ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ವತಿಯಿಂದ ಸೇವಾನಿರತ ಸೈನಿಕರು, ಮಾಜಿ ಸೈನಿಕರು ಹಾಗೂ ಅವರ ಅವಲಂಬಿತರಿಗೆ ಕಾನೂನು ಅರಿವು ಮತ್ತು ಉಚಿತ ನೆರವು ಒದಗಿಸಲು ವೀರ ಪರಿವಾರ ಸಹಾಯತಾ ಯೋಜನೆ-೨೦೨೫ರಡಿ ಜಿಲ್ಲೆಯ, ಜಿಲ್ಲಾ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಕಚೇರಿಯಲ್ಲಿ ಉಚಿತ ಕಾನೂನು ಸೇವೆಗಳ ಕ್ಲಿನಿಕ್ ಆರಂಭಿಸಲಾಗಿದೆ.
ಪ್ರತಿ ಗುರುವಾರ ಬೆಳಿಗ್ಗೆ ೧೧ರಿಂದ ಸಂಜೆ ೫.೩೦ರವರೆಗೆ ನಿಯೋಜಿತ ವಕೀಲರು ಲಭ್ಯವಿದ್ದು, ಅಕ್ಟೋಬರ್ ೧ರಂದು ಬೆಳಿಗ್ಗೆ ೧೧.೩೦ಕ್ಕೆ ಉಚಿತ ಕಾನೂನು ಸೇವೆಗಳ ಅರಿವು ಕಾರ್ಯಕ್ರಮ ಆಯೋಜಿಸಲಾಗಿದೆ. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಹಿರಿಯ ಸಿವಿಲ್ ನ್ಯಾಯಾಧೀಶರಾದ ಅರವಿಂದ ಹಾಗರಗಿ ಹಾಗೂ ಸೈನಿಕ ಕಲ್ಯಾಣ ಇಲಾಖೆಯ ಉಪನಿರ್ದೇಶಕರ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಲಿದೆ. ಮಾಜಿ ಸೈನಿಕರು, ಅವರ ಅವಲಂಬಿತರು ಹಾಗೂ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸೌಲಭ್ಯದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕೋರಲಾಗಿದೆ.
ಹೆಚ್ಚಿನ ಮಾಹಿತಿಗೆ: ಎಂ.ಎಸ್. ಇನಾಮದಾರ, ಮೊ. ೭೭೯೫೨೦೮೪೮೫, ದೂರವಾಣಿ: ೦೮೩೫೨-೨೫೦೯೧೩. ಸಂಪರ್ಕಿಸಬಹುದು ಎಂದು ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪ ನಿರ್ದೇಶಕರ ಪ್ರಕಟಣೆ ತಿಳಿಸಿದೆ.
