ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಅಖಿಲ ಕರ್ನಾಟಕ ಬೆಳೆ ಸಮೀಕ್ಷೆದಾರರ ಸಂಘಟನೆಯ ತಿಕೋಟಾ ತಾಲೂಕಾ ಘಟಕದ ಪದಾಧಿಕಾರಿಗಳು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರು ಹಾಗೂ ತಿಕೋಟಾ ತಾಲೂಕಿನ ತಹಶೀಲ್ದಾರ್ ಮುಖಾಂತರ ಮುಖ್ಯಮಂತ್ರಿ ಸಿದ್ಧರಾಮಯ್ಯ ಇವರಿಗೆ ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಪದಾಧಿಕಾರಿಗಳು, ಸುಮಾರು ೮-೧೦ ವರ್ಷಗಳಿಂದ ತಿಕೋಟಾ ತಾಲೂಕಿನಲ್ಲಿ ೫೬ ಜನ ಬೆಳೆ ಸಮೀಕ್ಷೆದಾರರಾಗಿ ಕೆಲಸ ಮಾಡುತ್ತಾ ಬಂದಿರುವ ನಮಗೆ ಹಂಗಾಮುವಾರು ನಮ್ಮನ್ನು ಕೆಲಸಕ್ಕೆ ನೇಮಕ ಮಾಡಿಕೊಳ್ಳದೇನೆ ಕನಿಷ್ಠ ವೇತನದ ನೀತಿ ಅಡಿಯಲ್ಲಿ ದಿನಗೂಲಿ ಕಾರ್ಮಿಕರನ್ನಾಗಿ ನೇಮಿಸಿಕೊಂಡು ವರ್ಷದ ೧೨ ತಿಂಗಳುಗಳ ಕಾಲ ಕೆಲಸವನ್ನು ನೀಡುವಂತೆ ಆಗ್ರಹಿಸಲಾಯಿತು.
ಈ ವೇಳೆ ತಾಲೂಕಾ ಅಧ್ಯಕ್ಷರಾದ ಭಾಗೇಶ ಮಲಕಪ್ಪ ರಾಮತೀರ್ಥ ಅವರು ಮನವಿ ಪತ್ರವನ್ನು ಸಲ್ಲಿಸಿದರು.
ವಿಶೇಷ ಅತಿಥಿಯಾಗಿ ಆಗಮಿಸಿದ ಸಂಘಟನೆಯ ರಾಜ್ಯ ಅಧ್ಯಕ್ಷ ಭೀಮಪ್ಪ ಲಕ್ಷ್ಮಣ ತಳವಾರ ಅವರು ಕೃಷಿ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳ ಜೊತೆ ಮಾತನಾಡಿ, ಕರ್ನಾಟಕ ರಾಜ್ಯದಲ್ಲಿ ಬೆಳೆ ಸಮೀಕ್ಷೆದಾರರಾದ ನಾವು ೨೩,೭೨೦ ಜನ ಕೆಲಸಗಾರರು ಕಾರ್ಯ ನಿರ್ವಹಿಸುತ್ತಿದ್ದೇವೆ. ನಮ್ಮ ಕೆಲಸಕ್ಕೆ ಸರ್ಕಾರ ನೀಡುವ ಸಂಬಳ ಯಾವ ವಿಧದಲ್ಲೂ ಸರಿಯಾದುದಲ್ಲ, ಯಾಕೆಂದರೆ ದರ ಪರಿಷ್ಕರಣೆ ಅನ್ನೋದು ಎಲ್ಲದರಲ್ಲೂ ಮಾಡಿರುವಿರಿ , ಆದರೆ ನಮಗೇಕೆ ಮಲತಾಯಿ ಧೋರಣೆ ಮಾಡುತ್ತಿರುವಿರಿ ಎಂದು ಮಾತನಾಡಿದರು.
ಮನವಿಯನ್ನು ಸ್ವೀಕರಿಸಿದ ಕೃಷಿ ಅಧಿಕಾರಿಗಳು ಧನಾತ್ಮಕವಾಗಿ ಸಹಕರಿಸಿದರು.
ಈ ಸಂದರ್ಭದಲ್ಲಿ ಅರುಣಕುಮಾರ ತಳವಾರ, ಬಂದೇ ನವಾಜ್ ಮುಲ್ಲಾ, ಚಂದನ ಕೋಳಿ, ನಾಗರಾಜ್ ಕೋರೆ,ಶಬ್ಬೀರ್ ಅತ್ತಾರ ಮತ್ತಿತರರು ಉಪಸ್ಥಿತರಿದ್ದರು.

