ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಅಂಚೆ ವಿಭಾಗದ ೨೦೨೬-೨೭ ನೇ ಸಾಲಿನ ಎರಡನೇ ತ್ರೈಮಾಸಿಕ ಅಂಚೆ ಅದಾಲತ್ ಸೆ.೨೧ ರಂದು ನಗರದ ಅಂಚೆ ಅಧೀಕ್ಷಕರ ಕಚೇರಿಯಲ್ಲಿ ಮಧ್ಯಾಹ್ನ ೩ ಗಂಟೆಗೆ ನಡೆಯಲಿದೆ.
ಬಬಲೇಶ್ವರ, ಬಸವನಬಾಗೇವಾಡಿ, ಚಡಚಣ, ದೇವರಹಿಪ್ಪರಗಿ, ಇಂಡಿ, ಕೊಲ್ಹಾರ, ಮುದ್ದೇಬಿಹಾಳ,ನಿಡಗುಂದಿ, ಸಿಂದಗಿ,ತಾಳಿಕೋಟೆ, ತಿಕೋಟ,ಆಲಮೇಲ ಹಾಗೂ ವಿಜಯಪುರ ತಾಲೂಕು ವ್ಯಾಪ್ತಿಯಲ್ಲಿರುವ ಅಂಚೆ ಸೇವೆಗಳಿಗೆ ಸಂಬಂಧಪಟ್ಟ ಸಲಹೆ, ಸೂಚನೆ ಮತ್ತು ದೂರುಗಳನ್ನು ಅಂಚೆ ಅದಾಲತ್‌ನಲ್ಲಿ ವಿಚಾರಣೆ ಎಂದು ಮೇಲ್ಬರಹ ಬರೆದು ಯಾವುದೇ ಅಂಚೆ ಕಚೇರಿಯಲ್ಲಿ ರವಾನೆಗೆ ಸಲ್ಲಿಸಬಹುದು.
ಇಂತಹ ಲಕೋಟೆಗೆ ಅಂಚೆ ವೆಚ್ಚ ಭರಿಸುವ ಅಗತ್ಯವಿರುವುದಿಲ್ಲ.ಇಂತಹ ದೂರು ಮತ್ತು ಸಲಹೆ ಸೂಚನೆಗಳನ್ನು ಅಂಚೆ ಅಧೀಕ್ಷಕರು, ವಿಜಯಪುರ ವಿಭಾಗ, ವಿಜಯಪುರ ಇವರ ಕಚೇರಿಗೆ ಸೆ.೧೫ ರೊಳಗಾಗಿ ತಲುಪುವಂತೆ ಕಳುಹಿಸತಕ್ಕದ್ದು. ಈ ವಿಭಾಗೀಯ ಅಂಚೆ ಅದಾಲತ್‌ನಲ್ಲಿ ಸಾಮಾನ್ಯ ಮಟ್ಟದ ಅಂದರೆ ಈ ವಿಭಾಗದ ಅಂಚೆ ಕಚೇರಿಗಳಿಂದ ಈಗ ಒದಗಿಸುತ್ತಿರುವ ಸೇವೆಗಳಲ್ಲಿ ಇರುವ ಕೊರತೆ ಮತ್ತು ಅವುಗಳ ಸುಧಾರಣಾ ಕ್ರಮಗಳ ಸಲಹೆ ಸೂಚನೆಗಳನ್ನಷ್ಟೇ ಚರ್ಚಿಸಲಾಗುವುದು.
ಇಲಾಖೆಯ ಕಾರ್ಯನೀತಿ ಧೋರಣೆಗಳ ಬಗ್ಗೆ ಸಲಹೆ ಸೂಚನೆಗಳನ್ನು ಈ ವಿಭಾಗೀಯ ಅಂಚೆ ಅದಾಲತ್ ನಲ್ಲಿ ಚರ್ಚಿಸಲಾಗುವುದಿಲ್ಲ. ಇಂತಹ ಕಾರ್ಯನೀತಿ ಧೋರಣೆಗಳ ಬಗ್ಗೆ ಸಲಹೆ ಸೂಚನೆಗಳನ್ನು ಬೇರೆ ಯಾವುದೇ ಸಮಯದಲ್ಲಿ ಬರೆದು ತಿಳಿಸಿದಲ್ಲಿ, ಸಂಬಂಧಪಟ್ಟ ಮೇಲಾಧಿಕಾರಿಗಳಿಗೆ ಕಳುಹಿಸಲಾಗುವುದು ಎಂದು ಅಂಚೆ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
