ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ತಾಲ್ಲೂಕು ಆಡಳಿತದಿಂದ ವಚನ ಪಿತಾಮಹ ಫ.ಗು.ಹಳಕಟ್ಟಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಜಯಂತಿ ಹಾಗೂ ವಚನ ಸಂರಕ್ಷಣಾ ದಿನ ಆಚರಿಸಲಾಯಿತು.
ಪಟ್ಟಣದ ತಹಶೀಲ್ದಾರ ಕಾರ್ಯಾಲಯದಲ್ಲಿ ಗುರುವಾರ ಫ.ಗು.ಹಳಕಟ್ಟಿ ಅವರ ಜನ್ಮದಿನವನ್ನು ವಚನ ಸಾಹಿತ್ಯ ಸಂರಕ್ಷಣಾ ದಿನವನ್ನಾಗಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ತಹಶೀಲ್ದಾರ ನಿಂಗಣ್ಣ ಬಿರಾದಾರ ಅಧ್ಯಕ್ಷತೆ ವಹಿಸಿ, ಪೂಜಾ ಕಾರ್ಯಕ್ರಮ ನೆರವೇರಿಸುವುದರ ಮೂಲಕ ಮಾತನಾಡಿ, ಬಸವಾದಿ ಶರಣರ ವಚನಗಳ ಸಂರಕ್ಷಣೆ ಮಾಡಿ, ಬೇರೆ ಬೇರೆ ಭಾಷೆಗಳಿಗೆ ಅನುವಾದಿಸುವುದರ ಮೂಲಕ ಜನಸಾಮಾನ್ಯರಿಗೆ ತಲುಪಿಸುವ ನಿಟ್ಟಿನಲ್ಲಿ ಫ.ಗು.ಹಳಕಟ್ಟಿಯವರ ಕಾರ್ಯ ತುಂಬಾ ಶ್ಲಾಘನೀಯ. ವಚನಗಳ ಮುದ್ರಣಕ್ಕಾಗಿ ತಮ್ಮ ಸ್ವಂತ ಮನೆಯನ್ನೇ ಮಾರಿದ ಹಳಕಟ್ಟಿಯವರ ಸ್ಮರಣೆಗಾಗಿ ವಚನ ಸಂರಕ್ಷಣಾ ದಿನ ಆಚರಿಸುತ್ತಿರುವುದು ಅಭಿನಂದನೀಯ ಸಂಗತಿ ಎಂದರು.
ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಮಾಜಿಅಧ್ಯಕ್ಷ ಜಿ.ಪಿ.ಬಿರಾದಾರ ಮಾತನಾಡಿ, ಪತ್ರಿಕಾ ಸಂಪಾದಕರಾಗಿದ್ದು, ೧೯೨೬ ರಲ್ಲಿ ಬಳ್ಳಾರಿಯಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದ ಹಳಕಟ್ಟಿಯವರ ಬಾಲ್ಯಜೀವನ, ಅವರ ವಚನ ಸಂಗ್ರಹಕ್ಕೆ ಪ್ರೇರಣೆ, ಪಟ್ಟ ಕಷ್ಟ ಹಾಗೂ ಅಂದಿನ ರಾಜ್ಯಪಾಲರಾಗಿದ್ದ ಜಯಚಾಮರಾಜೇಂದ್ರ ಒಡೆಯರ್ ಅವರು ಹಳಕಟ್ಟಿ ಅವರ ಭೇಟಿಗೆ ಬಂದದನ್ನು ಸ್ಮರಿಸಿ, ಬಂಥನಾಳದ ಸಂಗನಬಸವಶ್ರೀಗಳೊಂದಿಗೆ ಬಿಎಲ್‌ಡಿಇ ಸಂಸ್ಥೆಯನ್ನು ಕಟ್ಟುವಲ್ಲಿ ಮುಖ್ಯ ಪಾತ್ರ ವಹಿಸಿದ್ದರು ಎಂದರು.
ಶಿರಸ್ತೇದಾರ ಡಿ.ಎಸ್.ಭೋವಿ, ಮಲ್ಲಿಕಾರ್ಜುನ ಕೋರಿ, ರಾಜು ಕಂಠಿ, ಸಂತೋಷ ತಳವಾರ, ಕುಮಾರ ಅವರಾದಿ, ಚನ್ನಬಸು ಹೊಸಮನಿ, ಆಕಾಶ ಮೇತ್ರಿ, ವೈ.ಜಿ.ಗಂಗಶೆಟ್ಟಿ, ಶಿಲ್ಪಾ ಶಿಲ್ಪಿ ಸೇರಿದಂತೆ ಸಿಬ್ಬಂದಿ ಇದ್ದರು.

