ಜುಲೈ ತಿಂಗಳಿನಿಂದ ನರೇಗಾ ಬದಲಾಗಿ ವ್ಹಿಬಿ-ಜಿ ರಾಮ್ ಜಿ ಯೋಜನೆ ಅನುಷ್ಠಾನ
ಉದಯರಶ್ಮಿ ದಿನಪತ್ರಿಕೆ
ವರದಿ: ಬಸವರಾಜ ನಂದಿಹಾಳ
ಬಸವನಬಾಗೇವಾಡಿ: ವಿಕಸಿತ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಮತ್ತು ಅಜೀವಿಕಾ ಮಿಷನ್ (ಗ್ರಾಮೀಣ) ಕಾಯ್ದೆ 2025 ವೇತನ ಉದ್ಯೋಗವನ್ನು ಸುಸ್ಥಿರ ಅಭಿವೃದ್ಧಿ ವಿಕಸಿತ ಭಾರತ್ @2047 ರ ದೃಷ್ಟಿಕೋನದೊಂದಿಗೆ ಜೋಡಿಸುವ ಮೂಲಕ ಗ್ರಾಮೀಣ ಉದ್ಯೋಗ ಚೌಕಟ್ಟನ್ನು ಪರಿವರ್ತಿಸಲು ಪ್ರಯತ್ನಿಸಲು ಕೇಂದ್ರ ಸರ್ಕಾರ ಮುಂದಾಗಿದೆ.
ಈ ಕಾಯ್ದೆಯು ಎಲ್ಲಾ ಗ್ರಾಮೀಣ ಕುಟುಂಬಗಳಿಗೆ ಪ್ರತಿ ಹಣಕಾಸು ವರ್ಷದಲ್ಲಿ ಶಾಸನಬದ್ಧ ಉದ್ಯೋಗ ಖಾತರಿಯನ್ನು 100 ರಿಂದ 125 ದಿನಗಳಿಗೆ ಹೆಚ್ಚಿಸುತ್ತದೆ. ಫಲಿತಾಂಶ-ಆಧಾರಿತ ಕೆಲಸಗಳು ಮತ್ತು ಡಿಜಿಟಲ್ ಸಂಯೋಜಿತ ಯೋಜನೆಯ ಮೂಲಕ ನೀರಿನ ಸುರಕ್ಷತೆ, ಗ್ರಾಮೀಣ ಮೂಲಸೌಕರ್ಯ, ಜೀವನೋಪಾಯ ಸ್ವತ್ತುಗಳು ಮತ್ತು ವಿಪತ್ತು ಸಿದ್ಧತೆಗೆ ಚೌಕಟ್ಟು ಆದ್ಯತೆ ನೀಡುತ್ತದೆ. ಬಯೋಮೆಟ್ರಿಕ್ ದೃಢೀಕರಣ, ಜಿಯೋ-ರೆಫರೆನ್ಸಿಂಗ್, ಡಿಜಿಟಲ್ ಮೇಲ್ವಿಚಾರಣೆ ಮತ್ತು ಸಮಯಕ್ಕೆ ಅನುಗುಣವಾಗಿ ವೇತನ ಪಾವತಿಗಳ ಮೂಲಕ ತಂತ್ರಜ್ಞಾನ-ಸಕ್ರಿಯಗೊಳಿಸಿದ ಆಡಳಿತವು ಪಾರದರ್ಶಕತೆ ಮತ್ತು ಹೊಣೆಗಾರಿಕೆಯನ್ನು ಬಲಪಡಿಸುವ ಗುರಿಯನ್ನು ಹೊಂದಿದೆ. ಕಡ್ಡಾಯ ಸಾಮಾಜಿಕ ಲೆಕ್ಕಪರಿಶೋಧನೆಗಳು, ರಚನಾತ್ಮಕ ಮೇಲ್ವಿಚಾರಣಾ ಕಾರ್ಯವಿಧಾನಗಳು ಮತ್ತು ಕುಂದುಕೊರತೆ ಪರಿಹಾರ ವ್ಯವಸ್ಥೆಗಳು ಅನುಷ್ಠಾನವನ್ನು ಮತ್ತಷ್ಟು ಬಲಪಡಿಸುತ್ತವೆ. ಈ ಕಾಯ್ದೆಯು ಗ್ರಾಮೀಣ ಉದ್ಯೋಗವನ್ನು ಸುಸ್ಥಿರ ಗ್ರಾಮ ಅಭಿವೃದ್ಧಿ ಮತ್ತು ಬಾಳಿಕೆ ಬರುವ ಆಸ್ತಿ ಸೃಷ್ಟಿಯ ಉತ್ಪಾದಕ ಚಾಲಕನಾಗಿ ಇರಿಸುತ್ತದೆ.
