ಉದಯರಶ್ಮಿ ದಿನಪತ್ರಿಕೆ
ಅಥಣಿ: ಅಂತರಾಷ್ಟ್ರೀಯ ಮಾನವ ಹಕ್ಕುಗಳ ನ್ಯಾಯಾಂಗ ಸುರಕ್ಷಾ ಪರಿಷದ್ ರಾಜ್ಯ ಘಟಕದ ಅಧ್ಯಕ್ಷರಾಗಿ ನೂತನವಾಗಿ ಆಯ್ಕೆಯಾಗಿರುವ ಜನಪರ ಹೋರಾಟಗಾರ ಡಿ. ಎಂ. ಮಕಾಂದಾರ ಅವರಿಗೆ ಅಥಣಿಯ ಖಾಸಗಿ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರು ಹಾಗೂ ಸದಸ್ಯರು ಆತ್ಮೀಯವಾಗಿ ಗೌರವಿಸಿದರು.
ಸಮಾರಂಭದಲ್ಲಿ, ನೂತನ ರಾಜ್ಯಾಧ್ಯಕ್ಷರನ್ನು ಶಾಲು ಹೊದಿಸಿ, ಹೂಮಾಲೆ ಹಾಕಿ, ಸ್ಮರಣಿಕೆ ನೀಡಿ ಸನ್ಮಾನಿಸಿ ಅಭಿನಂದಿಸಿದರು
ಸನ್ಮಾನ ಹಾಗೂ ಅಭಿನಂದನೆಗಳನ್ನು ಸ್ವೀಕರಿಸಿ ಮಾತನಾಡಿದ ನೂತನ ರಾಜ್ಯಾಧ್ಯಕ್ಷ ಡಿ.ಎಂ. ಮಕಾಂದಾರ ಅವರು, ಮಾನವ ಹಕ್ಕುಗಳು ಬರೀ ಕಾನೂನಿನ ನಿಯಮಾವಳಿಗಳಷ್ಟೇ ಅಲ್ಲ ಅವು ಪ್ರತಿಯೊಬ್ಬ ಮಾನವನ ಗೌರವಯುತ, ಸ್ವತಂತ್ರ ಹಾಗೂ ಸಾರ್ವಭೌಮ ಬದುಕಿನ ಮೂಲ ಸೂತ್ರಗಳಾಗಿವೆ. ಜಾತಿ ಮತ ಧರ್ಮ ಭಾಷೆ ಲಿಂಗ ಹಾಗೂ ಸಾಮಾಜಿಕ-ಆರ್ಥಿಕ ಅಸಮಾನತೆಗಳನ್ನು ಮೀರಿ ಪ್ರತಿಯೊಬ್ಬ ನಾಗರಿಕನಿಗೂ ಸಂವಿಧಾನ ಒದಗಿಸಿರುವ ಮೂಲಭೂತ ಹಕ್ಕುಗಳು ತಲುಪಬೇಕಿದೆ. ಸಮಾಜದ ಕೊನೆಯ ವ್ಯಕ್ತಿಗೂ ನ್ಯಾಯ ಸಿಕ್ಕಾಗ ಮಾತ್ರ ಮಾನವ ಹಕ್ಕುಗಳ ನೈಜ ರಕ್ಷಣೆ ಸಾಧ್ಯ. ಈ ಮಹತ್ಕಾರ್ಯ ಕೇವಲ ಸರ್ಕಾರ ಅಥವಾ ಒಂದು ನಿರ್ದಿಷ್ಟ ಸಂಘಟನೆಯ ಹೊಣೆಗಾರಿಕೆಯಾಗದೆ, ಪ್ರತಿಯೊಬ್ಬ ಜಾಗೃತ ನಾಗರಿಕನ ಆದ್ಯ ಕರ್ತವ್ಯವಾಗಬೇಕು ಎಂದು ಆಶಯ ವ್ಯಕ್ತಪಡಿಸಿದರು. ಪರಿಷದ್ ರಾಜ್ಯಾಧ್ಯಕ್ಷನಾಗಿ ಲಭಿಸಿರುವ ಈ ನಿಷ್ಠೆಯ ಪೀಠವನ್ನು ಅಸಹಾಯಕರ, ತುಳಿತಕ್ಕೊಳಗಾದವರ ಹಾಗೂ ಶೋಷಿತರ ಪರ ಧ್ವನಿಯಾಗಿ ಬಳಸುತ್ತೇನೆ. ನೊಂದವರಿಗೆ ಉಚಿತ ಕಾನೂನಾತ್ಮಕ ನೆರವು ನೀಡುವುದು, ಸಾಮಾಜಿಕ ಶಾಂತಿ, ಸಮರಸತೆ ಮತ್ತು ಕೋಮು ಸೌಹಾರ್ದತೆಯನ್ನು ಕಾಪಾಡಲು ನಿರಂತರ ಶ್ರಮಿಸುವುದು ನನ್ನ ಪ್ರಮುಖ ಆದ್ಯತೆಯಾಗಿದೆ” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಖಾಸಗಿ ಶಿಕ್ಷಣ ಸಂಸ್ಥೆಗಳ ಮುಖಂಡರು ಮಾತನಾಡಿ ಡಿ.ಎಂ. ಮಕಾಂದಾರ ಅವರ ದೀರ್ಘಕಾಲದ ಸಾಮಾಜಿಕ ಸೇವೆ, ಪ್ರಾಮಾಣಿಕತೆ ಹಾಗೂ ಅಸಹಾಯಕರ ಪರ ಇರುವ ನಿಲುವು ಶ್ಲಾಘನೀಯ. ಅವರು ಈ ಅತ್ಯುನ್ನತ ಹುದ್ದೆಗೆ ಆಯ್ಕೆಯಾಗಿರುವುದು ಅಥಣಿ ಭಾಗಕ್ಕೆ ಹಾಗೂ ಇಡೀ ರಾಜ್ಯಕ್ಕೆ ಅತ್ಯಂತ ಹೆಮ್ಮೆಯ ವಿಷಯವಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.

