ತಾಳಿಕೋಟೆ ಪಟ್ಟಣದಲ್ಲಿ ಅಖಂಡ ಕರ್ನಾಟಕ ರೈತ ಸಂಘದ ನೇತೃತ್ವದಲ್ಲಿ ಜೋಳಿಗೆ ಹಿಡಿದು ಹಣ ಸಂಗ್ರಹ
ಉದಯರಶ್ಮಿ ದಿನಪತ್ರಿಕೆ
ತಾಳಿಕೋಟೆ: ಆರ್ಥಿಕ ದುರ್ಗತಿ ಯಾವುದೇ ಸರ್ಕಾರಕ್ಕೂ ಬರಬಾರದು.” ಹೀಗೆಂದು ಆಕ್ರೋಶ ವ್ಯಕ್ತಪಡಿಸುತ್ತಾ ಅಖಂಡ ಕರ್ನಾಟಕ ರೈತ ಸಂಘದ ನೇತೃತ್ವದಲ್ಲಿ ತಾಳಿಕೋಟೆ ಪಟ್ಟಣದ ಶ್ರೀ ಖಾಸ್ಗತೇಶ್ವರ ಮಠದಿಂದ ಪ್ರಮುಖ ರಸ್ತೆಗಳಲ್ಲಿ ರಾಜ್ಯ ಸರ್ಕಾರಕ್ಕೆ ನೆರವು ನೀಡಲು ರೈತ ಸಂಘದ ಅರವಿಂದ ಕುಲಕರ್ಣಿ ಅವರ ನೇತೃತ್ವದಲ್ಲಿ ಜೋಳಿಗೆ ಹಿಡಿದು ದೇಣಿಗೆ ಸಂಗ್ರಹ ಅಭಿಯಾನಕ್ಕೆ ಚಾಲನೆ ನೀಡಲಾಯಿತು.
ರಾಜ್ಯದಲ್ಲಿ ಭೀಕರ ಬರಗಾಲ ಆವರಿಸಿದ್ದು, ರೈತರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಆದರೆ ರಾಜ್ಯ ಸರ್ಕಾರವು ಇನ್‌ಪುಟ್ ಸಬ್ಸಿಡಿ ರೂಪದಲ್ಲಿ ಕೇವಲ ೨೫೦೦ ರವರೆಗೆ ಪರಿಹಾರ ನೀಡಲು ಮುಂದಾಗಿರುವುದು ರೈತರನ್ನು ಭಿಕ್ಷುಕರಂತೆ ನೋಡಿದಂತಾಗಿದೆ. ಆರ್ಥಿಕವಾಗಿ ಸಂಪೂರ್ಣ ದಿವಾಳಿಯಾಗಿರುವ ರಾಜ್ಯ ಸರ್ಕಾರಕ್ಕೆ ವ್ಯಾಪಾರಸ್ಥರು ಹಾಗೂ ತರಕಾರಿ ಮಾರಾಟ ಮಾಡುವ ರೈತರಿಂದ ದೇಣಿಗೆ ಸಂಗ್ರಹಿಸಿ, ಡಿಡಿ (ಚೆಕ್) ಮುಖಾಂತರ ಜಿಲ್ಲಾಧಿಕಾರಿಗಳಿಗೆ ರವಾನಿಸಲಾಗುವುದು ಎಂದು ಅಖಂಡ ಕರ್ನಾಟಕ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಹಾಗೂ ರಾಜ್ಯ ಸಂಘಟನಾ ಕಾರ್ಯದರ್ಶಿ ವಿಠ್ಠಲ ಬಿರಾದಾರ ತಿಳಿಸಿದರು.
