ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಅವಧಿ ಪೂರ್ಣಗೊಂಡ ಜಿಲ್ಲೆಯ ಎಲ್ಲ ಗ್ರಾಮ ಪಂಚಾಯತಿಗಳಿಗೆ ಗ್ರಾಮ ಪಂಚಾಯತಿಗಳ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಚುನಾವಣಾ ಕ್ಷೇತ್ರಕ್ಕೆ ವಿವಿಧ ವರ್ಗಗಳ ಸ್ಥಾನಗಳನ್ನು ಮೀಸಲಿರಿಸಿ ಸರ್ಕಾರ ಅಧಿಸೂಚನೆ ಹೊರಡಿಸಿದೆ.
ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ ೧೯೯೩ರ ಪ್ರಕರಣ ೫ ರಂತೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಅಧೀನಕ್ಕೆ ಒಳಪಡುವ ಪ್ರದೇಶಗಳನ್ನು ಪ್ರಾದೇಶಿಕ ಚುನಾವಣಾ ಕ್ಷೇತ್ರಗಳಾಗಿ ವಿಭಜಿಸಿ, ಕೋಷ್ಟಕ-೧ ಮತ್ತು ಕೋಷ್ಟಕ-೨ರಲ್ಲಿ ಪ್ರಾದೇಶಿಕ ಚುನಾವಣಾ ಕ್ಷೇತ್ರಕ್ಕೆ ವಿವಿಧ ವರ್ಗಗಳ ಸ್ಥಾನಗಳನ್ನು ಮೀಸಲು ನಿಗದಿಪಡಿಸಿದ್ದನ್ನು ರಾಜ್ಯ ಪತ್ರದಲ್ಲಿ ಪ್ರಕಟಿಸಿದೆ.
ಈ ವಿಷಯವನ್ನು ಸಂಬಂಧಿಸಿದ ತಾಲೂಕುಗಳ ತಹಶೀಲದಾರ ಕಚೇರಿ, ತಾಲೂಕು, ಗ್ರಾಮ ಪಂಚಾಯತಿಗಳಲ್ಲಿ ಪ್ರಕಟಿಸಲಾಗಿದೆ ಎಂದು ಅಪರ ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.
