ಉದಯರಶ್ಮಿ ದಿನಪತ್ರಿಕೆ
ಕೊಲ್ಹಾರ: ಅಹಿತಕರ ಘಟನೆಗಳಿಗೆ ಆಸ್ಪದ ನೀಡದಂತೆ ಸರ್ವರೂ ಶಾಂತಿ ಹಾಗೂ ಸೌಹಾರ್ದತೆಯಿಂದ ಬಕ್ರಿದ್ ಹಬ್ಬವನ್ನು ಆಚರಿಸಬೇಕು ಎಂದು ಡಿವೈಎಸ್ಪಿ ಚಂದ್ರಕಾಂತ ನಂದರೆಡ್ಡಿ ಹೇಳಿದರು.
ಪಟ್ಟಣದ ಪೊಲೀಸ್ ಠಾಣೆಯಲ್ಲಿ ಬಕ್ರಿದ್ ಹಬ್ಬದ ಪ್ರಯುಕ್ತ ಹಮ್ಮಿಕೊಂಡಿದ್ದ ಶಾಂತಿ ಸಭೆಯ ನೇತೃತ್ವ ವಹಿಸಿ ಅವರು ಮಾತನಾಡಿದರು.
ಯುವ ಸಮುದಾಯ ಸಾಮಾಜಿಕ ಜಾಲತಾಣಗಳ ಬಳಕೆಯಲ್ಲಿ ಜಾಗರೂಕರಾಗಿರಬೇಕು. ಅನಗತ್ಯವಾಗಿ ಬಕ್ರಿದ್ ಹಬ್ಬಕ್ಕೆ ಸಂಬಂಧಿಸಿದ ಫೋಟೋ ಹಾಗೂ ವಿಡಿಯೋಗಳನ್ನು ಹಂಚಿಕೊಂಡು ಶಾಂತಿ ಕದಡುವ ಕೆಲಸಕ್ಕೆ ಕೈ ಹಾಕಬಾರದು ಎಂದು ಎಚ್ಚರಿಸಿದರು. ಹಬ್ಬ-ಹರಿದಿನಗಳನ್ನು ಅಚ್ಚುಕಟ್ಟಾಗಿ ಆಚರಿಸುವಲ್ಲಿ ಹಿರಿಯರ ಪಾತ್ರ ಮಹತ್ವದ್ದಾಗಿದ್ದು, ಯುವ ಸಮುದಾಯಕ್ಕೆ ಮಾರ್ಗದರ್ಶನ ನೀಡುವ ಮೂಲಕ ಶಾಂತಿ ಮತ್ತು ಸೌಹಾರ್ದತೆಯಿಂದ ಹಬ್ಬ ಆಚರಿಸಲು ಹಿರಿಯರು ಮುಂದಾಗಬೇಕು ಎಂದು ತಿಳಿಸಿದರು.
ಪಿಎಸ್ಐ ಅಶೋಕ ನಾಯಕ್ ಮಾತನಾಡಿ, ಬಕ್ರಿದ್ ಹಬ್ಬದ ಆಚರಣೆಯಲ್ಲಿ ಅನಗತ್ಯ ಗೊಂದಲಗಳಿಗೆ ಆಸ್ಪದ ನೀಡದೆ ಶಾಂತಿಯುತವಾಗಿ ಹಬ್ಬ ಆಚರಿಸಬೇಕು ಎಂದರು. ತ್ಯಾಗ ಮತ್ತು ಬಲಿದಾನದ ಸಂಕೇತವಾದ ಬಕ್ರಿದ್ ಹಬ್ಬವನ್ನು ಹಿಂದೂ-ಮುಸ್ಲಿಂ ಬಾಂಧವರು ಜೊತೆಯಾಗಿ ಆಚರಿಸುವ ಮೂಲಕ ಭಾವೈಕ್ಯತೆಗೆ ಮಾದರಿಯಾಗಬೇಕು ಎಂದು ಸಲಹೆ ನೀಡಿದರು.
ಮುಸ್ಲಿಂ ಸಮುದಾಯದ ಹಿರಿಯರಾದ ಆರ್.ಬಿ. ಪಕಾಲಿ ಮಾತನಾಡಿ, ಕೊಲ್ಹಾರ ಪಟ್ಟಣದಲ್ಲಿ ಹಿಂದೂ ಹಾಗೂ ಮುಸ್ಲಿಂ ಸಮುದಾಯದವರು ಶಾಂತಿ ಮತ್ತು ಸೌಹಾರ್ದತೆಯಿಂದ ಬದುಕುತ್ತಿದ್ದು, ಎಲ್ಲರೂ ಒಂದಾಗಿ ಹಬ್ಬ ಆಚರಿಸುತ್ತಿದ್ದೇವೆ ಎಂದರು.
ಅಲ್ಲಾಭಕ್ಷ ಬಿಜಾಪುರ ಮಾತನಾಡಿ, ಭಾವೈಕ್ಯತೆಗೆ ಚ್ಯುತಿ ಬರದಂತೆ ಸರ್ವರೂ ಬಕ್ರಿದ್ ಹಬ್ಬವನ್ನು ಆಚರಿಸುತ್ತೇವೆ ಎಂದು ಹೇಳಿದರು. ಇದೇ ವೇಳೆ, ಗೋ ಹತ್ಯೆ ಹೆಸರಿನಲ್ಲಿ ಉಂಟಾಗುವ ಗೊಂದಲಗಳು ತಪ್ಪಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಗೋವನ್ನು ರಾಷ್ಟ್ರೀಯ ಪ್ರಾಣಿಯನ್ನಾಗಿ ಘೋಷಿಸುವ ಕುರಿತು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಪಟ್ಟಣದ ಪ್ರಮುಖರಾದ ಉಸ್ಮಾನ್ ಪಟೇಲ್ ಖಾನ್, ಟಿ.ಟಿ. ಹಗೇದಾಳ ಹಾಗೂ ದಶರಥ ಈಟಿ ಮಾತನಾಡಿದರು.
ಈ ಸಂದರ್ಭದಲ್ಲಿ ಮುಖಂಡರಾದ ಉಸ್ಮಾನ್ ಪಟೇಲ್ ಖಾನ್, ಟಿ.ಟಿ. ಹಗೇದಾಳ, ಗುರುನಗೌಡ ಬಿರಾದಾರ, ದಶರಥ ಈಟಿ, ಎಂ.ಆರ್. ಕಲಾದಗಿ, ಡೊಂಗ್ರಿ ಕಟಬರ, ಸುಭಾಷ್ ಭಜಂತ್ರಿ, ಸುರೇಶ ಗಿಡ್ಡಪ್ಪಗೊಳ, ಪರಶುರಾಮ ಚಿಮ್ಮಲಗಿ, ಸಿಡ್ಲಪ್ಪ ತಳಗೇರಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

