ಲೇಖನ
– ವೀಣಾ ಹೇಮಂತ್ ಗೌಡ ಪಾಟೀಲ್
ಮುಂಡರಗಿ
ಗದಗ ಜಿಲ್ಲೆ
ಉದಯರಶ್ಮಿ ದಿನಪತ್ರಿಕೆ
ಕೆಲವು ಮಕ್ಕಳು ಪರೀಕ್ಷೆಯ ಕೊನೆಯ ನಿಮಿಷದವರೆಗೂ ಪುಸ್ತಕದಲ್ಲಿ ಮುಳುಗಿರುತ್ತಾರೆ. ಪರೀಕ್ಷೆಯಲ್ಲಿ ಈ ಪ್ರಶ್ನೆ ಕೇಳಬಹುದು ಆ ಪ್ರಶ್ನೆ ಕೇಳಬಹುದು ಎಂದು ಆತಂಕದಿಂದ ಓದುತ್ತಲೇ ಇರುತ್ತಾರೆ. ಅವರು ನೂರಕ್ಕೆ 95ಕ್ಕೂ ಹೆಚ್ಚು ಅಂಕಗಳನ್ನು ಪಡೆಯುವುದು ಅಷ್ಟೇನೂ ದೊಡ್ಡ ವಿಷಯವಲ್ಲ.. ನೂರು ಪಡೆದರೂ ಅಚ್ಚರಿಯಿಲ್ಲ.
ಮತ್ತೆ ಕೆಲವು ಮಕ್ಕಳು ಶಾಲೆಯಲ್ಲಿ ಶಿಕ್ಷಕರು ಹೇಳಿದಷ್ಟನ್ನು ಮಾತ್ರ ಕೇಳಿರುತ್ತಾರೆ ಹಾಗೂ ಓದಿರುತ್ತಾರೆ. ಮನೆಯಲ್ಲಿ ಕೂಡ ಅವರು ಅಷ್ಟಾಗಿ ಓದುವುದಿಲ್ಲವಾದರೂ ಕೂಡ ಅತಿ ಹೆಚ್ಚು ಅಂಕಗಳನ್ನು ಗಳಿಸುತ್ತಾರೆ. ಪರೀಕ್ಷೆ ನಾಳೆ ಇದೆ ಎನ್ನುವಾಗ ಕೂಡ ಅತ್ಯಂತ ಆರಾಮಾಗಿ ಉಂಡು ತಿಂದು ನಕ್ಕು ನಲಿದು ಪರೀಕ್ಷೆಗೆ ಹೊರಡುತ್ತಾರೆ. ಉಳಿದವರು ಅವರನ್ನು ನೋಡಿ ಅದು ಹೇಗೆ ಸಾಧ್ಯ ಎಂದು ಆಶ್ಚರ್ಯ ಪಟ್ಟರೆ ಇವರು ಅದಕ್ಕೂ ಕೂಡ ತಲೆ ಕೆಡಿಸಿಕೊಳ್ಳದೆ ತಮ್ಮ ಪಾಡಿಗೆ ತಾವು ಸಂತೋಷವಾಗಿರುತ್ತಾರೆ. ಹಾಗಾದರೆ ಅತಿಯಾದ ಓದು ಹಾಗೂ ಅಂಕ ಗಳಿಕೆಗೆ ಸಂಬಂಧವಿಲ್ಲವೇ ಎಂದರೆ ತಜ್ಞ ಮನೋವಿಜ್ಞಾನಿಗಳು ಖಂಡಿತವಾಗಿಯೂ ಇಲ್ಲ ಎಂದು ಹೇಳುತ್ತಾರೆ.
ಈ ಹಿಂದೆ ಗುರುಕುಲ ಕಾಲದಿಂದಲೂ ನಮ್ಮಲ್ಲಿ ಕೆಲ ವಿದ್ಯಾರ್ಥಿಗಳು ಒಂದು ಬಾರಿ ಪಾಠ ಮಾಡಿದರೆ ಸಾಕು ಅದನ್ನು ನೆನಪಿಟ್ಟುಕೊಳ್ಳುತ್ತಾರೆ ಎಂದು ಹೇಳುತ್ತಿದ್ದರು ಅಂತಹ ವಿದ್ಯಾರ್ಥಿಗಳನ್ನು ಏಕ ಪಠ್ಯಗ್ರಾಹಿ ಎಂದು ಏಕ ಸಂಧಿಗ್ರಾಹಿ ಎಂದು ಕರೆಯುತ್ತಿದ್ದರು. ಬಹುಶಹ ಅವರ ಸದೃಢ ಹಾಗೂ ನಿರಾತಂಕವಾದ ಅವಿಚಲಿತ ಮನಸ್ಥಿತಿಯೇ ಇದಕ್ಕೆ ಕಾರಣ.

