ಕಾವ್ಯರಶ್ಮಿ
-ಡಾ. ವೆಂಕಟಕೃಷ್ಣ ಕೆ.
ಭುವಿಯ ಶಕ್ತಿಗಳು ಗರ್ಭದಲಿ ಸಂಚಯಿಸಿ
ಅದರೊಳಗೆ ಸರ್ವ ಸದ್ಗುಣಗಳು ಮೇಳೈಸಿ
ರೂಪಿತ ಕುಸುಮವದು ಮನಸಾರೆ ಹಾರೈಸಿ
ಸಹನೆ ಜಾಣ್ಮೆಗಳೊಡನೆ ಆಸೀಮ ಬಲವಂತೆ
ದೃಢ ಮನಸಿನೊಡನೆ ಸಾಧಿಸುವ ಛಲವಂತೆ
ಭರವಸೆ ಭರಪೂರ ಧೈರ್ಯದ ಸಂಕೇತವಂತೆ
ಪ್ರಳಯಕ್ಕೂ ತಳಮಳಿಸದ ಅದಮ್ಯ ಮನೋಬಲ
ಬದುಕಲ್ಲಿ ಏಳುವ ಸುಳಿಗಾಳಿಮಳೆಯಲ್ಲೂ ಅಚಲ
ಸಂಸಾರ ಸಂಕಟಕೂ ಕೆಂಗೆಡದ ಅಖಂಡ ಆತ್ಮಬಲ
ಹೆಣ್ಣೆಂದರೆ ಸಾಮರ್ಥ್ಯ ಮುತ್ತು ಹವಳಗಳ ವಾರಿಧಿ
ಮನ ಮಾಡಿದರೆ ಸಾಧನೆಗಿಲ್ಲ ಯಾವುದೇ ಪರಿಧಿ
ಮಾನಿನಿಯು ಮೇದಿನಿಗೆ ದೇವರ ಅಮೂಲ್ಯ ನಿಧಿ ॥