ವ್ಹಿಬಿ-ಜಿ ರಾಮ್ ಜೀ ಜುಲೈ ತಿಂಗಳಲ್ಲಿ ಕಾಯ್ದೆ ಜಾರಿಗೆ ಬರುವುದರೊಂದಿಗೆ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ (MGNREGA) 2005 ರದ್ದುಗೊಳ್ಳಲಿದೆ.
ಹೊಸ ಕಾಯ್ದೆಯು ಪ್ರತಿ ಹಣಕಾಸು ವರ್ಷದಲ್ಲಿ 125 ದಿನಗಳ ಕೂಲಿ ಉದ್ಯೋಗದ ಶಾಸನಬದ್ಧ ಖಾತರಿಯನ್ನು ಸ್ಥಾಪಿಸುತ್ತದೆ. ಅಲ್ಲಿ ವಯಸ್ಕ ಸದಸ್ಯರು ಕೌಶಲ್ಯರಹಿತ ದೈಹಿಕ ಕೆಲಸವನ್ನು ಕೈಗೊಳ್ಳಲು ಸ್ವಯಂಸೇವಕರಾಗುತ್ತಾರೆ. ಈ ವರ್ಧಿತ ಖಾತರಿಯು ಗ್ರಾಮೀಣ ಮನೆಯ ಆದಾಯ, ಜೀವನೋಪಾಯ ಭದ್ರತೆ, ಗ್ರಾಮ ಮಟ್ಟದ ಮೂಲಸೌಕರ್ಯ ಸೃಷ್ಟಿ ಮತ್ತು ಸುಸ್ಥಿರ ಗ್ರಾಮೀಣ ಅಭಿವೃದ್ಧಿಗೆ ಹೊಸ ಆವೇಗವನ್ನು ನೀಡುತ್ತದೆ ಎಂದು ನಿರೀಕ್ಷಿಸಲಾಗಿದೆ. ಅದೇ ಸಮಯದಲ್ಲಿ, ನೀರಿನ ಸುರಕ್ಷತೆ, ಗ್ರಾಮೀಣ ಮೂಲಸೌಕರ್ಯ, ಗ್ರಾಮೀಣ ಜೀವನೋಪಾಯ, ಸ್ಥಳೀಯ ಆರ್ಥಿಕ ಬೆಳವಣಿಗೆ ಮತ್ತು ಹವಾಮಾನ ಸಂಬಂಧಿತ ಸವಾಲುಗಳ ವಿರುದ್ಧ ಸ್ಥಿತಿಸ್ಥಾಪಕತ್ವವನ್ನು ಬಲಪಡಿಸುವ ಬಾಳಿಕೆ ಬರುವ ಮತ್ತು ಉತ್ಪಾದಕ ಗ್ರಾಮೀಣ ಮೂಲಸೌಕರ್ಯವನ್ನು ರಚಿಸಲು ಇದು ಪ್ರಯತ್ನಿಸುತ್ತದೆ.
