ವಿಜಯಪುರದಲ್ಲಿ ವಚನ ಪಿತಾಮಹ ಡಾ.ಫ.ಗು.ಹಳಕಟ್ಟಿ ಜೀವನಾಧಾರಿತ ಸಿನಿಮಾ ಚಿತ್ರೀಕರಣ ಆರಂಭ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಗರದ
ಬಿಎಲ್‌ಡಿಇ ಸಂಸ್ಥೆಯ ಡಾ.ಫ.ಗು. ಹಳಕಟ್ಟಿ ಸಂಶೋಧನಾ ಕೇಂದ್ರದ ಪರಿಸರದಲ್ಲಿ ವಚನ ಪಿತಾಮಹ ಡಾ.ಫ.ಗು.ಹಳಕಟ್ಟಿಯವರ ಜೀವನಾಧಾರಿತ ಚಲನಚಿತ್ರದ ಚಿತ್ರೀಕರಣ ಬುಧವಾರ ಆರಂಭವಾಯಿತು.
ಈ ವೇಳೆ ಶರಣ ಚಿಂತಕ ಡಾ.ಮಹಾಂತೇಶ ಬಿರಾದಾರ ಅವರು, ವಚನ ಪಿತಾಮಹನ ಜೀವನವನ್ನು ಎಳೆ ಎಳೆಯಾಗಿ ಬಿಚ್ಚಿಡುತ್ತಿದ್ದಂತೆ ಕುಳಿತವರ ಮೈನವಿರೇಳುವುದರ ಜೊತೆಗೆ ಕಣ್ಣಾಲಿಗಳು ತೇವವಾದವು.
‘ಹಳಕಟ್ಟಿ ಅವರು ತಮ್ಮ ಜೀವ ತೇಯ್ದುಕೊಂಡು ವಚನ ದೀಪವಾಗಿ ಬೆಳಗಿದ್ದಾರೆ. ಸಚಿವ ಎಂ.ಬಿ.ಪಾಟೀಲರ ಕಾಳಜಿ, ಮಹತ್ತರ ಕಾರಣದಿಂದ ಇಂದು ಫ.ಗು.ಹಳಕಟ್ಟಿ ಸಂಶೋಧನಾ ಕೇಂದ್ರದ ಮೂಲಕ ನಾಡಿನೆಲ್ಲೆಡೆ ಅವರಿನ್ನೂ ಹೆಸರಾಗಿದ್ದಾರೆ. ಅದರ ಪ್ರೇರಣೆಯ ಭಾಗವಾಗಿ ಈ ಚಿತ್ರ ತಯಾರಾಗುತ್ತಿದೆ. ಈ ತಂಡಕ್ಕೆ ನಾವುಗಳೆಲ್ಲ ಸಹಕಾರ ನೀಡೋಣ’ ಎಂದು ಡಾ.ಮಹಾಂತೇಶ ನುಡಿದರು.
ನಗರದ ಅಭಿನವ ಸಿದ್ಧಾರೂಢ ಸ್ವಾಮಿಜಿ ಮಾತನಾಡಿ, ಕನ್ನಡದ ನಿಜವಾದ ಮ್ಯಾಕ್ಸಮುಲ್ಲರ್ ಎಂದರೆ ಅದು ಡಾ.ಹಳಕಟ್ಟಿ ಎಂದು ಸಿಂಪಿ ಲಿಂಗಣ್ಣ ಅವರು ಉಲ್ಲೇಖಿಸಿದ್ದನ್ನು ನೆನಪಿಸುತ್ತ, ಹಳಕಟ್ಟಿಯವರು ಕಾವಿ ತೊಡದ ಸರ್ವ ಸಂಗ ಪರಿತ್ಯಾಗಿ ಎಂದು ಮನದುಂಬಿ ಮಾತನಾಡಿದರು.
ಹಿರಿಯ ಜೀವಿ ವಿ.ಸಿ. ನಾಗಠಾಣ ಅಧ್ಯಕ್ಷತೆ ವಹಿಸಿದ್ದರು.
ಸಿನಿಮಾಗೆ ಕತೆ ಬರೆದಿರುವ ಸಾಹಿತಿ ಡಾ.ಕೃಷ್ಣ ಕೊಲ್ಹಾರ ಕುಲಕರ್ಣಿ, ಚಿತ್ರ ತಂಡದ ಗುರುಪ್ರಸಾದ, ಗಡಿನಾಡು ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಡಾ.ಎಂ.ಎಸ್. ಮದಭಾವಿ, ಡಾ.ವಿ.ಡಿ. ಐಹೊಳಿ ಸೇರಿದಂತೆ ನೂರಾರು ಶರಣ ಮನಸ್ಸುಗಳು ಇದಕ್ಕೆ ಸಾಕ್ಷಿಯಾದವು.

