ಉದಯರಶ್ಮಿ ದಿನಪತ್ರಿಕೆ
ಚಡಚಣ: ಯುವಜನರಲ್ಲಿ ನಿಸ್ವಾರ್ಥ ಸೇವಾ ಮನೋಭಾವ, ಸಾಮಾಜಿಕ ಹೊಣೆಗಾರಿಕೆ ಹಾಗೂ ದೇಶಪ್ರೇಮ ಬೆಳೆಸುವಲ್ಲಿ ರಾಷ್ಟ್ರೀಯ ಸೇವಾ ಯೋಜನೆ (ಎನ್‌ಎಸ್‌ಎಸ್) ಮಹತ್ವದ ಪಾತ್ರ ವಹಿಸುತ್ತಿದೆ ಎಂದು ಜಮಖಂಡಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಪ್ರೊ. ಆರ್.ಬಿ. ಶಿತೋಳೆ ಹೇಳಿದರು.
ಪಟ್ಟಣದ ಶ್ರೀ ಸಂಗಮೇಶ್ವರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಎನ್‌ಎಸ್‌ಎಸ್ ಘಟಕದ ವತಿಯಿಂದ ಸೆ.24ರಂದು ಆಯೋಜಿಸಿದ್ದ ‘ರಾಷ್ಟ್ರೀಯ ಸೇವಾ ಯೋಜನೆ ದಿನ’ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಮಹಾತ್ಮಾ ಗಾಂಧೀಜಿಯವರ ಜನ್ಮಶತಮಾನೋತ್ಸವದ ಅಂಗವಾಗಿ 1969ರ ಸೆ.24ರಂದು ಯುವಜನರಲ್ಲಿ ಸೇವಾ ಮನೋಭಾವ ಹಾಗೂ ದೇಶಪ್ರೇಮ ಬೆಳೆಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಎನ್‌ಎಸ್‌ಎಸ್ ಯೋಜನೆಯನ್ನು ಜಾರಿಗೆ ತಂದಿತು. ‘ನನಗಾಗಿ ಅಲ್ಲ, ನಿನಗಾಗಿ’ ಎಂಬ ಧ್ಯೇಯವಾಕ್ಯದೊಂದಿಗೆ ಆರಂಭವಾದ ಈ ಯೋಜನೆ ಇಂದಿಗೂ ಕೋಟ್ಯಂತರ ಯುವಕ-ಯುವತಿಯರಿಗೆ ಸಮಾಜಮುಖಿ ಬದುಕಿನ ಪಾಠ ಕಲಿಸುತ್ತಿದೆ ಎಂದರು.
ಐಕ್ಯೂಎಸಿ ಸಂಯೋಜಕ ಡಾ. ಎಸ್.ಎಸ್. ದೇಸಾಯಿ ಮಾತನಾಡಿ, ಎನ್‌ಎಸ್‌ಎಸ್ ವಿದ್ಯಾರ್ಥಿಗಳಿಗೆ ತರಗತಿಯ ಪಠ್ಯಪುಸ್ತಕ ಮತ್ತು ಅಂಕಗಳಾಚೆಗೆ ಸಮಾಜದ ನೈಜ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳಲು ಉತ್ತಮ ವೇದಿಕೆಯಾಗಿದೆ. ವಾರ್ಷಿಕ ಸೇವಾ ಶಿಬಿರಗಳ ಮೂಲಕ ಗ್ರಾಮಗಳಿಗೆ ತೆರಳುವ ವಿದ್ಯಾರ್ಥಿಗಳು ರಸ್ತೆ ದುರಸ್ತಿ, ಜಲಮೂಲಗಳ ಸ್ವಚ್ಛತೆ, ಆರೋಗ್ಯ ತಪಾಸಣೆ, ಸಾಕ್ಷರತಾ ಅಭಿಯಾನ ಸೇರಿದಂತೆ ವಿವಿಧ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುತ್ತಾರೆ. ಇದರಿಂದ ವಿದ್ಯಾರ್ಥಿಗಳಲ್ಲಿ ಸಹಾನುಭೂತಿ, ನಾಯಕತ್ವ ಹಾಗೂ ಸಂಘಟನಾ ಕೌಶಲ ಬೆಳೆಸಲು ಸಾಧ್ಯವಾಗುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ. ಎಂ.ಕೆ. ಬಿರಾದಾರ ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಹಾಗೂ ಡಿಜಿಟಲ್ ಯುಗದಲ್ಲಿ ಯುವಜನತೆ ಸಮಾಜದಿಂದ ದೂರವಾಗುತ್ತಿರುವ ಆತಂಕವಿದೆ. ಇಂತಹ ಸಂದರ್ಭದಲ್ಲಿ ಎನ್‌ಎಸ್‌ಎಸ್‌ನಂತಹ ಸೇವಾ ಸಂಘಟನೆಗಳ ಅಗತ್ಯತೆ ಹೆಚ್ಚಾಗಿದೆ. ಪ್ರಕೃತಿ ವಿಕೋಪ, ಸಾಂಕ್ರಾಮಿಕ ರೋಗ, ರಕ್ತದಾನ ಸೇರಿದಂತೆ ತುರ್ತು ಸಂದರ್ಭಗಳಲ್ಲಿ ಮುಂಚೂಣಿಯಲ್ಲಿ ನಿಂತು ಸೇವೆ ಸಲ್ಲಿಸುವ ಎನ್‌ಎಸ್‌ಎಸ್ ಯುವಕರು ಸಮಾಜದ ನೈಜ ಆಸ್ತಿಯಾಗಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಎನ್‌ಎಸ್‌ಎಸ್ ವಿಭಾಗದ ಸಂಯೋಜಕ ಪ್ರೊ. ಎಂ.ಎ. ಜನವಾಡ, ಡಾ. ಯುವರಾಜ ಹಳೇಮನಿ, ಡಾ. ಎಸ್.ಬಿ. ರಾಠೋಡ, ಡಾ. ಆರ್.ಎಸ್. ಮಾವಿನಮರ, ಪ್ರೊ. ಮುರುಗೇಶ ಕೆ.ಎಂ., ಪ್ರೊ. ಬಸವರಾಜ ಯಳ್ಳೂರ, ಪ್ರೊ. ಸಂಜಯಕುಮಾರ ಅವಟಿ, ಪ್ರೊ. ಅಪ್ಪು ಜಾಧವ, ಪ್ರೊ. ಎ.ಎಸ್. ಪಾಟೀಲ, ಡಾ. ಪುರುಷೋತ್ತಮ ಕೆ. ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಶೃತಿ ಬಿರಾದಾರ ನಿರೂಪಿಸಿದರು. ಸ್ನೇಹಾ ಸಂಗೊಳಿ ಸ್ವಾಗತಿಸಿದರು. ಸುಷ್ಮಿತಾ ನಂದಿನವರ ವಂದಿಸಿದರು.