ಎಲ್ಲಾ ಗ್ರಾಮೀಣ ಕುಟುಂಬಗಳಿಗೆ ಪ್ರತಿ ಹಣಕಾಸು ವರ್ಷದಲ್ಲಿ 100 ದಿನಗಳಿಂದ 125 ದಿನಗಳಿಗೆ ಶಾಸನಬದ್ಧ ಉದ್ಯೋಗ ಖಾತರಿಯನ್ನು ಹೆಚ್ಚಿಸುವುದು. ಜೀವನೋಪಾಯ ಭದ್ರತೆಯನ್ನು ಬಲಪಡಿಸುವುದು, ಆದಾಯ ಸ್ಥಿರತೆಯನ್ನು ಸುಧಾರಿಸುವುದು, ಗ್ರಾಮೀಣ ಬಳಕೆಯನ್ನು ಬೆಂಬಲಿಸುವುದು ಮತ್ತು ದುರ್ಬಲ ಕುಟುಂಬಗಳಿಗೆ ಹೆಚ್ಚಿನ ಆರ್ಥಿಕ ಸ್ಥಿತಿಸ್ಥಾಪಕತ್ವವನ್ನು ಒದಗಿಸುವ ಉದ್ದೇಶವನ್ನು ವರ್ಧಿತ ಖಾತರಿ ಹೊಂದಿದೆ. ಹೊಸ ಯೋಜನೆಯಡಿ ಒಟ್ಟು 318 ವಿವಿಧ ಕಾಮಗಾರಿಗಳನ್ನು ಕೈಗೊಳ್ಳಬಹುದಾಗಿದೆ.
ತಾಲೂಕಿನ 15 ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಈಗಾಗಲೇ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಗ್ರಾಮೀಣ ಜನರಿಗೆ ಉದ್ಯೋಗವನ್ನು ಕಲ್ಪಿಸಿಕೊಡುವುದರ ಮೂಲಕ ಗ್ರಾಮಗಳ ಆಸ್ತಿಗಳನ್ನು ಸೃಜನೆಮಾಡಿದೆ.
ರೈತರಿಗೆ ಅನುಕೂಲವಾಗುವ ಕೃಷಿಹೊಂಡ, ಬದುನಿರ್ಮಾಣ, ಕುರಿ ಶೆಡ್ಡು, ಜಾನುವಾರು ಶೆಡ್ಡು, ಇಂಗು ಬಚ್ಚಲು ಗುಂಡಿ ಸೇರಿದಂತೆ ಅನೇಕ ಕಾಮಗಾರಿಗಳನ್ನು ಗ್ರಾಮ ಪಂಚಾಯತಿ ಹಂತದಲ್ಲಿ ನೀಡಲಾಗಿದೆ. ಇದರ ಜೊತೆಗೆ ತೋಟಗಾರಿಕೆ ಇಲಾಖೆಯಿಂದ ಬಾಳೆ, ನಿಂಬೆ, ಪಪ್ಪಾಯ, ವೀಳ್ಯದೆಲೆ, ದ್ರಾಕ್ಷಿ, ಪೆರು ಅನೇಕ ರೀತಿಯ ತೋಟಗಾರಿಕೆ ಬೆಳೆಗಳನ್ನು ಬೆಳೆಯಲು ಸಹಾಯಧನ ಒದಗಿಸುತ್ತಿದೆ. ರೇಷ್ಮೆ ಇಲಾಖೆ ವತಿಯಿಂದ ಹಿಪ್ಪೆ ನೇರಳೆ ನಾಟಿ ಮಾಡಲು ಸಹಾಯಧನವನ್ನು ಒದಗಿಸುತ್ತದೆ. ಕೃಷಿ ಇಲಾಖೆಯಿಂದ ಬದು ನಿರ್ಮಾಣ ಹಾಗೂ ಕೃಷಿ ಹೊಂಡಗಳನ್ನು ನರೇಗಾ ಯೋಜನೆಯಲ್ಲಿ ವೈಯಕ್ತಿಕವಾಗಿ ವಿವಿಧ ಇಲಾಖೆಯಿಂದ ಸಹಾಯಧನವನ್ನು ಒದಗಿಸಿ ರೈತರ ಅಭಿವೃದ್ಧಿ ಕಾಮಗಾರಿಗಳನ್ನು ಹಮ್ಮಿಕೊಳ್ಳಲಾಗಿದೆ. ನರೇಗಾ ಯೋಜನೆಯಡಿ ಸಮುದಾಯ ಕಾಮಗಾರಿಗಳಾದ ಶಾಲಾ ಅಭಿವೃದ್ಧಿ ಕಾಮಗಾರಿಗಳು, ತೆರೆದ ಬಾವಿ, ಬಾಂದರ ಹೂಳೆತ್ತುವುದು, ಮಲ್ಟಿ ಅರ್ಕ ಚೆಕ್ ಡ್ಯಾಮ್, ಗೋಡಾವನ, ಕಸ ವಿಲೇವಾರಿ ಘಟಕ, ಗ್ರಾಮ ಪಂಚಾಯತ ಕಟ್ಟಡ, ಎನ್.ಆರ್.ಎಲ್.ಎಂ ಶೆಡ್ಡು, ಅಂಗನವಾಡಿ ಕೇಂದ್ರಗಳು, ಬೂದು ನಿರ್ವಹಣಾ ಘಟಕಗಳು, ನೆಡುತೋಪು ಕಾಮಗಾರಿಗಳು, ನಮ್ಮ ಹೊಲ ನಮ್ಮ ದಾರಿ ಯೋಜನೆ ಅಡಿಯಲ್ಲಿ ರಸ್ತೆಗಳ ಸುಧಾರಣೆ, ಚರಂಡಿಗಳ ನಿರ್ಮಾಣ ಹಾಗೂ ಇನ್ನಿತರ ಸಮುದಾಯ ಕಾಮಗಾರಿಗಳನ್ನು ನರೇಗಾ ಯೋಜನೆ ಅಡಿಯಲ್ಲಿ ಸಹಾಯಧನವನ್ನು ಒದಗಿಸುವುದರ ಮೂಲಕ ಸಮುದಾಯ ಸಂಪನ್ಮೂಲಗಳನ್ನು ಬಳಸಿಕೊಂಡು ಸಮುದಾಯ ಆಸ್ತಿಗಳನ್ನು ಸೃಜನೆ ಮಾಡಲಾಗಿದೆ.
ತಾಲೂಕಿನಲ್ಲಿ 2025- 26 ನೇ ಸಾಲಿನಲ್ಲಿ 1 ಲಕ್ಷ 59 ಸಾವಿರ ಮಾನವ ದಿನಗಳನ್ನು ಸೃಜಸಲು ಗುರಿ ಹೊಂದಲಾಗಿತ್ತು. ಇದರಲ್ಲಿ 92,580 ಮಾನವ ದಿನಗಳನ್ನು ಸೃಜನೆಮಾಡಿ ಶೇ 58.16 ಸಾಧನೆಯನ್ನು ಮಾಡಲಾಗಿದೆ. ಮಾನವ ದಿನಗಳ ಸೃಜನೆಯಲ್ಲಿ ದಿಂಡವಾರ ಗ್ರಾಮ ಪಂಚಾಯಿತಿ ಶೇ.107.49, ನರಸಲಗಿ ಗ್ರಾಮ ಪಂಚಾಯಿತಿ ಶೇ. 107.34 ಅತಿಹೆಚ್ಚು ಮಾನವ ಸೃಜನೆ ಮಾಡುವ ಮೂಲಕ ತಾಲೂಕಿನಲ್ಲಿ ಸಾಧನೆ ಮಾಡಿವೆ. ತಾಲೂಕಿನಲ್ಲಿ ಒಟ್ಟು ಮಾನವ ದಿನಗಳ ಸೃಜನೆಯಲ್ಲಿ ಶೇ 56.36 ರಷ್ಟು ಮಹಿಳಾ ಕೂಲಿಕಾರರಿಗೆ ನರೇಗಾ ಯೋಜನೆಯಡಿಯಲ್ಲಿ ಕೆಲಸವನ್ನು ಒದಗಿಸಲಾಗಿದೆ
