವಿಬಾಗಾಧಿಕಾರಿಗಳಿಗೆ ಡಿ ಡಿ ನೀಡುತ್ತಿದ್ದೇವೆ ಎಂದರು.
ವಿಜಯಕುಮಾರ ರಾಠೋಡ ಮಾತನಾಡಿ ರೈತರ ಬರಗಾಲದ ಸಂಕಷ್ಟಗಳಿಗೆ ಸ್ಪಂದಿಸಿ ವೈಜ್ಞಾನಿಕ ಬೆಳೆ ಪರಿಹಾರ ಹಾಗೂ ಸಂಪೂರ್ಣ ಸಾಲ ಮನ್ನಾ ಮಾಡುವಂತೆ ಆಗ್ರಹಿಸಿ ಪರಿಹಾರ ತಕ್ಷಣ ಬಿಡುಗಡೆ ಮಾಡುವಂತೆ ಆಗ್ರಹಿಸಿದರು.
ಅಶೋಕ ಅಕಲಾದಿ, ಶ್ರೀಶೈಲಗೌಡ ಬಿರಾದಾರ, ಪ್ರಶಾಂತ ಲಾಳಸಂಗಿ, ಶಿವರಾಜ ಕೆಂಗನಾಳ ಮಾತನಾಡಿದರು.
ಪ್ರತಿಭಟನೆಯಲ್ಲಿ ಸೋಮಣ್ಣ ಗುಡ್ಲ, ಸಾಗರ ಬಿರಾದಾರ, ಶ್ರೀಕಾಂತ ಬಡಿಗೇರ, ಸಂತೊಷ ಬಗದುರ್ಗಿ ಆನಂದ ಮುಳಜಿ, ಹಣಮಂತ ಹೂಗಾರ, ಶಾಂತು ಲಾಳಸಂಗಿ, ದುಂಡುಗೌಡ ಬಿರಾದಾರ, ಬಲ್ಲು ಇಂಗಳೆ, ಸೈಯದ ಮುಲ್ಲಾ, ಮುದಕಪ್ಪ ಹೊಟಗಿ,ಮುತ್ತು ತಾಂಬೆ, ಪ್ರಭಾಕರ ಘೋರಪಡೆ, ಮಳಗು ಪೂಜಾರಿ, ಕೋನಪ್ಪ ಗುಡ್ಲ, ಸತೀಶ ನಿಂಬಾಳ ಮತ್ತಿತರಿದ್ದರು.
ಕಂದಾಯ ಉಪವಿಬಾಗಾಧಿಕಾರಿ ಚಿದಾನಂದ ಗುರುಸ್ವಾಮಿಯವರಿಗೆ ಮನವಿ ಪತ್ರ ಮತ್ತು ಡಿ ಡಿ ಸಲ್ಲಿಸಿದರು.