ಬುದ್ಧಿಜೀವಿಗಳು ಹಾಗೂ ನುರಿತ ತಜ್ಞರ ಪ್ರಕಾರ ಮಕ್ಕಳ ಈ ರೀತಿಯ ಅಂಕ ಗಳಿಸುವಿಕೆಗೆ ಕಾರಣ ಅವರ ಭಾವನಾತ್ಮಕ ಸ್ಥಿರತೆ, ಕೌಟುಂಬಿಕ ಪರಿಸರ, ಉತ್ತಮ ಪಾಲಕತ್ವ, ಒತ್ತಡರಾಹಿತ್ಯತೆ, ಒಳ್ಳೆಯ ನಿದ್ರೆ ಹಾಗೂ ಆತ್ಮವಿಶ್ವಾಸಗಳು ಕಾರಣ.
ಮನೆಯಲ್ಲಿ ಉತ್ತಮ ಹಾಗೂ ನೆಮ್ಮದಿಯ ವಾತಾವರಣವಿದ್ದು ಪಾಲಕರು ಮಕ್ಕಳಿಗೆ ಅವರ ಒಳಿತು ಕೆಡುಕುಗಳಲ್ಲಿಯೂ ಕೂಡ ಬೆಂಬಲ ನೀಡುವಂತಹ ವಾತಾವರಣವಿದ್ದರೆ ಆ ಮನೆಯ ಮಕ್ಕಳು ಒತ್ತಡ ರಹಿತರಾಗಿರುತ್ತಾರೆ. ತಮ್ಮ ಸೋಲುಗಳನ್ನು ಕೂಡ ಮುಕ್ತವಾಗಿ ಪಾಲಕರೊಂದಿಗೆ ಹಂಚಿಕೊಳ್ಳಲು ಅವರು ಹಿಂಜರಿಯುವುದಿಲ್ಲ. ಪಾಲಕರು ಕೂಡ ಅದನ್ನು ಅಷ್ಟೇ ಸಹಜವಾಗಿ ಸ್ವೀಕರಿಸಿ ತಮ್ಮ ಮಕ್ಕಳನ್ನು ಮತ್ತೆ ಮುಂದುವರೆಯುವಂತೆ ಪ್ರೋತ್ಸಾಹಿಸುವ ಕಾರಣ ಮಕ್ಕಳಲ್ಲಿ ಆತಂಕ ಹಾಗೂ ಒತ್ತಡಗಳು ಉಂಟಾಗುವುದಿಲ್ಲ. ಭಯ ನಿವಾರಣೆಯಾಗುತ್ತದೆ. ಒತ್ತಡವಿಲ್ಲದ ಬದುಕಿನಲ್ಲಿ ನೆಮ್ಮದಿಯ ನಿದ್ರೆ ಸಮಾಧಾನ ಚಿತ್ತತೆ ತಾನೇ ತಾನಾಗಿ ಸಿದ್ಧಿಸುತ್ತದೆ. ಇದು ಮಕ್ಕಳಲ್ಲಿ ಮಾನಸಿಕ ಸ್ಥಿರತೆ ಉಂಟಾಗಲು ಕಾರಣವಾಗುತ್ತದೆ. ಮಾನಸಿಕ ಸ್ಥಿರತೆಯನ್ನು ಸಾಧಿಸಿದ ಮಕ್ಕಳು ಅತ್ಯಂತ ಸಹಜವಾಗಿ ಹಾಗೂ ಧೈರ್ಯದಿಂದ ನಿಮ್ಮ ಬದುಕಿನ ನಿರ್ಧಾರಗಳನ್ನು ಕೈಗೊಳ್ಳುತ್ತಾರೆ ಹಾಗೂ ಯಶಸ್ವಿಯಾಗುವ ನಿಟ್ಟಿನಲ್ಲಿ ನಿರಂತರ ಪ್ರಯತ್ನಗಳನ್ನು ಮುಂದುವರೆಸುತ್ತಾರೆ. ಪಾಲಕರ ಧನಾತ್ಮಕ ಪ್ರೋತ್ಸಾಹ ಹಾಗೂ ಪ್ರಶಂಸೆಯಿಂದ
- ಮಕ್ಕಳು ತಪ್ಪು ಮಾಡಿದಾಗಲೂ ಕೂಡ ತಾವು ಸುರಕ್ಷಿತರು ಎಂಬ ಭಾವವನ್ನು ಹೊಂದುತ್ತಾರೆ. ಹಳೆಯ ತಪ್ಪುಗಳನ್ನು ಪುನರಾವರ್ತಿಸದೆ ಅವುಗಳಿಂದ ಪಾಠವನ್ನು ಕಲಿಯುತ್ತಾರೆ.
