ಕೆ.ಆರ್.ಎಸ್ ಪಕ್ಷದ ಸೈನಿಕರಿಗೆ ನಾಯಕತ್ವ ತರಬೇತಿ ಶಿಬಿರದಲ್ಲಿ ರಾಜ್ಯ ಗೌರವಾಧ್ಯಕ್ಷ ರವಿಕೃಷ್ಣ ರೆಡ್ಡಿ ಕರೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಗರದಲ್ಲಿ ಕರ್ನಾಟಕ ರಾಷ್ಟ್ರ ಸಮಿತಿ (KRS) ಪಕ್ಷದ ಸೈನಿಕರಿಗೆ ರಾಜ್ಯ ಗೌರವಾಧ್ಯಕ್ಷ ರವಿಕೃಷ್ಣ ರೆಡ್ಡಿ ಅವರ ನೇತೃತ್ವದಲ್ಲಿ ನಾಯಕತ್ವ ತರಬೇತಿ ಕಾರ್ಯಾಗಾರ ಯಶಸ್ವಿಯಾಗಿ ನಡೆಯಿತು.
ಕಾರ್ಯಾಗಾರದಲ್ಲಿ ಮಾತನಾಡಿದ ರವಿಕೃಷ್ಣ ರೆಡ್ಡಿ ಅವರು, ರಾಜಕೀಯವನ್ನು ಕೇವಲ ಅಧಿಕಾರ ಮತ್ತು ಚುನಾವಣೆಗಳ ದೃಷ್ಟಿಯಿಂದ ನೋಡದೆ, ಜನರ ಸಮಸ್ಯೆಗಳಿಗೆ ಸ್ಪಂದಿಸುವ, ಭ್ರಷ್ಟಾಚಾರದ ವಿರುದ್ಧ ನಿರಂತರವಾಗಿ ಹೋರಾಡುವ ಹಾಗೂ ಪ್ರಾಮಾಣಿಕ ಆಡಳಿತಕ್ಕಾಗಿ ಶ್ರಮಿಸುವ ಜನಸೇವೆಯ ಕ್ಷೇತ್ರವನ್ನಾಗಿ ರೂಪಿಸಬೇಕು ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.
ಕೆಆರೆಸ್ ಪಕ್ಷವು ಕಳೆದ ವರ್ಷಗಳಲ್ಲಿ ನಡೆಸಿಕೊಂಡು ಬಂದಿರುವ ಲಂಚಮುಕ್ತ ಅಭಿಯಾನ, ಸೈಕಲ್ ಯಾತ್ರೆ, ‘ಎದ್ದೇಳಿ ಕನ್ನಡಿಗ’ ಅಭಿಯಾನ, ರೈತ ಜಾಗೃತಿ ಅಭಿಯಾನ ಹಾಗೂ ಪಕ್ಷದ ಸೈನಿಕರಿಗಾಗಿ ವ್ಯಕ್ತಿತ್ವ ಮತ್ತು ನಾಯಕತ್ವ ಕಾರ್ಯಾಗಾರಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ ಎಂದರು.
ಈ ನಾಯಕತ್ವ ತರಬೇತಿ ಕಾರ್ಯಾಗಾರದಲ್ಲಿ ಪಕ್ಷದ ಸೈನಿಕರಿಗೆ ಸಂಘಟನೆ ಕಟ್ಟುವುದು, ಜನರ ಸಮಸ್ಯೆಗಳನ್ನು ಗುರುತಿಸಿ ಅವುಗಳ ಪರಿಹಾರಕ್ಕಾಗಿ ಕಾನೂನುಬದ್ಧವಾಗಿ ಹೋರಾಟ ನಡೆಸುವುದು, ಸಾರ್ವಜನಿಕ ಜೀವನದಲ್ಲಿ ಶಿಸ್ತು ಮತ್ತು ಪ್ರಾಮಾಣಿಕತೆ ಕಾಪಾಡಿಕೊಳ್ಳುವುದು ಹಾಗೂ ಭ್ರಷ್ಟಾಚಾರದ ವಿರುದ್ಧ ಧೈರ್ಯವಾಗಿ ಧ್ವನಿ ಎತ್ತುವುದು ಸೇರಿದಂತೆ ವಿವಿಧ ವಿಷಯಗಳ ಕುರಿತು ಮಾರ್ಗದರ್ಶನ ನೀಡಲಾಯಿತು.
“ನಾವು ಬದಲಾವಣೆಯನ್ನು ಬಯಸುವುದಷ್ಟೇ ಅಲ್ಲ; ನಾವೇ ಬದಲಾವಣೆಯ ಭಾಗವಾಗಬೇಕು. ಪ್ರತಿಯೊಬ್ಬ KRS ಸೈನಿಕನೂ ತನ್ನ ಕ್ಷೇತ್ರದಲ್ಲಿ ಪ್ರಾಮಾಣಿಕ ನಾಯಕತ್ವದ ಮಾದರಿಯಾಗಬೇಕು” ಎಂಬ ಸಂದೇಶವನ್ನು ಕಾರ್ಯಾಗಾರದಲ್ಲಿ ನೀಡಲಾಯಿತು.
ವಿಜಯಪುರ ಜಿಲ್ಲೆ ಸೇರಿಸಿದಂತೆ ವಿವಿಧ ಜಿಲ್ಲೆ ಮತ್ತು ತಾಲೂಕುಗಳಿಂದ ಆಗಮಿಸಿದ್ದ ಪಕ್ಷದ ಮುಖಂಡರು, ಪದಾಧಿಕಾರಿಗಳು ಹಾಗೂ ಸೈನಿಕರು ಕಾರ್ಯಾಗಾರದಲ್ಲಿ ಉತ್ಸಾಹದಿಂದ ಭಾಗವಹಿಸಿದರು. ಕಾರ್ಯಾಗಾರವು ಕಾರ್ಯಕರ್ತರಲ್ಲಿ ಹೊಸ ಉತ್ಸಾಹ, ಆತ್ಮವಿಶ್ವಾಸ ಹಾಗೂ ಜನಪರ ಹೋರಾಟಗಳನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಮುನ್ನಡೆಸುವ ಸಂಕಲ್ಪ ಮೂಡಿಸಿತು.
ವಿಜಯಕುಮಾರ ಯು ಬಿ. ಶಿವಾನಂದ ಯಡಹಳ್ಳಿ, ಗಣಪತಿ ರಾಠೋಡ, ದೀಪಾ ಮರನೂರ, ಅಶೋಕ ಜಾಧವ, ಸಂತೋಷ ಹೂಗಾರ, ಶಕ್ತಿಕುಮಾರ, ಹಮಿದ ಇನಾಮದಾರ, ರಾಕೇಶ ಇಂಗಳಗಿ, ದುರ್ಗಪ್ಪ ಬೂದಿಹಾಳ, ಸೀನು ಹಿಪ್ಪರಗಿ, ವಿಕ್ರಮ್ ವಾಘಮೋರೆ, ನಬಿ ಹುಣಶ್ಯಾಳ, ಚಂದ್ರು ನಗಾರೇ ಸೇರಿದಂತೆ ಹಲವರಿದ್ದರು.

