ಉದಯರಶ್ಮಿ ದಿನಪತ್ರಿಕೆ
ಎಚ್ ಡಿ ಕೋಟೆ: ತಾಲೂಕಿನ ಹ್ಯಾಂಡ್ ಪೋಸ್ಟ್ ಸಮೀಪವಿರುವ ಯರಹಳ್ಳಿಯಲ್ಲಿ ಬೀದಿನಾಯಿಗಳ ಹಾವಳಿ ಮಿತಿಮೀರಿದೆ. ಕತ್ತಲು ಅವರಿಸಿದರೆ ಮನೆಯಿಂದ ಜನ ಹೊರಗಡೆ ಬರಲು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಅದ್ರಲ್ಲೂ ಚಿಕ್ಕ ಮಕ್ಕಳು, ವೃದ್ಧರ ಜೀವಕ್ಕೆ ನಾಯಿಗಳಿಂದ ಕಂಟಕ ಎದುರಾಗಿದೆ. ರಾತ್ರಿ ವೇಳೆ ಸಾಕು ಪ್ರಾಣಿಗಳ ಮೇಲೆ ನಾಯಿಗಳು ದಾಳಿ ನಡೆಸಿ ಬಲಿ ಪಡೆಯುತ್ತಿವೆ.
ತಾಲೂಕಿನ ಹ್ಯಾಂಡ್ ಪೋಸ್ಟ್ ಸಮೀಪವಿರುವ ಯರಹಳ್ಳಿಯಲ್ಲಿ ಸೋಮವಾರ ರಾತ್ರಿ ಬೀದಿನಾಯಿಯೊಂದು ಮೇಕೆಮರಿ ಮೇಲೆ ದಾಳಿ ಮಾಡಿ ತಿಂದು ಹಾಕಿದೆ. ಗ್ರಾಮದ ನಿವಾಸಿ ವೈ ಎಲ್ ಸದಾನಂದ ಅವರ ಪತ್ನಿ ಪವಿತ್ರಾ ಅವರಿಗೆ ಸೇರಿದ ಮೇಕೆ ಮರಿಯನ್ನು ದಾಳಿ ಮಾಡಿ ಸಾಯಿಸಿದೆ.. ನಾಯಿಗಳ ದಾಳಿಯಿಂದ ಆತಂಕಗೊಂಡಿರುವ ಕುಟುಂಬ ಬೀದಿನಾಯಿಗಳನ್ನು ಸೆರೆಹಿಡಿಯುವಂತೆ ಪುರಸಭೆ ಅಧಿಕಾರಿಗಳಿಗೆ ಒತ್ತಾಯಿಸಿದೆ. ಇತ್ತೀಚಿನ ದಿನಗಳಲ್ಲಿ ಬೀದಿನಾಯಿಗಳು ಜಾಸ್ತಿಯಾಗಿದ್ದು ಕೊಟ್ಟಿಗೆಯಲ್ಲಿ ಕಟ್ಟಿಹಾಕುವ ಸಾಕುಪ್ರಾಣಿಗಳ ದಾಳಿ ನಡೆಸುತ್ತಿವೆ. ಇದರಿಂದ ರೈತರು ಕಂಗಲಾಗಿದ್ದಾರೆ. ಹೀಗಾಗಿ ನಾಯಿಗಳನ್ನು ಸೆರೆಹಿಡಿದು ಬೇರೆಡೆಗೆ ಶಿಫ್ಟ್ ಮಾಡಬೇಕೆಂದು ರೈತ ಪರ್ವ ರಾಜ್ಯ ಕಾರ್ಯಧ್ಯಕ್ಷ ನವೀನ್ ಕುಮಾರ್ ಪುರಸಭೆಗೆ ಒತ್ತಾಯಿಸಿದ್ದಾರೆ.