- ಆತ್ಮವಿಶ್ವಾಸವನ್ನು ವೃದ್ಧಿಸಿಕೊಳ್ಳುತ್ತಾರೆ. ಯಶಸ್ವಿಗೆ ಮಾರ್ಗ ಪ್ರಯತ್ನ ಪಡುವುದು ಎಂಬುದನ್ನು ಅರಿತಿರುತ್ತಾರೆ.
- ಭಯರಹಿತ ಕಲಿಕೆಯ ಅನುಭವವನ್ನು ತಮ್ಮದಾಗಿಸಿಕೊಳ್ಳುತ್ತಾರೆ.
- ಒಳ್ಳೆಯ ಕಲಿಕೆಯ ಹವ್ಯಾಸಗಳನ್ನು ರೂಢಿಸಿಕೊಳ್ಳುತ್ತಾರೆ. ಒತ್ತಡ ಮುಕ್ತ ಮತ್ತು ಆತಂಕರಹಿತ ವಾತಾವರಣದಲ್ಲಿ ಕಲಿಯುವ ಮಕ್ಕಳು
- ವಿಷಯಗಳನ್ನು ಅತ್ಯಂತ ಸುಲಭವಾಗಿ ಅರ್ಥೈಸಿಕೊಳ್ಳುತ್ತಾರೆ.
- ಬಾಯಿ ಪಾಠ ಮಾಡುವುದರ ಬದಲಾಗಿ ವಿಷಯದ ಕುರಿತು ಆಳವಾದ ಜ್ಞಾನವನ್ನು ಸಹಜವಾಗಿಯೇ ಹೊಂದುತ್ತಾರೆ.
- ಕಿರುಪರೀಕ್ಷೆಯೇ ಇರಲಿ, ದೊಡ್ಡ ಪರೀಕ್ಷೆಗಳೇ ಇರಲಿ ಯಾವುದೇ ರೀತಿಯ ಒತ್ತಡಗಳನ್ನು ಹೊಂದಿದೆ ಪರೀಕ್ಷೆಯನ್ನು ಸಂಭ್ರಮಿಸುತ್ತಾರೆ.
- ಪರೀಕ್ಷೆಗೆ ಮುನ್ನ ಕೂಡ ಒಳ್ಳೆಯ ನಿದ್ರೆಯನ್ನು ಮಾಡಲು ಅವರಿಗೆ ಸಾಧ್ಯವಾಗುತ್ತದೆ.
ಮಕ್ಕಳ ಭಾವನಾತ್ಮಕ ಮತ್ತು ಶೈಕ್ಷಣಿಕ ಕಲಿಕೆಯಲ್ಲಿ ಪಾಲಕತ್ವ ಕೂಡ ಬಹುಮುಖ್ಯ ಪಾತ್ರ ವಹಿಸುತ್ತದೆ ಎಂಬುದನ್ನು ಮನಶ್ಯಾಸ್ತ್ರಜ್ಞೆ ಡಯಾನ ಬೌಮ್ರಿಂಡ್
ಒತ್ತಿ ಹೇಳುತ್ತಾರೆ.