2026-27 ನೇ ಸಾಲಿನಲ್ಲಿ ಪ್ರಸ್ತುತ ತಿಂಗಳ 40,752 ಮಾನವ ದಿನಗಳ ಗುರಿಯನ್ನು ನೀಡಲಾಗಿತ್ತು. ಪ್ರಸ್ತುತ 4154 ಮಾನವ ದಿನಗಳನ್ನು ಸೃಜಿಸಲಾಗಿದೆ. ತಾಲೂಕಿನ ಒಟ್ಟು 15 ಗ್ರಾಮ ಪಂಚಾಯ್ತಿಯಲ್ಲಿ 32,924 ಕೂಲಿಕಾರರು ಜಾಬ ಕಾರ್ಡ್ ಅನ್ನು ಹೊಂದಿದ್ದಾರೆ. ಅದರಲ್ಲಿ 23,051 ಜನ ಜಾಬ ಕಾರ್ಡ್ ನೊಂದಿಗೆ ಆಧಾರ ಜೋಡಣೆ ಮಾಡಿಕೊಂಡು ಇದರಲ್ಲಿ 18,552 ಜನ ಜಾಬ ಕಾರ್ಡ್ ಗೆ ಇಕೆವೈಸಿ ಮಾಡಿಕೊಂಡಿದ್ದಾರೆ. ಶೇ. 80.26ರಷ್ಟು ಪ್ರಗತಿ ಸಾಧಿಸಿದೆ. ಉಳಿದ 4,499 ಜನರ ಇಕೆವೈಸಿಯನ್ನು ಮಾಡಲು ನಿರಂತರವಾಗಿ ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ಕಾರ್ಯ ಮಾಡಲಾಗುತ್ತಿದೆ. ಪ್ರಸ್ತುತ ತಾಲೂಕಿನ ವ್ಯಾಪ್ತಿಯಲ್ಲಿ ಇಂದು ಮಂಗಳವಾರ 1387 ಕೂಲಿಕಾರರು ನರೇಗಾ ಯೋಜನೆಯಡಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು ಎಂದು ತಾಲೂಕು ಪಂಚಾಯಿತಿಯ ಮೂಲ ತಿಳಿಸಿದೆ.
“ಮಹಾತ್ಮಗಾಂಧೀಜಿ ಗ್ರಾಮೀಣ ಉದ್ಯೋಗ ಯೋಜನೆಯನ್ನು ಕೇಂದ್ರ ಸರ್ಕಾರವು ವಿಕಸಿತ ಭಾರತ ಜಿ ರಾಮ್ ಜಿ ಎಂಬುವದಾಗಿ ಬದಲಾವಣೆ ಮಾಡಿದೆ. ಇದು ಜುಲೈ ತಿಂಗಳಲ್ಲಿ ಜಾರಿಗೆ ಬರಲಿದೆ. ಇದೀಗ ಹಳೆಯ ಹೆಸರಿನಲ್ಲಿಯೇ ಯೋಜನೆಯಡಿ ಕಾಮಗಾರಿ ನಡೆಸಲಾಗುತ್ತಿದೆ. ಜನರ ಕೆಲಸದ ಬೇಡಿಕೆಯಂತೆ ಕೆಲಸ ನೀಡಲಾಗುತ್ತಿದೆ. ಬೇಸಿಗೆ ಕಾಲದಲ್ಲಿ ಬೇರೆಡೆ ಗೂಳೆ ಹೋಗದೆ ಈ ಯೋಜನೆಯಡಿ ಜನರು ಉದ್ಯೋಗ ಮಾಡಬೇಕು.”
– ವೆಂಕಟೇಶ ವಂದಾಲ
ಕಾರ್ಯನಿರ್ವಾಹಕ ಅಧಿಕಾರಿ, ತಾಪಂ, ಬಸವನಬಾಗೇವಾಡಿ.

