ರಾಷ್ಟ್ರೀಯ ವೈದ್ಯರ ದಿನಾಚರಣೆಯಲ್ಲಿ ಐ.ಎಮ್.ಎ ಶಸ್ತ್ರಚಿಕಿತ್ಸಕಿ ಡಾ.ಸಂಧ್ಯಾ ಶಾಂತವೀರ ಮನಗೂಳಿ ಅಭಿಮತ
ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಸಮಾಜದ ಆರೋಗ್ಯ ಕಾಪಾಡುವಲ್ಲಿ ವೈದ್ಯರ ಸೇವೆ ಅಮೂಲ್ಯವಾಗಿದ್ದು, ಅವರ ತ್ಯಾಗ, ಸಮರ್ಪಣೆ ಮತ್ತು ಮಾನವೀಯ ಸೇವೆಯನ್ನು ಪ್ರತಿಯೊಬ್ಬರೂ ಗೌರವಿಸಬೇಕು ಎಂದು ಮಹಿಳಾ ಪ್ರತಿನಿಧಿ, ಐ.ಎಮ್.ಎ ಶಸ್ತ್ರಚಿಕಿತ್ಸಕರಾದ ಡಾ.ಸಂಧ್ಯಾ ಶಾಂತವೀರ ಮನಗೂಳಿ ಹೇಳಿದರು.
ಸಿಂದಗಿ ನಗರದ ತಾಲೂಕು ಶಿಕ್ಷಣ ಪ್ರಸಾರಕ ಮಂಡಳಿಯ ಶಾಂತವೀರ ಪಟ್ಟಾಧ್ಯಕ್ಷರ ಕನ್ಯಾ ಪ್ರೌಢಶಾಲೆ ಹಾಗೂ ಭಾರತೀಯ ವೈದ್ಯಕೀಯ ಸಂಘದ ಸಹಯೋಗದಲ್ಲಿ ಹಮ್ಮಿಕೊಂಡ ರಾಷ್ಟ್ರೀಯ ವೈದ್ಯರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಭಾರತದ ಖ್ಯಾತ ವೈದ್ಯರು ಹಾಗೂ ಪಶ್ಚಿಮ ಬಂಗಾಳದ ಮಾಜಿ ಸಿಎಂ ಡಾ.ಬಿಧಾನ್ ಚಂದ್ರರಾಯ್ ಅವರ ಜನ್ಮದಿನ ಹಾಗೂ ಪುಣ್ಯತಿಥಿಯ ಸ್ಮರಣಾರ್ಥ ರಾಷ್ಟ್ರೀಯ ವೈದ್ಯರ ದಿನವನ್ನು ಆಚರಿಸಲಾಗುತ್ತದೆ. ವೈದ್ಯಕೀಯ ಕ್ಷೇತ್ರಕ್ಕೆ ಅವರು ನೀಡಿದ ಅಮೂಲ್ಯ ಕೊಡುಗೆಯನ್ನು ಗೌರವಿಸುವ ಸಲುವಾಗಿ ಭಾರತ ಸರ್ಕಾರ ಈ ದಿನವನ್ನು ರಾಷ್ಟ್ರೀಯ ವೈದ್ಯರ ದಿನವಾಗಿ ಘೋಷಿಸಿದೆ. ರೋಗಿಗಳ ಜೀವ ಉಳಿಸುವಲ್ಲಿ ವೈದ್ಯರು ವಹಿಸುವ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಸಾಂಕ್ರಾಮಿಕ ರೋಗಗಳು, ತುರ್ತು ಪರಿಸ್ಥಿತಿಗಳು ಹಾಗೂ ಪ್ರಕೃತಿ ವಿಕೋಪಗಳಂತಹ ಸಂಕಷ್ಟದ ಸಮಯದಲ್ಲಿಯೂ ವೈದ್ಯರು ತಮ್ಮ ಜೀವದ ಹಂಗು ತೊರೆದು ಜನರ ಆರೋಗ್ಯ ಕಾಪಾಡಲು ಶ್ರಮಿಸುತ್ತಾರೆ. ಅವರ ಸೇವೆ ಸಮಾಜಕ್ಕೆ ಸದಾ ಆದರ್ಶಪ್ರಾಯವಾಗಿದೆ ಎಂದರು.
ಈ ವೇಳೆ ಭಾರತೀಯ ವೈದ್ಯಕೀಯ ಸಂಘದ ಕಾರ್ಯಕಾರಿ ಸದಸ್ಯೆ ಡಾ.ಶಾರದಾ ನಾಡಗೌಡ ಮಾತನಾಡಿ, ಸಮಾಜದ ಆರೋಗ್ಯ ರಕ್ಷಣೆ ಮತ್ತು ಜೀವ ಉಳಿಸುವ ಮಹತ್ತರ ಜವಾಬ್ದಾರಿಯನ್ನು ಹೊತ್ತಿರುವ ವೈದ್ಯರು ಹಗಲು-ರಾತ್ರಿ ಎನ್ನದೆ ಸೇವೆ ಸಲ್ಲಿಸುತ್ತಿದ್ದಾರೆ. ತುರ್ತು ಪರಿಸ್ಥಿತಿಗಳು, ಸಾಂಕ್ರಾಮಿಕ ರೋಗಗಳು ಹಾಗೂ ಪ್ರಕೃತಿ ವಿಕೋಪಗಳ ಸಂದರ್ಭದಲ್ಲಿಯೂ ವೈದ್ಯರು ತಮ್ಮ ಕರ್ತವ್ಯವನ್ನು ನಿಷ್ಠೆಯಿಂದ ನಿರ್ವಹಿಸಿ ಜನರ ಆರೋಗ್ಯ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ ಎಂದರು.
ಇದೇ ಸಂದರ್ಭದಲ್ಲಿ ಶಾಲೆಯ ಮುಖ್ಯೋಪಾಧ್ಯಾಯ ಎಸ್.ಆರ್.ನಾಯಕ ಮಾತನಾಡಿದರು.
ಇದೇ ಸಂದರ್ಭದಲ್ಲಿ ಭಾರತೀಯ ವೈದ್ಯಕೀಯ ಸಂಘದ ಕಾರ್ಯದರ್ಶಿ ಡಾ.ಸಂಗಮೇಶ ಪಾಟೀಲ ಶಿಕ್ಷಕರಾದ ಆರ್.ವೈ.ಪರಿಟ್, ಎಸ್.ಎಸ್.ಹತ್ತಿ ಎಸ್.ವಿ.ಮಿರ್ಚಿಕರ್ ದಾನಮ್ಮ ಗಣಾಚಾರಿ, ಸಾಗರ ರಾಥೋಡ, ಸುನೀಲ ನಾಗಾವಿ, ರಾಜು ಎಮ್ಮಿ ಸೇರಿದಂತೆ ಶಾಲೆಯ ಬೋಧಕ-ಬೋಧಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಇದ್ದರು.