ಪಾಲಕರು ತಮ್ಮ ಮಕ್ಕಳ ಮೇಲೆ ವಿಪರೀತ ಒತ್ತಡವನ್ನು ಹೇರಿದಾಗ ಮಕ್ಕಳು ಸಹಜವಾಗಿಯೇ ಆತಂಕಕ್ಕೆ ಒಳಗಾಗುತ್ತಾರೆ. ಇದು ಅವರಲ್ಲಿ ಸೋಲಿನ ಭಯವನ್ನು ಮೂಡಿಸಿ ಭಾವನಾತ್ಮಕವಾಗಿ ಭಯ ಆತಂಕ ಹಾಗೂ ಒತ್ತಡಗಳಿಂದ ಬಳಲುತ್ತಾರೆ. ಮಕ್ಕಳು ವಿಪರೀತ ಒತ್ತಡಕ್ಕೆ ಒಳಗಾದಾಗ ಅವರ ಮೆದುಳಿನಲ್ಲಿ
ಒತ್ತಡದ ಹಾರ್ಮೋನುಗಳು ಎಂದೇ ಹೆಸರಾದ ಕಾರ್ಟಿಸೋಲ್ಗಳು ಹೆಚ್ಚಿನ ಪ್ರಮಾಣದಲ್ಲಿ ಬಿಡುಗಡೆಯಾಗುತ್ತವೆ.

ಈ ಒತ್ತಡದ ಹಾರ್ಮೋನುಗಳ ಪರಿಣಾಮವಾಗಿ ಮಕ್ಕಳು ತಮ್ಮ ಏಕಾಗ್ರಚಿತ್ತತೆಯನ್ನು ಕಳೆದುಕೊಳ್ಳುತ್ತಾರೆ. ಅದು ಅವರ ನೆನಪಿನ ಕೋಶಗಳ ಮೇಲೆ ಅತಿ ಹೆಚ್ಚಿನ ದುಷ್ಪರಿಣಾಮವನ್ನು ಉಂಟುಮಾಡುತ್ತದೆ ಹಾಗೂ ಅವರ ಸವಾಲುಗಳನ್ನು ಸ್ವೀಕರಿಸುವ ಹಾಗೂ ಅವುಗಳನ್ನು ನಿವಾರಿಸಿಕೊಳ್ಳುವ ಸಹಜವಾದ ಮಾನಸಿಕ ಶಕ್ತಿಯನ್ನು ಕಸಿದುಕೊಂಡು ಆ ಜಾಗದಲ್ಲಿ ಮತ್ತಷ್ಟು ಭಯ ಆತಂಕಗಳನ್ನು ಸೃಷ್ಟಿಸುತ್ತದೆ. ಇದು ಮಕ್ಕಳು ಅದೆಷ್ಟೇ ಹೊತ್ತು ಕುಳಿತು ಓದಿದರು ಪರಿಹಾರದವಾಗದ ಸಮಸ್ಯೆಯಾಗಿ ಕಂಡು ಬರುತ್ತದೆ ಆದರೆ ಸಮಸ್ಯೆಯ ಮೂಲ ಇರುವುದು ಎಲ್ಲಿ ಎಂಬುದನ್ನು ಅರಿಯುವ ಹಾಗೂ ಆ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುವ ಮೂಲಕ ಪಾಲಕರು, ಶಿಕ್ಷಕರು ಹಾಗೂ ಶಾಲಾ ಆಡಳಿತ ಮಂಡಳಿಯವರನಳ ಸರ್ಕಾರ ಹಾಗೂ ಬುದ್ಧಿಜೀವಿಗಳ ಸಹಯೋಗವು ಕಾರ್ಯನಿರ್ವಹಿಸಬೇಕಾದ ಅನಿವಾರ್ಯತೆ ಇದೆ.
ಮಕ್ಕಳ ಮಾನಸಿಕ ಆರೋಗ್ಯವನ್ನು ಕಾಯುವ ನಿಟ್ಟಿನಲ್ಲಿ ಒತ್ತಡರಾಹಿತ್ಯತೆ ಕೆಲಸ ಮಾಡುವ ಪ್ರಕ್ರಿಯೆಯನ್ನು ಮಕ್ಕಳ ಪಾಲಕರಿಗೆ ಮನದಟ್ಟು ಮಾಡಿಸುವ ಅವಶ್ಯಕತೆಯ ಅರಿವನ್ನು ಮೂಡಿಸಬೇಕು. ಇದರಿಂದ ಸುಸ್ಥಿರ ವಿದ್ಯಾರ್ಥಿ ಜೀವನವನ್ನು ಅನುಭವಿಸಿದ ನಮ್ಮ ಮಕ್ಕಳು ಭವಿಷ್ಯದಲ್ಲಿ ಅತ್ಯುತ್ತಮ ನಾಗರಿಕರಾಗಿ ಸಮಾಜವನ್ನು ಮುನ್ನಡೆಸಲು ಸಾಧ್ಯ.
ಏನಂತೀರಾ ಸ್ನೇಹಿತರೆ ?


