ಕಾವ್ಯರಶ್ಮಿ
- ವಿಮಲಾ ಸುಧೀಂದ್ರ
ತಿಂಗಳ ಸಂಬಳವಿಲ್ಲದ ನಿರಂತರ…ದುಡಿತ
ಬಯಸುತ ಮನದಿ ಮನೆಯವರೆಲ್ಲರ ಹಿತ
ತನ್ನ ತನುಮನವನು ಅನವರತ ದಂಡಿಸುತ
ಇರುತ್ತಾಳೀಕೆ ಗೃಹಿಣಿ ಗೃಹಮುಚ್ಯತೆ ಎನುತ
ಇವಳಿಲ್ಲದಿರೆ ಮನೆಗಿಲ್ಲ ಶೋಭೆ ಎನ್ನುವರು
ಇವಳಿದ್ದರೆ ಮಾತ್ರ ನಿರಾಳತೆ ಹೊಂದುವರು
ಆದರೂ ಅಲ್ಪ ಪ್ರೀತಿಯವಳಿಗೆ ತೋರಿಸರು
ದುಡಿಯುವ ತಾನೇ ಮೇಲೆಂದು ಹೇಳುವರು
ಗೃಹಿಣಿಗೂ ಮನವುಂಟು…ಆಸೆಯುಂಟು
ಹೇಳಬೇಕೆನ್ನುವ ಹಲವು ಕನಸುಗಳುಂಟು
ಹೇಳಿದರೆ ನಗುವರೆಂಬ ಭಯವೂ ಉಂಟು
ಸಿಗದ ಗಗನಕುಸುಮವಿದೆಂಬ ಅರಿವುಂಟು
ತಂದಿತ್ತರೆ ಈ ಗಗನಕುಸುಮವನು ಅವಳಿಗೆ
ನೋಡಿಯಾಗ ಲಕ್ಷ್ಮೀ ಬರುವವಳು ನಿನ್ನೆಡೆಗೆ
ಸಂಸಾರವಾಗುವುದು ಸುಖದಸಾಗರ ನಿನಗೆ
ಭುವಿಯೇ ಸ್ವರ್ಗದಂತೆ ಎನಿಸುವುದು ಕೊನೆಗೆ