ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದಂತೆ, ವಿಜಯಪುರ ಜಿಲ್ಲೆ ಮತ್ತು ಅದರ ವ್ಯಾಪ್ತಿಯ ಎಲ್ಲಾ ನ್ಯಾಯಾಲಯಗಳಲ್ಲಿ ಬಾಕಿ ಇರುವ ರಾಜಿ ಆಗಬಹುದಾದ ಪ್ರಕರಣಗಳ ಶೀಘ್ರ ಇತ್ಯರ್ಥಕ್ಕಾಗಿ ಆಗಸ್ಟ್ ೧ ರಿಂದ ಡಿಸೆಂಬರ್ ೧೨ರವರೆಗೆ ಮಧ್ಯಸ್ಥಿಕೆಯ ಅಭಿಯಾನ ೩.೦ ಎಂಬ ವಿಶೇಷ ಅಭಿಯಾನವನ್ನು ಜಿಲ್ಲೆಯಾದ್ಯಂತ ಆಯೋಜಿಸಲಾಗಿದೆ.
ನ್ಯಾಯಾಲಯಗಳಲ್ಲಿ ಬಾಕಿ ಇರುವ, ರಾಜಿ ಮಾಡಿಕೊಳ್ಳಬಹುದಾದ ವ್ಯಾಜ್ಯಗಳನ್ನು ಮಧ್ಯಸ್ಥಿಕೆ ಕೇಂದ್ರಗಳಿಗೆ ರವಾನಿಸಿ, ಅಲ್ಲಿ ವಿಶೇಷ ತರಬೇತಿ ಪಡೆದ ಪರಿಣಿತ ಮಧ್ಯಸ್ಥಿಕೆಗಾರರ ಮುಖಾಂತರ ಸೌಹಾರ್ದಯುತವಾಗಿ ಇತ್ಯರ್ಥಪಡಿಸುವುದು ಈ ಅಭಿಯಾನದ ಮುಖ್ಯ ಉದ್ದೇಶವಾಗಿದೆ ಎಂದು ವಿಜಯಪುರ ಜಿಲ್ಲಾ ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಹರೀಶ. ಎ. ಮತ್ತು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಸದಸ್ಯ ಕಾರ್ಯದರ್ಶಿಯಾದ ಅರವಿಂದ. ಎಸ್. ಹಾಗರಗಿ ತಿಳಿಸಿದ್ದಾರೆ.
ಸಾರ್ವಜನಿಕರು ಹಾಗೂ ಕಕ್ಷಿದಾರರು ಈ ವಿಶೇಷ ಅಭಿಯಾನದ ಸದುಪಯೋಗವನ್ನು ಪಡೆದುಕೊಳ್ಳಬಹುದಾಗಿದೆ. ನ್ಯಾಯವಾದಿಗಳು ಸಹ ತಮ್ಮ ಕಕ್ಷಿದಾರರಿಗೆ ಈ ಕುರಿತು ಸೂಕ್ತ ಮಾಹಿತಿ ನೀಡಿ ರಾಜಿ ಸಂಧಾನಕ್ಕೆ ಪ್ರೇರೇಪಿಸಬೇಕು ಎಂದವರು ಮನವಿ ಮಾಡಿದ್ದಾರೆ.
ಈ ಅಭಿಯಾನದ ಕುರಿತು ಹೆಚ್ಚಿನ ವಿವರಗಳಿಗಾಗಿ ಸಾರ್ವಜನಿಕರು ವಿಜಯಪುರದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಅಥವಾ ಇಂಡಿ, ಸಿಂದಗಿ, ಬಸವನ ಬಾಗೇವಾಡಿ ಮತ್ತು ಮುದ್ದೇಬಿಹಾಳ ತಾಲೂಕು ಕಾನೂನು ಸೇವೆಗಳ ಸಮಿತಿ ಕಚೇರಿಗಳನ್ನು ಸಂಪರ್ಕಿಸಬಹುದಾಗಿದೆ ಎಂದವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