ಪಟ್ಟಣದ ಮುಖ್ಯ ರಸ್ತೆಯ ಅಂಗಡಿ ಮಾಲೀಕರು, ರೈತ ಮಹಿಳೆಯರು ಹಾಗೂ ಶಾಲಾ ವಿದ್ಯಾರ್ಥಿನಿಯರು ಈ ಅಭಿಯಾನದಲ್ಲಿ ತಮ್ಮ ಶಕ್ಯಾನುಸಾರ ಹಣ ನೀಡಿದರು. ಒಟ್ಟು ೩,೪೮೫ ದೇಣಿಗೆ ಸಂಗ್ರಹವಾಯಿತು. ಸಂಗ್ರಹವಾದ ಹಣವನ್ನು ತಹಶೀಲ್ದಾರರಿಗೆ ಹಸ್ತಾಂತರಿಸಲು ಹೋದಾಗ ಅವರು ಸ್ವೀಕರಿಸಲು ನಿರಾಕರಿಸಿದ್ದರಿಂದ, ಗುರುವಾರ ಡಿಡಿ ಮುಖಾಂತರ ಜಿಲ್ಲಾಧಿಕಾರಿಗಳಿಗೆ ತಲುಪಿಸಲಾಗುವುದು ಎಂದು ಅರವಿಂದ ಕುಲಕರ್ಣಿ ಅವರು ತಿಳಿಸಿದರು.
ತಾಲೂಕು ಅಧ್ಯಕ್ಷ ಬಾಲಪ್ಪಗೌಡ ಲಿಂಗದಳ್ಳಿ ಹಾಗೂ ಉಪಾಧ್ಯಕ್ಷ ರಾಮನಗೌಡ ಹಾದಿಮನಿ ಮಾತನಾಡಿ, “ಜನಸಾಮಾನ್ಯರಿಂದ ಕೋಟ್ಯಾಂತರ ರೂಪಾಯಿ ತೆರಿಗೆ ಸಂಗ್ರಹವಾಗುತ್ತಿದ್ದರೂ ಹಣ ಎಲ್ಲಿಗೆ ಹೋಯಿತು ಆಡಳಿತಾರೂಢ ಸರ್ಕಾರಗಳು ಅನಗತ್ಯ ಯೋಜನೆಗಳನ್ನು ಜಾರಿಗೆ ತಂದು ರಾಜ್ಯವನ್ನು ಆರ್ಥಿಕವಾಗಿ ಹಾಳುಮಾಡುತ್ತಿವೆ. ರೈತರ ಹಿತ ಕಾಯುವುದನ್ನು ಬಿಟ್ಟು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಪರಸ್ಪರ ಬೊಟ್ಟು ಮಾಡಿ ತೋರಿಸುತ್ತಾ ರೈತರನ್ನು ಸಂಕಷ್ಟಕ್ಕೆ ತಳ್ಳುತ್ತಿವೆ” ಎಂದು ಕಿಡಿಕಾರಿದರು.
ಬಿಕ್ಷಾಟನಾ ಅಭಿಯಾನದಲ್ಲಿ ಸಂಘಟನೆಯ ಪ್ರಮುಖರಾದ ವಿಠ್ಠಲ ಬಿರಾದಾರ, ತಾಲೂಕಾ ಅಧ್ಯಕ್ಷ ಬಾಲಪ್ಪಗೌಡ ಲಿಂಗದಳ್ಳಿ, ರಾಮನಗೌಡ ಹಾದಿಮನಿ, ಬಸವರಾಜ ಹೊಸಳ್ಳಿ, ಸಂತೋಷ ಬಿರಾದಾರ, ಹಣಮಂತರಾಯ ಹಂದ್ರಾಳ, ಸಿದ್ಧಲಿಂಗಪ್ಪ ಬಿರಾದಾರ, ಸಂಗನಗೌಡ ಬಿರಾದಾರ, ಮಲ್ಲಿಕಾರ್ಜುನ ಬಿರಾದಾರ, ಪ್ರಭುಗೌಡ ಬಿರಾದಾರ, ಸುಭಾಷ ಗುದಗಿ, ಹನುಮಂತರಾಯ ಸಾಸನೂರ, ಸಂಗನಗೌಡ ಕೊಳೂರು, ಬಸನಗೌಡ ಕವದಿ ಸೇರಿದಂತೆ ಹಲವು ರೈತರು ಭಾಗವಹಿಸಿದ್ದರು.

